×
Ad

“ಪ್ರಾಂಜಲ್ ನ ಕರೆಗಾಗಿ ಕಾಯುತ್ತಿದ್ದೆವು, ಆದರೆ ಈಗ ಆತನ ಪಾರ್ಥಿವ ಶರೀರ ಸ್ವೀಕರಿಸಲು ಹೋಗುತ್ತಿದ್ದೇವೆ”: ಹುತಾತ್ಮ ಕನ್ನಡಿಗ ಯೋಧನ ತಂದೆ ಕಣ್ಣೀರು

Update: 2023-11-23 21:04 IST

ಎಂ.ವಿ. ಪ್ರಾಂಜಲ್

ಬೆಂಗಳೂರು: ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಅವರು ತನ್ನ ಪತ್ನಿಗೆ ಕೊನೆಯ ಬಾರಿಗೆ ಕಳುಹಿಸಿದ ಸಂದೇಶದಲ್ಲಿ ತಾನು ಕಾರ್ಯಾಚರಣೆಯೊಂದಕ್ಕೆ ತೆರಳುತ್ತಿರುವುದಾಗಿಯೂ ಗುರುವಾರ ಮತ್ತೆ ಫೋನ್ ಕರೆ ಇಲ್ಲವೇ ಮೆಸೇಜ್ ಮಾಡುವುದಾಗಿಯೂ ತಿಳಿಸಿದ್ದರು. ಆದರೆ ಬುಧವಾರ ನಮಗೆ ಕಮಾಂಡ್ ಸೆಂಟರ್ನಿಂದ ಆತನ ನಿಧನದ ಸುದ್ದಿ ದೊರೆಯಿತು. ನಮಗೆ ಇಡೀ ಜಗತ್ತೇ ನುಚ್ಚುನೂರಾದಂತೆ ಅನಿಸಿತು ಎಂದು ಪ್ರಾಂಜಲ್ ನ ತಂದೆ ಎಂ.ವೆಂಕಟೇಶ್ ಗುರುವಾರ ದುಃಖತಪ್ತರಾಗಿ ಹೇಳುತ್ತಾರೆ.

‘‘ ನಾಲ್ಕೈದು ದಿನಗಳ ಹಿಂದೆ ನಾನು ಪುತ್ರನ ಜೊತೆ ಮಾತನಾಡಿದ್ದೆ. ಆತ ಕೊನೆಯ ಸಂದೇಶವನ್ನು ಆದಿತಿಗೆ ಕಳುಹಿಸಿದ್ದನು’’ ಎಂದು ವೆಂಕಟೇಶ್ ಹೇಳುತ್ತಾರೆ. ರಜೌರಿಯಲ್ಲಿ ನಡೆಯಲಿರುವ ಕಾರ್ಯಾಚರಣೆಯ ಬಗ್ಗೆಯೂ ಆತ ತನಗೆ ತಿಳಿಸಿದ್ದ. ಅಲ್ಲದೆ ಗುರುವಾರದವರೆಗೂ ತಾನು ಸಂಪರ್ಕಕ್ಕೆ ಸಿಗಲಾರೆನೆಂದೂ ಆತ ತಿಳಿಸಿದ್ದ. ನಾವು ಆತನ ದೂರವಾಣಿ ಕರೆಗಾಗಿ ಕಾಯುತ್ತಿದ್ದೆವು. ಆದರೆ ಈಗ ನಾವು ಆತನ ಮೃತದೇಹವನ್ನು ಸ್ವೀಕರಿಸಲು ಹೋಗುತ್ತಿದ್ದೇವೆ’’ ಎಂದವರು ಹೇಳಿದ್ದಾರೆ.

29 ವರ್ಷ ವಯಸ್ಸಿನ ಪ್ರಾಂಜಲ್ ವೆಂಕಟೇಶ್ ಹಾಗೂ ಅನುರಾಧಾ ದಂಪತಿಯ ಏಕೈಕ ಪುತ್ರ. ಅವರ ಪತ್ನಿ ಆದಿತಿ, ಚೆನ್ನೈನ ಐಐಟಿಯಲ್ಲಿ ಪಿಎಚ್ಡಿ ಅಧ್ಯಯನ ಮಾಡುತ್ತಿದ್ದಾರೆ. ವೆಂಕಟೇಶ್ ಅವರು ಮಂಗಳೂರಿನ ಎಂಆರ್ಪಿಎಲ್ ನ ಮಾಜಿ ಆಡಳಿತ ನಿರ್ದೇಶಕರು.

2021ರಲ್ಲಿ ಪ್ರಾಂಜಲ್ ಅವರು ಆದಿತಿಯವರನ್ನು ವಿವಾಹವಾಗಿದ್ದರು. ಇಬ್ಬರೂ ತಮ್ಮ ತಮ್ಮ ವೃತ್ತಿಗಳಲ್ಲಿ ವ್ಯಸ್ತರಾಗಿದ್ದರು. ಡಿಸೆಂಬರ್ 9ರಂದು ಪ್ರಾಂಜಲ್ ಮೇಜರ್ ಆಗಿ ಭಡ್ತಿ ಪಡೆಯುವವರಿದ್ದರು ಎಂದು ವೆಂಕಟೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News