ಮುಳ್ಳು ಕಿತ್ತ ಬಂಡಾಯಗಳು ಬೇರು ಕೀಳುವ ಕ್ರಾಂತಿಯಾಗಬಲ್ಲವೇ?

Update: 2026-08-12 11:40 IST

ಶತ್ರುವಿನ ದಾಳಿ ವ್ಯವಸ್ಥಿತವಾಗಿದೆ. ಸಮಗ್ರವಾಗಿದೆ ಹಾಗೂ ಯೋಜಿತವಾಗಿದೆ.

ಆದರೆ ಅದರ ವಿರುದ್ಧ ಕಾಲಕಾಲಕ್ಕೆ ತಮಗೆ ನೋವುಂಟು ಮಾಡಿದ ಮುಳ್ಳುಗಳನ್ನು ಕೀಳುವ ಬಂಡಾಯಗಳಾಗಿ ಸ್ಫೋಟಗೊಳ್ಳುತ್ತಿರುವ ವಿವಿಧ ಜನವರ್ಗಗಳ ಬಂಡಾಯಗಳು ಈ ಮುಳ್ಳುಗಳ ತಾಯಿ ಬೇರಾದ ಫ್ಯಾಶಿಸ್ಟ್ ಆರ್ಥಿಕ-ಸಾಮಾಜಿಕ-ರಾಜಕೀಯ ಆಳ್ವಿಕೆಯನ್ನೇ ಬದಲಿಸುವ ಕ್ರಾಂತಿಗಳಾಗಿ ಬದಲಾಗುತ್ತಿಲ್ಲ.

ಹೀಗಾಗಿ ಕಳೆದ 12 ವಷರ್ಗಳ ಬೃಹತ್ ಹೋರಾಟಗಳನ್ನು ಹಿಂದಿರುಗಿ ನೋಡಿದರೆ ಆಯಾ ಹೋರಾಟಗಳು ಗೆಲುವಿನ ಬೀಜದಲ್ಲೇ ಸೋಲನ್ನು ಕೂಡ ಮೋದಿ ಪ್ರಭುತ್ವ ಕಸಿ ಮಾಡಿರುವುದು ಅರಿವಾಗುತ್ತದೆ.

ಭಾರತದಲ್ಲಿ ಬೇರು ಬಿಟ್ಟಿರುವ ಮೋದಿ ನೇತೃತ್ವದ ಸಂಘಿ ಫ್ಯಾಶಿಸ್ಟ್ ಪ್ರಭುತ್ವ ಭಾರತದ ಮೇಲೆ ಸ್ಮಶಾನ ಮೌನ ಹೇರಲು ಕಳೆದ 12 ವರ್ಷಗಳಿಂದ ನಿರಂತರ ಪ್ರಯತ್ನಿಸುತ್ತಲೇ ಇದೇ... ಆದರೆ ಅದರ ವಿರುದ್ಧ ಭಾರತ ಕಾಲಕಾಲಕ್ಕೆ ಭೀತಿ ತೊರೆದು ಮಾತಾಡುತ್ತಲೂ, ಪ್ರತಿರೋಧಿಸುತ್ತಲೂ ಬಂದಿದೆ..

ಅದರ ಇತ್ತೀಚಿನ ಉದಾಹರಣೆಯೇ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ-ಯುವಜನ ಬಂಡಾಯ. ಅದರಲ್ಲಿ ವಂಚಿತ ನೀಟ್ ವಿದ್ಯಾರ್ಥಿಗಳ ಜೊತೆಗೆ ಮೋದಿ ಸರಕಾರದಿಂದ ಅತಿ ಹೆಚ್ಚು ವಂಚಿತರಾದ 20-29 ವಯಸ್ಸಿನ ಬಡ ಹಾಗೂ ತಳ ಮಧ್ಯಮ ವರ್ಗದ ತಳ ಸಮುದಾಯದ ನಿರುದ್ಯೋಗಿ NEET (Not in Employment, Education, Training) ಯುವಜನರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಯುವ ಕೆಚ್ಚು ಇದೀಗ ಜಾರ್ಖಂಡ್ ರಾಂಚಿಯಲ್ಲೂ ಪ್ರತಿಧ್ವನಿಸುತ್ತಿದೆ. ಆದರೆ ಜಾರ್ಖಂಡ್‌ನ ಕಾಂಗ್ರೆಸ್ ಬೆಂಬಲಿತ ಸೋರೇನ್ ಸರಕಾರ ದಿಲ್ಲಿ ದಂಗೆಯಿಂದ ಯಾವ ಪಾಠವನ್ನೂ ಕಲಿಯದೆ ಬಿಜೆಪಿಯ ಅಮಿತ್ ಶಾ ಮಾದರಿಯಲ್ಲೇ ರಾಂಚಿ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದೆ.

ಈ ವಿದ್ಯಮಾನ ಸಮಸ್ಯೆ ಕೇವಲ ಒಂದು ಪಕ್ಷಕ್ಕೆ ಅಥವಾ ಪೇಪರ್ ಲೀಕ್ ಗೆ ಮಾತ್ರ ಸೀಮಿತವಾದದ್ದಲ್ಲವೆಂದು ನಿರೂಪಿಸುತ್ತಿದೆ ಹಾಗೂ ಸಮಸ್ಯೆಯ ಮೂಲ ಕೇವಲ ಶಿಕ್ಷಣ ನೀತಿಗಳಲ್ಲಿ ಮಾತ್ರ ಇರುವುದಲ್ಲ ಎಂಬುದನ್ನು ಕೂಡ ಎತ್ತಿ ತೋರುತ್ತಿದೆ.

ಹಾಗೆ ನೋಡಿದರೆ ದಿಲ್ಲಿ ಮತ್ತು ರಾಂಚಿಯ ಹೋರಾಟಗಳು ಪೇಪರ್ ಲೀಕ್ ಸಮಸ್ಯೆಗಳಿಂದ ಶುರುವಾದರೂ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಸರಕಾರದ ಭ್ರಷ್ಟತೆ ಮತ್ತು ಸ್ವಜನ ಮತ್ತು ಸ್ವಪಕ್ಷಪಾತಿತನದ ವಿರುದ್ಧದ ಹೋರಾಟವಾಗಿ ಬದಲಾಯಿತು.

ವಾಸ್ತವವಾಗಿ ಜುಲೈ 20ರ ನಂತರ ದಿಲ್ಲಿ ಹೋರಾಟಕ್ಕೆ ಸಂಖ್ಯೆ ಮತ್ತು ಸಮರ ಶೀಲತೆ ತಂದುಕೊಟ್ಟದ್ದು ಉತ್ತರ ಭಾರತದ ಹಲವು ರಾಜ್ಯಗಳಿಂದ ಹರಿದುಬಂದ ಎರಡನೇ ಬಗೆಯ NEET ಯುವಸಮುದಾಯವೇ. ಅಂದರೆ ಅವಕಾಶ, ಶಿಕ್ಷಣ ಮತ್ತು ಉದ್ಯೋಗ ವಂಚಿತ ತಳ ಸಮುದಾಯಗಳ ಹಾಗೂ ಕೆಳಮಧ್ಯಮವರ್ಗಗಳ ಯುವಜನರೇ.

ಪೇಪರ್ ಲೀಕ್ ಸಮಸ್ಯೆಯಿಂದ ಶುರುವಾದರೂ ಈ ಚಳವಳಿಯೂ ಕಾಡ್ಗಿಚ್ಚಿನಂತೆ ಇತರ ಸಮುದಾಯ ಮತ್ತು ವರ್ಗಗಳಿಗೂ ಮತ್ತು ರಾಜ್ಯಗಳಿಗೂ ಹರಡುತ್ತಿರುವುದನ್ನು ಕಂಡೇ ಮೋದಿ ಸರಕಾರ ಬಾಯಿ ಬಿಚ್ಚಲೇ ಬೇಕಾದ ಅನಿವಾರ್ಯತೆ ಉಂಟಾಯಿತು. ಪಂಜಾಬ್‌ನ ಅತ್ಯಂತ ಪ್ರಬಲ ಬಿಕೆಯು -ಉಗ್ರಹಾನ್ ಬಣ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತಾ ಜುಲೈ 27ಕ್ಕೆ ಸಾವಿರಾರು ಟ್ರ್ಯಾಕ್ಟರ್‌ಗಳ ದಿಲ್ಲಿ ಚಲೋ ಕರೆಕೊಟ್ಟಿದ್ದು ಹೋರಾಟಕ್ಕೆ ಸ್ಪಂದಿಸಲೇ ಬೇಕಾದ ಮತ್ತೊಂದು ತುರ್ತನ್ನು ಸೃಷ್ಟಿಸಿತು. ಈ ಎಲ್ಲಾ ಕಾರಣಗಳಿಂದಾಗಿ ಚಳವಳಿಯ ಕೆಲವಾದರೂ ಬೇಡಿಕೆಗಳನ್ನು ಈಡೇರಿಸಲೇ ಬೇಕಾಯಿತು. ಮೊತ್ತ ಮೊದಲಬಾರಿಗೆ ಜನಹೋರಾಟಕ್ಕೆ ಮಣಿದು ಮೋದಿ ಸರಕಾರ ತನ್ನ ಮಂತ್ರಿ ಧರ್ಮೇಂದ್ರ ಪ್ರಧಾನ್‌ರಿಂದ ರಾಜೀನಾಮೆ ಪಡೆದುಕೊಳ್ಳಲೇ ಬೇಕಾಯಿತು.

ಇದು ಸಹಜವಾಗಿಯೇ ಭಾರತದ ಸಂತ್ರಸ್ತ ಜನರಲ್ಲಿ ಹೊಸ ಉತ್ಸಾಹ ಮತ್ತು ಹುಮ್ಮಸ್ಸನ್ನು ಮೂಡಿಸಿದೆ.

ದಮನಕಾಂಡ-ಭೇದ ಮತ್ತು ದಂಡ

ಆದರೆ ಯಾವ ಪ್ರಭುತ್ವವೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಚಳವಳಿಯನ್ನು ಬೆಳೆಯಲು ಬಿಡುವುದಿಲ್ಲ. ಅದರಲ್ಲೂ ಇದು ಮೋದಿ ನೇತೃತ್ವದ ಫ್ಯಾಶಿಸ್ಟ್ ಸರ್ವಾಧಿಕಾರಿ ಸರಕಾರ!

ಪ್ರಧಾನ್ ರಾಜೀನಾಮೆ ಕೊಟ್ಟ ದಿನದಿಂದಲೇ ಚಳವಳಿಗೆ ಸಿಕ್ಕ ಜನಮಾನ್ಯತೆಯನ್ನು ಅಮಾನ್ಯಗೊಳಿಸಲು ತನ್ನ ತುತ್ತೂರಿ ಮಾಧ್ಯಮಗಳ ಮೂಲಕ ವಿವಿಧ ಬಗೆಯ ಅಪಪ್ರಚಾರಗಳನ್ನು ಪ್ರಾರಂಭಿಸಿದೆ. ಮತ್ತೊಂದು ಕಡೆ ಪೊಲೀಸ್ ದಮನವನ್ನು ಪ್ರಾರಂಭಿಸಿದೆ.

