×
Ad

ಕೊಲೆಯಾದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ನಿರ್ದೇಶಕ ಓಂ ಪ್ರಕಾಶ್ ಯಾರು?

Update: 2025-04-21 11:20 IST

ಓಂ ಪ್ರಕಾಶ್

ಬೆಂಗಳೂರು: ಕರ್ನಾಟಕದ ಮಾಜಿ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹವು ಎಪ್ರಿಲ್ 21 ರಂದು ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

68 ವರ್ಷದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರನ್ನು ಕೊಲೆ ಪ್ರಕರಣ ಸಂಬಂಧ ಪ್ರಕಾಶ್ ಅವರ ಪತ್ನಿ ಮತ್ತು ಪುತ್ರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆಯ ಬಗ್ಗೆ ಪತ್ನಿ ಪಲ್ಲವಿ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅವರ ಮೂರು ಅಂತಸ್ತಿನ ಮನೆಯ ನೆಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಓಂ ಪ್ರಕಾಶ್ಪ ಅವರ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಎಸಿಪಿ) ವಿಕಾಶ್ ಕುಮಾರ್ ವಿಕಾಶ್ ಅವರು, ಓಂ ಪ್ರಕಾಶ್ ಅವರ ಪುತ್ರ ದೂರು ದಾಖಲಿಸಿದ್ದಾರೆ. ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕೆ ಅನುಗುಣವಾಗಿ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

"ದೈಹಿಕ ಹಲ್ಲೆ ನಡೆದಿದೆ. ಆಯುಧವನ್ನು ಬಳಸಲಾಗಿದೆ. ದೇಹದಿಂದ ಸಾಕಷ್ಟು ರಕ್ತ ಹರಿದಿದೆ. ಹೆಚ್ಚಿನ ತನಿಖೆಯ ನಂತರ ಈ ಕುರಿತು ಮಾಹಿತಿ ಸಿಗಲಿದೆ" ಎಂದು ಅವರು ಹೇಳಿದ್ದಾರೆ.

ಕೆಲವು ವರದಿಗಳ ಪ್ರಕಾರ ನಿವೃತ್ತ ಡಿಜಿಪಿ ಈ ಹಿಂದೆ ತಮ್ಮ ಆಪ್ತರಿಂದಲೇ ತಮಗೆ ಜೀವ ಬೆದರಿಕೆ ಇರುವ ಕುರಿತು ಕಳವಳ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಕುಟುಂಬದ ನಡುವೆ ಆಸ್ತಿ ವಿವಾದ ಇರುವುದರಿಂದ ಓಂ ಪ್ರಕಾಶ್ ಅವರ ನಿಕಟವರ್ತಿಗಳೇ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಓಂ ಪ್ರಕಾಶ್ ಯಾರು?

► ಓಂ ಪ್ರಕಾಶ್ 1981 ರ ಬ್ಯಾಚ್‌ ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿದ್ದರು.

► ಓಂ ಪ್ರಕಾಶ್ ಬಿಹಾರದ ಚಂಪಾರಣ್ ಮೂಲದವರು

► ಓಂ ಪ್ರಕಾಶ್ ಅವರು ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

► ಅವರು ಹರಪನಹಳ್ಳಿಯಲ್ಲಿ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ತಮ್ಮ ಪೊಲೀಸ್ ವೃತ್ತಿಜೀವನವನ್ನು ಪ್ರಾರಂಭಿಸಿದರು.

► ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿಯೂ ಸೇವೆ ಸಲ್ಲಿಸಿದ್ದರು.

► ಓಂ ಪ್ರಕಾಶ್ ಅವರು ರಾಜ್ಯದ ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆಗಿಯೂ ಸೇವೆ ಸಲ್ಲಿಸಿದ್ದಾರೆ.

► ರಾಜ್ಯ ಲೋಕಾಯುಕ್ತ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಅಪರಾಧ ತನಿಖಾ ಇಲಾಖೆ (ಸಿಐಡಿ) ಯಲ್ಲಿಯೂ ಓಂ ಪ್ರಕಾಶ್ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.

► ಮಾರ್ಚ್ 1, 2015 ರಂದು ಓಂ ಪ್ರಕಾಶ್ ಅವರು ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕವಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News