ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎಗೆ ಜಯ | 2028ರ ವಿಧಾನಸಭಾ ಚುನಾವಣೆಗೆ ನೀಡಿರುವ ಸ್ಪಷ್ಟ ದಿಕ್ಸೂಚಿ : ವಿಜಯೇಂದ್ರ
ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದ ನಾಲ್ಕೂ ಕ್ಷೇತ್ರಗಳಲ್ಲಿ ಎನ್.ಡಿ.ಎ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಿರುವುದು ಕರ್ನಾಟಕದಲ್ಲಿ ನಡೆಯಲಿರುವ 2028ರ ವಿಧಾನಸಭಾ ಚುನಾವಣೆಗೆ ನೀಡಿರುವ ಸ್ಪಷ್ಟ ದಿಕ್ಸೂಚಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದ ನಾಲ್ಕೂ ಕ್ಷೇತ್ರಗಳಲ್ಲಿ ಎನ್.ಡಿ.ಎ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಿದ್ದಾರೆ. ಈ ಮೂಲಕ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಲುಷಿತಗೊಳಿಸಲು ಯತ್ನಿಸುತ್ತಿರುವ ಕ್ಷುದ್ರ ರಾಜಕೀಯ ವ್ಯವಸ್ಥೆಗೆ ತಕ್ಕ ಉತ್ತರ ನೀಡಿದ್ದಾರೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿಜೀ ಅವರ ನಾಯಕತ್ವವನ್ನು ಬೆಂಬಲಿಸುವ ಮೂಲಕ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಹಾಗೂ ಅಭಿವೃದ್ಧಿಶೂನ್ಯ ಕಾಂಗ್ರೆಸ್ ಸರ್ಕಾರವನ್ನು ಧಿಕ್ಕರಿಸಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಈ ಚುನಾವಣಾ ಫಲಿತಾಂಶ ರಾಷ್ಟ್ರದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಪ್ಪುಮಸಿ ಬಳಿದು, ದಾಳಿ ನಡೆಸಲು ಹುನ್ನಾರ ನಡೆಸುತ್ತಿರುವ ಶಕ್ತಿಗಳ ವಿರುದ್ಧ ಜನತೆ ನೀಡಿರುವ ತೀರ್ಪಾಗಿದೆ. ಜೊತೆಗೆ, ಕರ್ನಾಟಕದಲ್ಲಿ ನಡೆಯಲಿರುವ 2028ರ ಚುನಾವಣೆಗೆ ನೀಡಿರುವ ಸ್ಪಷ್ಟ ದಿಕ್ಸೂಚಿಯಾಗಿದೆ. ಮತ ಕಳವು, ಎಸ್ಐಆರ್ ವಿರೋಧದ ಹೆಸರಿನಲ್ಲಿ ಚುನಾವಣಾ ವ್ಯವಸ್ಥೆಯ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ಸಿಗರಿಗೆ ನೀಡಿದ ದಿಟ್ಟ ಉತ್ತರವೂ ಆಗಿದೆ ಎಂದು ತಿಳಿಸಿದ್ದಾರೆ.
ಇವಿಎಂ ಅನುಮಾನಿಸುತ್ತಿದ್ದ, ಬ್ಯಾಲೆಟ್ ಮತದಾನವನ್ನು ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಪ್ರತಿಕ್ರಿಯಿಸಿರುವ ಪರಿ ‘ನೀವು ಯಾವ ಮಾರ್ಗದಲ್ಲಿಯೇ ಬಂದರೂ ಇದೇ ನಮ್ಮ ಉತ್ತರ’…ಎನ್ನುವ ರೀತಿಯಲ್ಲಿದೆ. ಇನ್ನಾದರೂ ರಾಹುಲ್ ಗಾಂಧಿಯವರಾದಿಯಾಗಿ ಇಂಡಿ ಒಕ್ಕೂಟದ ಮುಖಂಡರೆಲ್ಲರೂ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ, ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ಒಪ್ಪಿಕೊಳ್ಳಲಿ. ಹಾಗೂ ಭಾರತದ ಸಾಂವಿಧಾನಿಕ ವ್ಯವಸ್ಥೆಯನ್ನು ಗೌರವಿಸಲಿ. ಇಲ್ಲದಿದ್ದರೆ ಭವಿಷ್ಯತ್ತಿನಲ್ಲಿ ದೇಶದ ಜನತೆ ನಿಮಗೆ ಮತಪತ್ರದ ಮೂಲಕವೂ ದಿಟ್ಟ ಉತ್ತರ ನೀಡಲಿದ್ದಾರೆ, ಇವಿಎಂ ಯಂತ್ರದ ಮೂಲಕವೂ ನೇರ ಉತ್ತರ ನೀಡಿ ವಾಸ್ತವ ಫಲಿತಾಂಶವನ್ನು ಪ್ರಮಾಣೀಕರಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಪಕ್ಷಗಳ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸಿದ ಪದವೀಧರರು ಮತ್ತು ಶಿಕ್ಷಕ ಮತದಾರರಿಗೆ ಕೃತಜ್ಞತಾಪೂರ್ವಕ ವಂದನೆಗಳು ಎಂದು ತಿಳಿಸಿದ್ದಾರೆ. ವಿಜಯಶಾಲಿಗಳಾದ ಕೆ.ಎಂ.ಸುರೇಶ್, ಎಸ್.ವಿ.ಸಂಕನೂರು, ಶಶಿಲ್ ಜಿ. ನಮೋಶಿ ಮತ್ತು ಎ.ಪಿ.ರಂಗನಾಥ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಚುನಾವಣೆಯ ಗೆಲುವಿಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ಬಿಜೆಪಿ-ಕರ್ನಾಟಕ ಹೃದಯತುಂಬಿ ವಂದಿಸಿ ಅಭಿನಂದಿಸುತ್ತದೆ ಎಂದು ತಿಳಿಸಿದ್ದಾರೆ.