ತಾನು ಏನೇ ಮಾಡಿದರೂ ತನ್ನ ಪರವಾಗಿಯೇ ಇದ್ದೇ ಇರುತ್ತದೆ ಎಂದು ನಂಬಿಕೊಂಡಿದ್ದ ವರ್ಗ ಮತ್ತು ಪೀಳಿಗೆಯನ್ನು ಮನಒಲಿಸಲು ಆರೆಸ್ಸೆಸ್ ಭಾಗವತರ ಮೂಲಕವೂ ಪ್ರಯತ್ನಿಸುತ್ತಿದೆ. ಮುಂದಿನ ವಾರ ಬಿಜೆಪಿಯನ್ನೂ ಒಳಗೊಂಡಂತೆ ಸಂಘಪರಿವಾರದ ಎಲ್ಲಾ ಅಂಗಸಂಸ್ಥೆಗಳು ಒಟ್ಟು ಸೇರಿ ಜೆನ್ ಝಿಗಳನ್ನು ಸಾಮ, ದಾನ, ಬೇಧ ಮತ್ತು ದಂಡೋಪಾಯಗಳ ಮೂಲಕ ಸೆಳೆದುಕೊಳ್ಳುವ ಅಥವಾ ಒಡೆದು-ಆಳುವ ಅಥವಾ ಬಡಿದು-ಕೂಡಿಸುವ ತಂತ್ರೋಪಾಯಗಳನ್ನು ರೂಪಿಸಲಿದೆ. ಅದರ ಭಾಗವಾಗಿಯೇ ಈಗಾಗಲೇ ‘ರಿಸರ್ವೇಶನ್ ಹಠಾವೊ’ ಅಭಿಯಾನದ ತಂತ್ರವನ್ನು ಪ್ರಯೋಗಿಸಿದೆ.

ಇವೆಲ್ಲವೂ ಯುವಜನರ ಹೋರಾಟ ಮೋದಿ ಪ್ರಭುತ್ವದ ನಿದ್ದೆಗೆಡಿಸುವಷ್ಟು ಸದ್ದು ಮಾಡಿರುವುದರ ಸಂಕೇತ.

ಮೋದಿ ಭಾರತ v/s ಬಂಡಾಯ ಭಾರತ!

ಆದರೆ ಮೋದಿ ಸೃಷ್ಟಿಸಬಯಸುವ ಸ್ಮಶಾನ ಮೌನವನ್ನು ಭಾರತ ಮುರಿದದ್ದು ಇದೇ ಮೊದಲೇನಲ್ಲ.

ಮೋದಿಯ ಫ್ಯಾಶಿಸ್ಟ್ ಸರಕಾರದ ವಿರುದ್ಧ ಕಳೆದ 12 ವರ್ಷಗಳಿಂದಲೂ ವಿದ್ಯಾರ್ಥಿ, ಯುವಜನ, ರೈತ, ಆದಿವಾಸಿ, ಮಹಿಳಾ ಮತ್ತು ದಲಿತ ಭಾರತ ಬಂಡೇಳುತ್ತಲೇ ಬಂದಿವೆ.

2014-2015- Right To Fare Compensation ಕಾಯ್ದೆಗೆ ಮೋದಿ ಸರಕಾರ ತಂದ Ordinance ಮತ್ತು ಕಾಯ್ದೆ ವಿರುದ್ಧ ರೈತ ಬಂಡಾಯ.

2015- ಮೋದಿ ಸರಕಾರವನ್ನು ಬಹಿರಂಗವಾಗಿ ಲೇವಡಿ ಮಾಡಿ ಬಯಲು ಮಾಡಿದ ಪುಣೆಯ ಎಫ್‌ಟಿಐಐ ಮತ್ತು ಚೆನ್ನೈ ಐಐಟಿಯ ಭಗತ್ ಸಿಂಗ್ -ಪೆರಿಯಾರ್ ಅಧ್ಯಯನ ಕೂಟದ ವಿದ್ಯಾರ್ಥಿಗಳು.

2016- ರೋಹಿತ್ ವೇಮುಲಾರವರ ಸಾಂಸ್ಥಿಕ ಹತ್ಯೆಯ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿ ಬಂಡಾಯ.

ಮೋದಿ ಸರಕಾರದ ಕುತಂತ್ರದ ವಿರುದ್ಧ ಜೆಎನ್‌ಯು ವಿದ್ಯಾರ್ಥಿಗಳ ಐತಿಹಾಸಿಕ ಬಂಡಾಯ.

ಪಿಎಫ್ ನಿಯಮಗಳ ತಿದ್ದುಪಡಿಗಳ ವಿರುದ್ಧ ಬೆಂಗಳೂರಿನ ಗಾರ್ಮೆಂಟ್ ಮಹಿಳಾ ಕಾರ್ಮಿಕರ ಬೃಹತ್ ಮತ್ತು Spontaneous ಬಂಡಾಯ ಮತ್ತು ಅಕ್ಷರಶಃ ಮೂರು ದಿನಗಳ ಬೆಂಗಳೂರು ಬಂದ್.

