×
Ad

ಸಿಎಂ ಸಿದ್ದರಾಮಯ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಈ ಕಾರಣ ಕೊಟ್ಟ ವಿಶ್ವೇಶ್ವರ ಭಟ್

ರಾಜ್ಯ ಸರಕಾರ ಜಾರಿ ಮಾಡುವ ಯೋಜನೆಗಳೆಲ್ಲವೂ 'ಬಾರ್ ಆ್ಯಂಡ್ ರೆಸ್ಟೋರೆಂಟ್' ಆದಾಯದ ಮೇಲೆ ನಿಂತಿದ್ದು, ಇದು ದುರಂತವೇ ಸರಿ ಎಂದು ಪತ್ರಕರ್ತ ವಿಶ್ವೇಶ್ವರ ಭಟ್ ಟೀಕಿಸಿದ್ದಾರೆ.

Update: 2023-07-22 18:37 IST

ಬೆಂಗಳೂರು: ರಾಜ್ಯ ಸರಕಾರ ಜಾರಿ ಮಾಡುವ ಯೋಜನೆಗಳೆಲ್ಲವೂ 'ಬಾರ್ ಆ್ಯಂಡ್ ರೆಸ್ಟೋರೆಂಟ್' ಆದಾಯದ ಮೇಲೆ ನಿಂತಿದ್ದು, ಇದು ದುರಂತವೇ ಸರಿ ಎಂದು ಪತ್ರಕರ್ತ ವಿಶ್ವೇಶ್ವರ ಭಟ್ ಟೀಕಿಸಿದ್ದಾರೆ.

ಶನಿವಾರ ನಗರದ ಪುರಭವನ ಸಭಾಂಗಣದಲ್ಲಿ ವಿಶ್ವವಾಣಿ ಪುಸ್ತಕ ವತಿಯಿಂದ ಹೊರತಂದಿದ್ದ `ಸಂಪಾದಕರ ಸದ್ಯಶೋಧನೆ-1', `ಸಂಪಾದಕರ ಸದ್ಯಶೋಧನೆ-2', `ಸಂಪಾದಕರ ಸದ್ಯಶೋಧನೆ-3' ಹಾಗೂ ಕಿರಣ್ ಉಪಾಧ್ಯಾಯ ಅವರ ‘ಹೊರದೇಶವಾಸಿ’, ರೂಪಾ ಗುರುರಾಜ್ ಅವರ ‘ಒಂದೊಳ್ಳೆ ಮಾತು-2’, ಶಿಶಿರ್ ಹೆಗಡೆ ಅವರ ‘ಶಿಶಿರ ಕಾಲ’ ಪುಸ್ತಕಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇವತ್ತು ಸರಕಾರಕ್ಕೆ ಪುಸ್ತಕದ ಅಂಗಡಿಗಳಿಂದ ಯಾವುದೇ ಆದಾಯವಿಲ್ಲ. ಆದರೆ, ಈ ಸರಕಾರದ ಯೋಜನೆಗಳು ನಿಂತುಕೊಂಡಿರುವುದೇ ಬಾರ್ ಅಂಡ್ ರೆಸ್ಟೋರೆಂಟ್ ಆದಾಯದ ಮೇಲೆಯೇ. ಇದು ಬಹಳ ದುರ್ದೈವ ಹಾಗೂ ತಲೆತಗ್ಗಿಸುವ ಸಂಗತಿಯಾಗಿದೆ ಎಂದರು.

ಈಡೀ ಕರ್ನಾಟಕದಲ್ಲಿ ನೋಡಿದರೆ ಕನ್ನಡ ಪುಸ್ತಕ ಮಳಿಗೆಗಳ ಸಂಖ್ಯೆ ಬರೀ 42ರಷ್ಟಿದೆ. ಅಷ್ಟೇ ಅಲ್ಲದೆ, ಕನ್ನಡ ಪುಸ್ತಕ ಮಳಿಗೆ ಇಲ್ಲದೆ ಇರುವ ಜಿಲ್ಲೆಗಳೂ ನಮ್ಮ ರಾಜ್ಯದಲ್ಲಿವೆ. ಬೆಂಗಳೂರಿನಿಂದ ಕೇವಲ 80 ಕಿಲೋ ಮೀಟರ್ ದೂರದಲ್ಲಿರುವ ಕೋಲಾರದಲ್ಲಿಯೂ ಒಂದೂ ಕನ್ನಡ ಪುಸ್ತಕ ಮಳಿಗೆಯೇ ಇಲ್ಲ. ಆದರೆ, ರಾಜ್ಯದಲ್ಲಿ 24 ಸಾವಿರ ಬಾರ್ ಅಂಡ್ ರೆಸ್ಟೋರೆಂಟ್‍ಗಳಿವೆ. ಈ ರೀತಿಯ ಗಂಭೀರ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತರಬೇಕಿತ್ತು ಎನ್ನುವ ಉದ್ದೇಶ ನನ್ನಲ್ಲಿತ್ತು ಎಂದು ಹೇಳಿದರು.

ಸಾಮಾನ್ಯವಾಗಿ ಪುಸ್ತಕ ಬಿಡುಗಡೆ ಸಾಹಿತಿಗಳು ಮಾಡುತ್ತಾರೆ. ಆದರೆ, ಈ ಸಾಹಿತಿಗಳು ಎಷ್ಟೊಂದು ಮಾತನಾಡಿದರೂ ಯಾವುದೇ ಪ್ರಯೋಜನ ಆಗುವುದಿಲ್ಲ. ಹಾಗಾಗಿ, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕನ್ನಡ ಪುಸ್ತಕಗಳ ಸಮಸ್ಯೆ ಪ್ರಸ್ತಾಪಿಸಿದರೆ, ಅದು ಪರಿಣಾಮಕಾರಿ ಆಗಬಹುದು ಎನ್ನುವ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನ ನೀಡಿದ್ದೆ. ಅನಿವಾರ್ಯ ಕಾರಣಗಳಿಂದ ಅವರು ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ವಿಶ್ವೇಶ್ವರ ಭಟ್ ಹೇಳಿದರು.

ಕನ್ನಡ ಪುಸ್ತಕ ಲೋಕ ಇಂದು ಬರಡಾಗಿದೆ. ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆ ಇದ್ದರೂ 6 ಸಾವಿರ ಪುಸ್ತಕಗಳು ಮಾರಾಟವಾಗದೆ ಇರುವುದು ದುರಂತವಾಗಿದೆ. ಈ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿಗಳಿಗೆ ತಿಳಿಸುವ ಉದ್ದೇಶದಿಂದ ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ರಾಜಕಾರಣಿಗಳನ್ನು ಕರೆದೆ ಎಂಬುವುದನ್ನು ಮೊದಲು ಸ್ಪಷ್ಟ ಪಡಿಸುತ್ತೆನೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಬರಹಗಾರ ರಾಧಕೃಷ್ಣ ಭಡ್ತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News