ಮಾತೇ ಬೆಂಕಿಯ ಕಿಡಿಯಾದರೆ
ಹಿಂದೆ ಸಾಮಾನ್ಯವಾಗಿ ನಿವೃತ್ತಿಯವರೆಗೆ ಯಾವನೇ ಸರಕಾರಿ ಅಧಿಕಾರಿಯಾಗಲೀ ತನ್ನ ವ್ಯವಸ್ಥೆಯನ್ನು ಧಿಕ್ಕರಿಸುತ್ತಿರಲಿಲ್ಲ. ಆನಂತರವೂ ತನ್ನ ಭೂತವನ್ನು ತೆರೆದಿಡುವ ಸಂದರ್ಭದಲ್ಲೂ ಯಾರಿಗೂ ಮುಜುಗರವಾಗದಂತೆ ಜಾಗ್ರತೆ ವಹಿಸುತ್ತಿದ್ದರು, ಈಗ ಉಚ್ಚ ಮತ್ತು ಸರ್ವೋಚ್ಚ ನ್ಯಾಯಮೂರ್ತಿಗಳು ಪಕ್ಷ, ಪಂಗಡ ಮುಂತಾದವುಗಳನ್ನು ಸಮೀಪಿಸುವ ಹೊಸ ವರ್ತನೆ ತುಂಬಾ ಅಪಾಯಕಾರಿ. ನಿವೃತ್ತಿಯ ಸುಖಕ್ಕಿಂತ ನಿವೃತ್ತಿಯಾದ ತಕ್ಷಣ ಸಿಗಬಲ್ಲ ಹುದ್ದೆಯನ್ನು ನಿರೀಕ್ಷಿಸಿ ಅದಕ್ಕೆ ಬೇಕಾದಂತೆ ಮಾತನಾಡುವವರು ಬಹಳಷ್ಟು ಮಂದಿ ಇದ್ದಾರೆ. ಅಧಿಕಾರಾವಧಿ ಮುಗಿದ ಮೇಲೆ ಅಂದರೆ ನಿವೃತ್ತಿಯಾದ ಬಳಿಕ ರಾಜ್ಯಪಾಲ, ರಾಜ್ಯಸಭಾ ಸದಸ್ಯತ್ವ ಮುಂತಾದ ಘನತೆ ಗೌರವಗಳನ್ನು ಇಳಿಸುವ ರಾಜಕೀಯ ಹುದ್ದೆಗಳನ್ನು ಅಲಂಕರಿಸುವುದಕ್ಕೆ ಬಹಳಷ್ಟು ನ್ಯಾಯಮೂರ್ತಿಗಳು ಉತ್ಸಾಹಿಗಳಾದಂತೆ ಕಾಣುತ್ತದೆ.
ನಿಷ್ಠುರ, ನಿರ್ಭೀತ ಹಾಗೂ ವಸ್ತುನಿಷ್ಠ ಪ್ರವೃತ್ತಿಗೆ ಹೆಸರಾದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅವರು ಮೊನ್ನೆ ರಾಷ್ಟ್ರೀಯ ಮಹಿಳಾ ಆಯೋಗವು ಪ್ರಾಯೋಜಿಸಿದ ಮಹಿಳಾ ಹಕ್ಕುಗಳ ದಕ್ಷಿಣ ಭಾರತ ಮಟ್ಟದ ಸಮ್ಮೇಳನವೊಂದರಲ್ಲಿ ಭಾಗವಹಿಸಿ ಮಹಿಳೆಯರಿಗೆ ನ್ಯಾಯದ ಅಗತ್ಯದ ಕುರಿತು ಮಾತನಾಡಿದರು. ಅವರು ಹೇಳಿದ ಮಾತುಗಳು ಆ ಪ್ರಕರಣಕ್ಕೆ ಯುಕ್ತವಾಗಿದ್ದರೂ ನ್ಯಾಯವೆಂಬುದು ಎಲ್ಲರಿಗೂ ಮರೀಚಿಕೆಯಾಗುತ್ತಿರುವ ಈ ಕಾಲದಲ್ಲಿ ಮಹಿಳೆಯರಿಗೆ ಮಾತ್ರ ಅನ್ವಯಿಸುವ ಒಂದು ನ್ಯಾಯವರ್ತುಲವು ಸೃಷ್ಟಿಯಾಗಬೇಕಾಗಿಲ್ಲ. ದಲಿತರಿಗೂ ನ್ಯಾಯ ಸಿಗುತ್ತಿಲ್ಲ; ಅಲ್ಪಸಂಖ್ಯಾತರಿಗೂ ನ್ಯಾಯ ಸಿಗುತ್ತಿಲ್ಲ. ಹಣ ಮತ್ತು ಅಧಿಕಾರವಿದ್ದವರಿಗಷ್ಟೇ ನ್ಯಾಯದ ಹೆಸರಿನಲ್ಲಿ ಗೆಲುವು ಸಿಕ್ಕುವುದನ್ನು ದಿನನಿತ್ಯ ನಾವು ಕಾಣಬಹುದು. ಹಾಗೆಯೇ ಒಂದು ಸಂಘಟನೆ ಇನ್ನೊಂದು ಸಂಘಟನೆಯನ್ನು ವಿರೋಧಿಸುವುದು ಎಲ್ಲೆಡೆ ಕಾಣುತ್ತೇವೆ. ಇಂತಹ ವಾತಾವರಣದಲ್ಲಿ ತೀರ್ಪಿನ ಹೊರತಾಗಿ ನ್ಯಾಯಮೂರ್ತಿಗಳು ವ್ಯಕ್ತಪಡಿಸುವ ಯಾವುದೇ ಅಭಿಮತವು ಮುಖಕ್ಕೆ ತಕ್ಕಂತೆ ಮಾತನಾಡುವ ಪ್ರವೃತ್ತಿಯನ್ನು ಹೆಚ್ಚಿಸುವ ಸಾಧ್ಯತೆಯೇ ಹೆಚ್ಚು.
ಇದೇ ಸಂದರ್ಭದಲ್ಲಿ ಕರ್ನಾಟಕದ ಸಿವಿಲ್ ನ್ಯಾಯಾಲಯಗಳ ಕಾಯ್ದೆ ಸಂಬಂಧ ವಿಚಾರವೊಂದನ್ನು ಅವರು ಉಲ್ಲೇಖಿಸಿದರು. ಸರಕಾರದ ಈ ಕಾಯ್ದೆಯಿಂದಾಗಿ ಮಹಿಳೆಯರಿಗೆ ಹೆಚ್ಚಿನ ಹೊರೆಯಾಗುತ್ತದೆಯೆಂದರು. ಎಲ್ಲರಿಗೂ ಉಚ್ಚ, ಸರ್ವೋಚ್ಚ ನ್ಯಾಯಾಲಯಗಳ ಕದ ತಟ್ಟುವ ಶಕ್ತಿಯಿಲ್ಲದೆ ತೊಂದರೆಯಾಗಬಹುದೆಂದರು.
ಅದು ಕರ್ನಾಟಕಕ್ಕೆ ಹಾಗೂ ರಾಜ್ಯದ ವಕೀಲ ಸಮುದಾಯಕ್ಕೆ ಸಂಬಂಧಿಸಿದ್ದು. ಈಚೆಗೆ ಕರ್ನಾಟಕ ಸರಕಾರವು ಸಿವಿಲ್ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ಬದಲಾಯಿಸಿತು. ನ್ಯಾಯವಿಧಾನದ ಪರಿಚಯವಿಲ್ಲದವರಿಗೆ ನೀಡಬಹುದಾದ ಮಾಹಿತಿಯೆಂದರೆ, ಸಿವಿಲ್ ವ್ಯಾಜ್ಯಗಳ ಪೈಕಿ ಮೊದಲ ಹಂತದ ಸಿವಿಲ್ ನ್ಯಾಯಾಲಯಗಳು ರೂ.5 ಲಕ್ಷಗಳ ಮೊತ್ತದ ವರೆಗಿನ ವ್ಯಾಜ್ಯಗಳನ್ನು ಇತ್ಯರ್ಥಪಡಿಸಬಹುದಾಗಿದ್ದು, ಅದಕ್ಕೂ ಮೇಲಿನ ಮೊತ್ತದ ವ್ಯಾಜ್ಯಗಳನ್ನು ಹಿರಿಯ ಸಿವಿಲ್ ನ್ಯಾಯಾಲಯಗಳು ಇತ್ಯರ್ಥಪಡಿಸಬೇಕಾಗಿತ್ತು. ಹಾಗೆಯೇ ಮೊದಲ ಹಂತದ ಸಿವಿಲ್ ನ್ಯಾಯಾಲಯಗಳ ತೀರ್ಪಿನ ವಿರುದ್ಧದ ಮೇಲ್ಮನವಿಗಳನ್ನು ಹಿರಿಯ ಸಿವಿಲ್ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳಿಸಬೇಕಾಗಿತ್ತು; ಹಿರಿಯ ಸಿವಿಲ್ ನ್ಯಾಯಾಲಯಗಳ ತೀರ್ಪಿನ ವಿರುದ್ಧ ರೂ.10 ಲಕ್ಷ ಮೊತ್ತದ ವರೆಗಿನ ವ್ಯಾಜ್ಯಗಳನ್ನು ಜಿಲ್ಲಾ ನ್ಯಾಯಾಲಯಗಳೂ ಅದಕ್ಕೂ ಮೀರಿದ ಮೊತ್ತದ ವ್ಯಾಜ್ಯಗಳನ್ನು ಉಚ್ಚನ್ಯಾಯಾಲಯಗಳೂ ಇತ್ಯರ್ಥಗೊಳಿಸಬೇಕಾಗಿತ್ತು. ಅಲ್ಲೂ 20 ಲಕ್ಷದ ವರೆಗಿನ ಮೇಲ್ಮನವಿಗಳನ್ನು ಏಕವ್ಯಕ್ತಿ ಪೀಠವೂ ಅದಕ್ಕೂ ಮೀರಿದ ಮೊತ್ತದ ವ್ಯಾಜ್ಯಗಳನ್ನು ಖಂಡಪೀಠವು ಇತ್ಯರ್ಥಗೊಳಿಸಬೇಕಾಗಿತ್ತು. ಈ ಅಧಿಕಾರ ವ್ಯಾಪ್ತಿಯು ಮಧ್ಯಂತರ ಆದೇಶಗಳಿಗೂ ಅನ್ವಯಿಸುತ್ತಿತ್ತು.
ಉಚ್ಚನ್ಯಾಯಾಲಯಗಳ ಅಧಿಕಾರ ವ್ಯಾಪ್ತಿ ದೊಡ್ಡದು. ಇದರಿಂದಾಗಿ ಅವುಗಳಲ್ಲಿ ರಿಟ್, ಕ್ರಿಮಿನಲ್ ಮೇಲ್ಮನವಿಗಳು, ಶಾಸಕಾಂಗ ಹಾಗೂ ಸಂಸತ್ತಿನ ಚುನಾವಣಾ ಅರ್ಜಿಗಳು, ಅಲ್ಲದೆ ಇನ್ನೂ ಹಲವಾರು ರೀತಿಯ ಪ್ರಕರಣಗಳು ತುಂಬಿಕೊಂಡು ಉಚ್ಚನ್ಯಾಯಾಲಯಗಳಲ್ಲಿ ಸಲ್ಲಿಸಲಾದ ಮೇಲ್ಮನವಿಗಳು ಇತ್ಯರ್ಥವಾಗದೆ ಬಹುಕಾಲ ಉಳಿಯುತ್ತಿದ್ದವು. ಇದಕ್ಕೆ ಪರಿಹಾರೋಪಾಯವಾಗಿ ವ್ಯಾಜ್ಯದ ಮೊತ್ತದ ಅಧಿಕಾರ ವ್ಯಾಪ್ತಿಯನ್ನು ಏರಿಸುವುದು ಸೂಕ್ತವೆಂಬ ಅಭಿಪ್ರಾಯವನ್ನು ಉಚ್ಚ ನ್ಯಾಯಾಲಯದ ತೀರ್ಪೊಂದು ಸೂಚಿಸಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ರಾಜ್ಯ ಸರಕಾರವು ಈ ರೂ. 5 ಲಕ್ಷದ ಅಧಿಕಾರ ವ್ಯಾಪ್ತಿಯನ್ನು 15 ಲಕ್ಷಕ್ಕೆ ಏರಿಸಿತು; ಅದಕ್ಕೆ ಮೀರಿದ ಅಧಿಕಾರ ವ್ಯಾಪ್ತಿಯನ್ನು ಹಿರಿಯ ಸಿವಿಲ್ ನ್ಯಾಯಾಲಯಗಳಿಗೆ ವಹಿಸಿತು. ಹಾಗೆಯೇ ರೂ.15 ಲಕ್ಷದ ವರೆಗಿನ ತೀರ್ಪುಗಳ ಮೇಲ್ಮನವಿಯನ್ನು ಇತ್ಯರ್ಥಗೊಳಿಸುವ ಅಧಿಕಾರವನ್ನು ಹಿರಿಯ ಸಿವಿಲ್ ನ್ಯಾಯಾಲಯಗಳಿಗೆ ವಹಿಸಿತು. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಲಯಗಳ ಎಲ್ಲಾ ತೀರ್ಪುಗಳ ಮೇಲ್ಮನವಿಗಳನ್ನು ಇತ್ಯರ್ಥಗೊಳಿಸುವ ಅಧಿಕಾರವನ್ನು ಉಚ್ಚ ನ್ಯಾಯಾಲಯದ ಬದಲಿಗೆ ಆಯಾಯ ಜಿಲ್ಲಾ ನ್ಯಾಯಾಲಯಗಳಿಗೆ ವಹಿಸಿತು. ಇದು 2007ರಿಂದ ಇತ್ಯರ್ಥವಾಗದಿರುವ ಮೇಲ್ಮನವಿಗಳಿಗೆ ಅನ್ವಯಿಸಿದೆಯೆಂದರೆ ನ್ಯಾಯವಿಳಂಬದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬಹುದಾಗಿದೆ.
ಈ ಬದಲಾವಣೆ ವಿತ್ತಮೌಲ್ಯದ ಬದಲಾದ ಸ್ಥಿತಿಯಲ್ಲಿ ಕಕ್ಷಿದಾರರಿಗೆ ಅನುಕೂಲವಾಗಿದೆ. ಅಲ್ಲದೆ ಉಚ್ಚ ನ್ಯಾಯಾಲಯಗಳಲ್ಲಿ ವ್ಯವಹರಣೆ ಎಷ್ಟು ಬೆಲೆಬಾಳುತ್ತದೆಂದು ಜನರಿಗೆ ಗೊತ್ತಿದೆ. ಜಿಲ್ಲಾ ಕೇಂದ್ರದ ವರೆಗೆ ತಲುಪುವುದೇ ಕಷ್ಟ. ಇನ್ನು ಬೆಂಗಳೂರೆಲ್ಲಿ? ದಿಲ್ಲಿಯೆಲ್ಲಿ?
ಆದರೂ ಈ ಕಾಯ್ದೆಯ ಕಾನೂನುಬದ್ಧತೆಯನ್ನು ಒಂದಷ್ಟು ಪಟ್ಟಭದ್ರ ಹಿತಾಸಕ್ತಿಗಳು ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿದವು. ಪರಿಣಾಮವಾಗಿ ಈ ಕಾಯ್ದೆಯು ಕೆಲವು ಕಾಲ ತಾತ್ಕಾಲಿಕ ನಿರ್ಬಂಧಕ್ಕೊಳಗಾದರೂ ಜುಲೈ 9, 2026ರಂದು ತೆರವಾಗಿ ಈ ಕಾಯ್ದೆಯನ್ನು ಎತ್ತಿಹಿಡಿಯಲಾಯಿತು. ಆದರೆ ಈ ತೀರ್ಪನ್ನೂ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಸರ್ವೋಚ್ಚ ನ್ಯಾಯಾಲಯವು ಈ ಮೇಲ್ಮನವಿಯನ್ನು ತಿರಸ್ಕರಿಸಿ ಈ ಕಾಯ್ದೆಯು ಜಾರಿಯಾಗಲು ಅನುವು ಮಾಡಿಕೊಟ್ಟಿತು. (ಆಡಳಿತ ವ್ಯವಸ್ಥೆಯ ವಿಳಂಬದಿಂದಾಗಿ ಅದಿನ್ನೂ ಅನುಷ್ಠಾನವಾಗಬೇಕಾಗಿದೆ.)