2017 -ಮಧ್ಯಪ್ರದೇಶದ ಮಂಡಸುರ್ ರೈತಾಪಿಯ ಮೇಲೆ ಬಿಜೆಪಿ ಸರಕಾರ ನಡೆಸಿದ ಗೋಲಿಬಾರ್ ವಿರುದ್ಧ ಮಧ್ಯಪ್ರದೇಶದ ರೈತರ ಜೊತೆ ದೇಶವ್ಯಾಪಿ ರೈತ ಹೋರಾಟ.

ಹಾಗೆಯೇ ದೇಶಾದ್ಯಂತ ಎಂಎಸ್‌ಪಿ ಶಾಸನಕ್ಕಾಗಿ ಹೋರಾಟ.

2018 -ಮೋದಿ ಸರಕಾರದ ಆದಿವಾಸಿ ವಿರೋಧಿ ಕಾರ್ಪೊರೇಟ್ ನೀತಿಗಳ ವಿರುದ್ಧ ನಾಸಿಕ್ ನಿಂದ ಮುಂಬೈಗೆ 40,000 ಆದಿವಾಸಿಗಳ ಬೃಹತ್ ಪಾದಯಾತ್ರೆ.

2018-19 -ಮೋದಿ ಸರಕಾರದ ಸವರ್ಣೀಯ ಪೇಶ್ವೆ ನೀತಿಗಳ ವಿರುದ್ಧ ಮತ್ತು ಭೀಮಾ ಕೋರೆಗಾಂವ್ ಬೃಹತ್ ದಲಿತ ಪ್ರತಿರೋಧ.

2019- ಮೋದಿ ಸರಕಾರದ ಫ್ಯಾಶಿಸ್ಟ್ ಎನ್‌ಪಿಆರ್-ಎನ್‌ಆರ್‌ಸಿ-ಸಿಎಎ ನೀತಿಗಳ ವಿರುದ್ಧ ಸ್ವಾತಂತ್ರ್ಯ ಹೋರಾಟದ ನಂತರ ಭಾರತ ಕಂಡರಿಯದ ಬೃಹತ್ ದೇಶವ್ಯಾಪಿ ನಾಗರಿಕ ಜನಾಂದೋಲನ.

2020-2021 -ಮೋದಿ ಸರಕಾರದ ರೈತ ವಿರೋಧಿ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಸ್ವತಂತ್ರ ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೇ ಅತ್ಯದ್ಭುತವಾದ 385 ದಿನಗಳ ದಿಲ್ಲಿ ಮುತ್ತಿಗೆ.

2022-23 -ಅಗ್ನಿವೀರ್ ಮತ್ತು ರೈಲ್ವೆ ಬೋರ್ಡ್ ಉದ್ಯೋಗದ ವಿಷಯದಲ್ಲಿ ಮೋದಿ ಸರಕಾರದ ವಿರುದ್ಧ ಉತ್ತರ ಭಾರತದ ಯುವ ನಿರುದ್ಯೋಗಿಗಳ ಸಮರಶೀಲ ಪ್ರತಿಭಟನೆಗಳು.

2023-24 -ಮನೇಸರ ಕಾರ್ಮಿಕರನ್ನು ಒಳಗೊಂಡಂತೆ ದೇಶಾದ್ಯಂತ ಕಾರ್ಮಿಕರ ಬೃಹತ್ ಪ್ರತಿರೋಧ.

ಇವಲ್ಲದೆ ಗುಜರಾತಿನ ಉನ್ನಾವೊ, ಉತ್ತರ ಪ್ರದೇಶದ ಹಾಥರಸ್, ಕಾಶ್ಮೀರದ ಕಥುವಾ ಘಟನೆಗಳ ವಿರುದ್ಧದ ಪ್ರತಿಭಟನೆಗಳು ಮತ್ತು ಅಷ್ಟು ಪ್ರಖ್ಯಾತಿಯನ್ನು ಪಡೆಯದ ರಾಜ್ಯ ಮಟ್ಟದ ನೂರಾರು ಪ್ರತಿರೋಧಗಳು ನಡೆದಿವೆ.. ನಡೆಯುತ್ತಿವೆ... ನಡೆಯುತ್ತವೆ..

ಈ ಪಟ್ಟಿ ಅಪೂರ್ಣ...

ಹೀಗಾಗಿ ಜಂತರ್ ಮಂತರ್‌ನ ಜುಲೈ ಬಂಡಾಯದ ಪುಳಕಗಳು ಕಾಲಕಾಲಕ್ಕೆ ಸಂಭವಿಸುತ್ತಲೇ ಇವೆ. ಸಹಜವಾಗಿ.. ಸಾವಯವವಾಗಿ.

ಮುಳ್ಳುಗಳು ಬೇರೆ - ತಾಯಿಬೇರು ಒಂದೇ

ಮೇಲ್ನೋಟಕ್ಕೆ ಈ ಎಲ್ಲಾ ಹೋರಾಟಗಳು ವಿವಿಧ ವರ್ಗಗಳು ಮೋದಿ ಸರಕಾರದ ವಿರುದ್ಧ ಬಿಡಿಬಿಡಿಯಾಗಿ ನಡೆಸಿದ ಹೋರಾಟಗಳಾಗಿ ಕಂಡರೂ ಈ ಎಲ್ಲಾ ಸಮಸ್ಯೆಗಳ ಮೂಲ ಒಂದೇ.

ಅದು ಮೋದಿ ಸರಕಾರ ಆಕ್ರಮಣಕಾರಿಯಾಗಿ ಮುಂದುವರಿಸಿರುವ ಖಾಸಗೀಕರಣ, ಕಾರ್ಪೊರೇಟೀಕರಣಗಳ ನವ ಉದಾರವಾದಿ ನೀತಿಗಳ ವಿವಿಧ ಆಯಾಮಗಳೇ ಆಗಿವೆ. ಆ ಆಕ್ರಮಣದ ವಿರುದ್ಧ ಜನಬಂಡಾಯಗಳನ್ನು ಹತ್ತಿಕ್ಕಲು ಜಾರಿ ಮಾಡಿರುವ ದಮನಕಾರಿ ನೀತಿಗಳ ಪರಿಣಾಮವೇ ಆಗಿವೆ. ಭಾರತವನ್ನು ಕಾರ್ಪೊರೇಟ್-ಮನುವಾದಿ ಹಿಂದೂರಾಷ್ಟ್ರವನ್ನಾಗಿಸಲು ಸಮಾಜವನ್ನು ಧ್ರುವೀಕರಿಸಲು ಮತ್ತು ಬೇಡದವರನ್ನು ನಾಗರಿಕತ್ವದಿಂದಲೇ ಹೊರ ಹಾಕುವ ಸಮಗ್ರ ಫ್ಯಾಶಿಸ್ಟ್ ಯೋಜನೆಯ ವಿವಿಧ ಭಾಗಗಳಾಗಿವೆ.

ಹೀಗಾಗಿ ಶತ್ರುವಿನ ದಾಳಿ ವ್ಯವಸ್ಥಿತವಾಗಿದೆ. ಸಮಗ್ರವಾಗಿದೆ ಹಾಗೂ ಯೋಜಿತವಾಗಿದೆ.

ಆದರೆ ಅದರ ವಿರುದ್ಧ ಕಾಲಕಾಲಕ್ಕೆ ತಮಗೆ ನೋವುಂಟು ಮಾಡಿದ ಮುಳ್ಳುಗಳನ್ನು ಕೀಳುವ ಬಂಡಾಯಗಳಾಗಿ ಸ್ಫೋಟಗೊಳ್ಳುತ್ತಿರುವ ವಿವಿಧ ಜನವರ್ಗಗಳ ಬಂಡಾಯಗಳು ಈ ಮುಳ್ಳುಗಳ ತಾಯಿ ಬೇರಾದ ಫ್ಯಾಶಿಸ್ಟ್ ಆರ್ಥಿಕ-ಸಾಮಾಜಿಕ-ರಾಜಕೀಯ ಆಳ್ವಿಕೆಯನ್ನೇ ಬದಲಿಸುವ ಕ್ರಾಂತಿಗಳಾಗಿ ಬದಲಾಗುತ್ತಿಲ್ಲ.

ಹೀಗಾಗಿ ಕಳೆದ 12 ವಷರ್ಗಳ ಬೃಹತ್ ಹೋರಾಟಗಳನ್ನು ಹಿಂದಿರುಗಿ ನೋಡಿದರೆ ಆಯಾ ಹೋರಾಟಗಳು ಗೆಲುವಿನ ಬೀಜದಲ್ಲೇ ಸೋಲನ್ನು ಕೂಡ ಮೋದಿ ಪ್ರಭುತ್ವ ಕಸಿ ಮಾಡಿರುವುದು ಅರಿವಾಗುತ್ತದೆ.

ಗೆಲುವಿನಲ್ಲೇ ಕಸಿಯಾಗಿತ್ತೇ ಸೋಲು?

2014-15ರಲ್ಲಿ Right To Fare Compensation ಕಾಯ್ದೆಯನ್ನು ತಿದ್ದುಪಡಿ ಮಾಡುವ ಪ್ರಸ್ತಾವವನ್ನು ಮೋದಿ ಸರಕಾರ ಜನಹೋರಾಟಕ್ಕೆ ಮಣಿದು ಹಿಂದೆಗೆದುಕೊಂಡಿದ್ದೇನೋ ನಿಜ.

ಆದರೆ ಬಿಜೆಪಿ ಆಳ್ವಿಕೆಯಲ್ಲಿದ್ದ ರಾಜ್ಯಗಳಲ್ಲಿ ಮಾತ್ರ ಆ ತಿದ್ದುಪಡಿಗಳು ರಾಜಾರೋಷವಾಗಿ ಜಾರಿಯಾದವು!.

ಅಷ್ಟು ಮಾತ್ರವಲ್ಲ. ವಿದೇಶಿ ಬಂಡವಾಳ ಹೂಡಿಕೆಯೇ ಅಭಿವೃದ್ಧಿಯ ದಾರಿದೀಪ ಎಂಬ ನವ ಉದಾರವಾದಿ ಆರ್ಥಿಕ ನೀತಿಯ ಫ್ಯಾಶಿಸ್ಟ್ ಬೇರುಗಳನ್ನು ಬಿಜೆಪಿಯಂತೆ ಗಟ್ಟಿಯಾಗಿ ಅಪ್ಪಿಕೊಂಡಿರುವ ಕಾಂಗ್ರೆಸ್‌ನಂತಹ ವಿರೋಧ ಪಕ್ಷಗಳೂ ಸಹಜವಾಗಿ ಇದರ ವಿರುದ್ಧ ಪ್ರತಿಭಟಿಸಲಿಲ್ಲ.

ಅದೆಲ್ಲ ಬಿಡಿ. 2018-19ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ತಾನೇ ಜಾರಿಗೆ ತಂದ Right To Fare Compensation ಕಾಯ್ದೆಯನ್ನು ತಾನೇ ಸಾಯಿಸುವ ತಿದ್ದುಪಡಿಗಳನ್ನು ತಂದಿತು. ಬಿಡದಿ, ದೇವನಹಳ್ಳಿ ಯೋಜನೆಗಳೆಲ್ಲಾ ಈ ಬದಲಾವಣೆಯ ಶಿಶುಗಳೇ..

ಇನ್ನು 2020ರ ರೈತ ಸಂಗ್ರಾಮದಲ್ಲಿ ಪ್ರಧಾನ ಬೇಡಿಕೆಯಾಗಿದ್ದ ಎಂಎಸ್‌ಪಿಯನ್ನು ಶಾಸನಬದ್ಧವಾಗಿಸುವ ಆಗ್ರಹ ಈಗ ಚಾಲ್ತಿಯನ್ನೇ ಕಳೆದುಕೊಂಡಿದೆ.

2020-21ರಲ್ಲಿ ನಡೆದ ಜಗತ್ತೇ ನಿಬ್ಬೆರಗಾಗಿ ನೋಡಿದ ಬೃಹತ್ ರೈತ ಬಂಡಾಯದ ನಂತರ ಮೋದಿ ಸರಕಾರ ಮೂರು ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರದಲ್ಲಿ ಹಿಂದೆಗೆದುಕೊಂಡರೂ ರಾಜ್ಯಮಟ್ಟದಲ್ಲಿ ಮಾತ್ರ ಅದೇ ಬಗೆಯ ಕಾಯ್ದೆಗಳು ಮುಂದುವರಿದಿದೆ.

ಈಗ ಕೇಂದ್ರದಲ್ಲೂ National Policy Framework on Agricultural Marketing (NPFAM) ರೂಪದಲ್ಲಿ ಹಳೆಯ ಕಾಯ್ದೆಯನ್ನೇ ಜಾರಿಗೆ ತರುವ ಪ್ರಯತ್ನವನ್ನು ನಡೆಸಲಾಗಿದೆ.

ಕರ್ನಾಟಕದಲ್ಲಿ ಕೂಡ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ರಾಜ್ಯಮಟ್ಟದಲ್ಲಿ ಕೇಂದ್ರದ ನೀತಿಗಳ ಭಾಗವಾಗಿ ತಂದ ರೈತ ವಿರೋಧಿ ನೀತಿಗಳನ್ನು 2023ರ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವೇನೂ ಹಿಂದೆಗೆದುಕೊಳ್ಳಲಿಲ್ಲ.

ಆದಿವಾಸಿಗಳ ಜಮೀನನ್ನು ಅದಾನಿಗಳಿಗೆ ಪರಭಾರೆ ಮಾಡಲೆಂದೇ ಛತ್ತೀಸ್‌ಗಡ ಮತ್ತು ಜಾರ್ಖಂಡ್ ಆದಿವಾಸಿಗಳನ್ನು ನಕ್ಸಲ್ ಹೆಸರಿನ ನರಮೇಧ ಮಾಡುತ್ತಿರುವುದು ಬಿಜೆಪಿಯಾದರೂ ಅದಕ್ಕೆ ತಾತ್ವಿಕ ಒಪ್ಪಿಗೆ ಎಲ್ಲಾ ವಿರೋಧ ಪಕ್ಷಗಳದ್ದೂ ಮುಂದುವರಿದಿದೆ.

ಕೋವಿಡ್ ಕಾರಣಕ್ಕೆ ಎನ್‌ಪಿಆರ್-ಎನ್‌ಆರ್‌ಸಿ ಹೋರಾಟ ನಿಂತಿತು. ಆದರೆ ಅದನ್ನೇ ಈಗ ಎಸ್‌ಐಆರ್ ಹೆಸರಿನಲ್ಲಿ ಜಾರಿ ಮಾಡಲಾಗುತ್ತಿದೆ. ಕರ್ನಾಟಕದಲ್ಲಂತೂ ಕಾಂಗ್ರೆಸ್ ಸರಕಾರದ ಸಂಪೂರ್ಣ ಸಹಯೋಗದೊಂದಿಗೆ.

ಅಗ್ನಿವೀರ್ ಇತ್ಯಾದಿ ಯೋಜನೆಗಳ ವಿರುದ್ಧ ಮಿಲಿಟೆಂಟ್ ಹೋರಾಟ ನಡೆದರೂ ಉದ್ಯೋಗದ ತಾತ್ಕಾಲಿಕತೆಯನ್ನೇ ಶಾಶ್ವತಗೊಳಿಸುವ ಉದ್ಯೋಗ ನೀತಿಗಳನ್ನೇ ಎಲ್ಲಾ ರಾಜ್ಯಗಳು ಆನುಸರಿಸುತ್ತಿವೆ. ಏಕೆಂದರೆ ಆರ್ಥಿಕ ನೀತಿಗಳು ಬಂಡವಾಳ ಸ್ನೇಹಿಯಾಗಿದ್ದರೆ ಮಾತ್ರ ಬಂಡವಾಳ ಹರಿದು ಬರುತ್ತದೆ. ಹೀಗಾಗಿ ಉದ್ಯೋಗ ಮತ್ತು ಕಾರ್ಮಿಕ ನೀತಿಗಳನ್ನು ಕಾರ್ಮಿಕ ವಿರೋಧಿ ಮತ್ತು ಕಾರ್ಪೊರೇಟ್ ಪರ ಮಾಡುವುದರಲ್ಲಿ ಮೋದಿ ಸರಕಾರದ ಜೊತೆಗೆ ವಿರೋಧ ಪಕ್ಷಗಳ ಸರಕಾರಗಳು ಪೈಪೋಟಿ ನಡೆಸುತ್ತಿವೆ.

ಕರ್ನಾಟಕದಲ್ಲಂತೂ ಜಾರಿ ಮಾಡಿದ ಕನಿಷ್ಠ ವೇತನ ನಿಯಮವನ್ನೂ ಕಾಂಗ್ರೆಸ್ ಸರಕಾರ ಕಾರ್ಪೊರೇಟ್ ಒತ್ತಡಕ್ಕೆ ಮಣಿದು ಹಿಂದೆಗೆದುಕೊಳ್ಳುತ್ತಿದೆ.

ಪೇಪರ್ ಲೀಕ್, ಇನ್ನಿತ್ಯಾದಿ ಅವಘಡಗಳ ತಾಯಿಯಾದ ಮೋದಿ ಸರಕಾರದ ಎನ್‌ಇಪಿ ಯಥಾವತ್ತಾಗಿ ಎಲ್ಲಾ ರಾಜ್ಯಗಳಲ್ಲೂ ಜಾರಿಯಾಗುತ್ತಿದೆ. ಕರ್ನಾಟಕದಲ್ಲಿ ಅದಕ್ಕೆ ಪ್ರತಿಯಾಗಿ ಎಸ್‌ಇಪಿ ಜಾರಿ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಸರಕಾರದ ಅವಧಿಯೇ ಮುಗಿಯುತ್ತಾ ಬಂದಿದೆ. ಅದರ ಕರಡು ಕೂಡ ಬಯಲಾಗಿಲ್ಲ. ಬದಲಿಗೆ ಎನ್‌ಇಪಿಯ ಬಡವಿರೋಧಿ ನೀತಿಯ ಮುಂದುವರಿಕೆಯೇ ಆಗಿರುವ ಸರಕಾರಿ ಶಾಲೆಗಳನ್ನು ಮುಚ್ಚುವ, ಅಳಿದುಳಿದ ಸರಕಾರಿ ಶಾಲೆಗಳನ್ನು ಕಾರ್ಪೊರೇಟ್ ಭಿಕ್ಷೆಯಲ್ಲಿ ನಡೆಸುವ ಕೆಪಿಎಸ್ ಶಾಲಾ ಯೋಜನೆಯನ್ನು ಮಾತ್ರ ಕರ್ನಾಟಕದ ಕಾಂಗ್ರೆಸ್ ಸರಕಾರ ಆಕ್ರಮಣಶೀಲವಾಗಿ ಜಾರಿ ಮಾಡುತ್ತಿದೆ.

ಪೇಪರ್ ಲೀಕ್‌ಗೆ ಕಾರಣವಾಗಿರುವ ಎನ್‌ಟಿಎ ವ್ಯವಸ್ಥೆ ಮತ್ತು ಅದಕ್ಕೆ ಮೂಲ ಬೇರಾದ ಜನವಿರೋಧಿ ಎನ್‌ಇಪಿ ನೀತಿ ಉಳಿದುಕೊಂಡರೆ ಪ್ರಧಾನ್ ರಾಜೀನಾಮೆ ಕೇವಲ ವಂಚಿತ ವಿದ್ಯಾರ್ಥಿಗಳ ಸಂಕಟದ ಮೇಲಿನ ಪ್ರಹಸನವಾಗುತ್ತದೆ.

ಮತ್ತೊಂದು ಕಡೆ ಸಂಘಿ ಫ್ಯಾಶಿಸ್ಟರು ಸಂವಿಧಾನದ ಮೇಲೆ ಮಾಡುತ್ತಿರುವ ವ್ಯವಸ್ಥಿತ ದಾಳಿಯಿಂದ ಸಂವಿಧಾನವನ್ನು ರಕ್ಷಿಸಬೇಕಾದ ಸುಪ್ರೀಂ ಕೋರ್ಟ್ ಇದೇ ಅವಧಿಯಲ್ಲಿ ಪ್ರಧಾನಿಯ ಗೃಹ ಕಚೇರಿಯಾಗಿ ಮಾರ್ಪಟ್ಟಿದೆ.

ಬೇರು ಕೀಳದಿದ್ದರೆ ಮುಳ್ಳು ಮರುಹುಟ್ಟುತ್ತದೆ

ಹೀಗಾಗಿ ಸಮಸ್ಯೆಯ ಬೇರುಗಳು ಆಳದಲ್ಲಿವೆ.

ಮೇಲೆ ಕಾಣುವ ಮುಳ್ಳುಗಳನ್ನು ಕಿತ್ತುಹಾಕಿದ ಮಾತ್ರಕ್ಕೆ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿಯಬಹುದು ಅಥವಾ ಬಗೆಹರಿಯುವಂತೆ ತೋರಬಹುದು. ಆದರೆ ಆಳದ ಬೇರುಗಳ ಅರಿವು ಮತ್ತು ಅದನ್ನು ಕಿತ್ತು ಹಾಕುವ ಸಮಗ್ರ ಯೋಜನೆ ಇರದಿದ್ದರೆ ತಾತ್ಕಾಲಿಕ ಗೆಲುವೇ ದೀರ್ಘಕಾಲೀನ ಸೋಲಿನ ಸೋಪಾನವೂ ಆಗಬಹುದೆಂಬ ಎಚ್ಚರವನ್ನೇ ಕಳೆದ 12 ವರ್ಷಗಳ ಹೋರಾಟದ ಇತಿಹಾಸ ಕೂಗಿ ಕೂಗಿ ಹೇಳುತ್ತದೆ.

ವಾಸ್ತವದಲ್ಲಿ ಜಾಗತಿಕ ಇತಿಹಾಸವೂ ಇದೇ ಪಾಠವನ್ನು ಕಲಿಸುತ್ತದೆ.

2010-2020ರ ನಡುವೆ ಜಗತ್ತು ಹಲವು ಬಂಡಾಯಗಳನ್ನು ಕಂಡಿತು. ಟುನಿಸಿಯಾ, ಲಿಬಿಯಾ, ಈಜಿಪ್ಟ್, ಬಹರೈನ್, ಹಾಂಕಾಂಗ್, ತುರ್ಕಿಯ, ಗ್ರೀಸ್, ಸ್ಪೇನ್, ಇಟಲಿ, ಚಿಲಿ..ಹತ್ತು ಹಲವು ದೇಶಗಳ ಯುವಜನ ಬಂಡಾಯ ಆಯಾ ದೇಶಗಳ ಸರಕಾರವನ್ನೇ ಕಿತ್ತುಹಾಕುವಲ್ಲಿ ಯಶಸ್ವಿಯಾಗಿದ್ದವು.

ಈ ಎಲ್ಲ ಬಂಡಾಯಗಳನ್ನು ಖುದ್ದು ವರದಿ ಮಾಡಿ ಅಧ್ಯಯನ ಮಾಡಿರುವ ವಿನ್ಸೆಂಟ್ ಬೆವಿನ್ಸ್ ಅವರು ‘IF WE BURN- THE MASS PROTEST DECADE AND THE MISSING REVOLUTION’ ಎಂಬ ಅತ್ಯಂತ ಗಹನ ಮತ್ತು ಗಂಭೀರವಾದ ಕೃತಿಯನ್ನು ರಚಿಸಿದ್ದಾರೆ. ಆ ದೇಶಗಳಲ್ಲಿ ಸುನಾಮಿಯಂತೆ ಭುಗಿಲೆದ್ದ ಬೃಹತ್ ಜನಪ್ರತಿರೋಧಗಳು ಮೂಲಭೂತ ಬದಲಾವಣೆಯ ಕ್ರಾಂತಿ ಯಾಕಾಗಲಿಲ್ಲ ಎಂಬ ಕಾರಣಗಳ ಚಿತ್ರಣವನ್ನು ಒದಗಿಸುತ್ತಾರೆ.

ಜಂತರ್ ಮಂತರ್ ಪುಳಕದಲ್ಲಿರುವ ಭಾರತಕ್ಕೆ ಈ ಪುಸ್ತಕ ಪ್ರತಿಪಾದನೆ ಮಾಡುವ ವಿವೇಕವೂ ಜೊತೆಗೂಡಬೇಕಿದೆ.

ಬಂಡಾಯಕ್ಕೆ ಕ್ರಾಂತಿ ಕೇಳುತ್ತಿರುವ ಪ್ರಶ್ನೆಗಳು!

ನಿಜ. ಜಂತರ್ ಮಂತರ್ ಹೋರಾಟವು ಈ ದೇಶಕ್ಕೆ ಅತ್ಯಗತ್ಯವಾದ ಪುಳಕ, ಹುಮ್ಮಸ್ಸು ಮತ್ತು ಭರವಸೆಗಳನ್ನು ನೀಡಿದೆ.

ಇವೆಲ್ಲದರಿಂದ ಪುಳಕಿತರಾಗುತ್ತಲೇ ಈ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ.

1. ಈ ಎಲ್ಲಾ ಪ್ರತಿರೋಧಗಳನ್ನು ಮೋದಿ ಸರಕಾರ ಅರಗಿಸಿಕೊಂಡಿದ್ದು ಹೇಗೆ?

2. ಮೋದಿ ನೀತಿಗಳ ಬಗೆಗಿನ ಅಸಹನೆ ಮೋದಿತ್ವದ ರಾಜಕೀಯ -ಸಿದ್ಧಾಂತದ ವಿರುದ್ಧ ಪ್ರತಿರೋಧ ಆಗದಿರುವುದು ಏಕೆ?

3. ಈ ಬಂಡಾಯಗಳು ಮೂಲಭೂತ ಬದಲಾವಣೆ ತರುವ ಕ್ರಾಂತಿಗಳಾಗಿ ಬದಲಾಗದಿರಲು ಕಾರಣಗಳೇನು? ಕೊರತೆಗಳೇನು?

4. ಆ ಹಿನ್ನೆಲೆಯಲ್ಲಿ ಇಂದಿನ ಯುವ ಪ್ರತಿರೋಧ ಮತ್ತೊಂದು ತಾತ್ಕಾಲಿಕ ಪುಳಕ ಮಾತ್ರವಾಗದಿರಲು ಮಾಡಬೇಕಾದುದೇನು?

ಉತ್ಸಾಹದ ದುಡುಕು ಮತ್ತು ವಿವೇಕದ ಸಿನಿಕತೆ ಎರಡನ್ನೂ ಮೀರುತ್ತಾ...

ಯುವ ಉತ್ಸಾಹ ಮತ್ತು ಅನುಭವದ ವಿವೇಕ ಎರಡು ಸೇರಿ....

ಎರಡೂ ಕಣ್ಣುಗಳಿಂದ ನೋಡಿ, ಎರಡೂ ಕಾಲುಗಳ ಮೇಲೆ ನಡೆಯುತ್ತಾ...

ಬಂಡಾಯಗಳ ಮೂಲಕ ಮೂಲಭೂತ ಬದಲಾವಣೆಯ ಕ್ರಾಂತಿಯ ಕಡೆಗೆ ಸಾಗಬೇಕಿರುವುದು ಇಂದಿನ ಅಗತ್ಯ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News