ಸರ್ವೋಚ್ಚ ನ್ಯಾಯಾಲಯದ ವರೆಗೆ ಹೋಗಿ ಇತ್ಯರ್ಥವಾದ ವಿಚಾರವನ್ನು ಸಾರ್ವಜನಿಕರು ಟೀಕಿಸಬಹುದು. ಆದರೆ ಸರ್ವೋಚ್ಚ ನ್ಯಾಯಾಲಯದ ಇನ್ನೊಬ್ಬ ಹಿರಿಯ ನ್ಯಾಯಮೂರ್ತಿಗಳು ಟೀಕಿಸಬಾರದು. ಅದು ತಂಡನೀತಿ (ಣeಚಿm sಠಿiಡಿiಣ)ಯ ಮತ್ತು ನ್ಯಾಯಸಮಾನತೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಬಿ.ವಿ. ನಾಗರತ್ನಾ ಅವರ ಈ ಅಭಿಮತವು ಕಾನೂನಿನಡಿ ಏನೂ ಮಾಡಲಾರದಾದರೂ ಅದರ ದೂರಗಾಮೀ ಪರಿಣಾಮಗಳನ್ನು ಊಹಿಸಿದರೆ ಗಾಬರಿಯಾಗುತ್ತದೆ.
ಇದೊಂದು ಸಾಂದರ್ಭಿಕ ಉದಾಹರಣೆ. ಆದರೆ ಈಚೀಚೆಗೆ ಇಂತಹ ಆಲಿಕಲ್ಲುಗಳ ಅಣಿಮುತ್ತುಗಳನ್ನು ನಮ್ಮ ಹಿರಿಯ ನ್ಯಾಯಮೂರ್ತಿಗಳೇ ಉದುರಿಸುತ್ತಿರುವುದು ಆತಂಕಕಾರಿ. ಇದು ಒಳ್ಳೆಯದನ್ನೂ ಮಾಡಬಾರದೆಂದೇನೂ ಇಲ್ಲವೆಂಬುದಕ್ಕೆ ಸಾಕಷ್ಟು ನಿದರ್ಶನಗಳು ಈಚೆಗೆ ಹುಟ್ಟಿಕೊಂಡಿವೆ. ಆದರೆ ಅನೇಕ ಬಾರಿ ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂಬುದನ್ನು ಭಾರತೀಯ ವ್ಯವಸ್ಥೆಯ ಎಲ್ಲ ಸಾಂವಿಧಾನಿಕ ಮತ್ತು ಅಧಿಕಾರ ಮನಸ್ಥಿತಿ, ಆತ್ಮರತಿ ತೋರಿಸಿಕೊಟ್ಟಿದೆ. ಈಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳು ಉದುರಿಸಿದ ‘ಕಾಕ್ರೋಚ್’ ಎಂಬ ಒಂದು ಪದಕಾರಣವಾಗಿ ಅಭಿಜೀತ್ ದೀಪ್ಕೆ ಎಂಬಾತನ ಮೂಲಕ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಒಂದು ಸಾಮಾಜಿಕ ಸಂಘಟನೆ ಅಸ್ತಿತ್ವಕ್ಕೆ ಬಂದು ಅದು ರೂಪಿಸಿದ ಜನಾಂದೋಲನ ಕಳೆದ ನಾಲ್ಕೈದು ದಶಕಗಳಿಂದೀಚೆಗೆ ಮೊದಲನೆಯದು. ರಾಜಕೀಯ ತನ್ನ ಉದ್ದೇಶವಲ್ಲವೆಂದು ಹೇಳಿದ ಮತ್ತು ದೇಶದ ಸಮಸ್ಯೆ ತಮ್ಮ ಸಮಸ್ಯೆಯೂ ಹೌದೆಂದು ಅರ್ಥಮಾಡಿಕೊಂಡ ಯುವ ಉತ್ಸಾಹಿಗಳೆಲ್ಲ ಈ ಯೋಚನೆಗೆ ಸಾಥ್ ಕೊಟ್ಟರು. ಪರಿಣಾಮವಾಗಿ ಮೊದಲ ಬಾರಿಗೆ ಮೋದಿ ಸರಕಾರಕ್ಕೆ ಸವಾಲೊಡ್ಡಿ ಯುವಜನತೆ ತಮ್ಮ ಸಾಂಕೇತಿಕ ಬೇಡಿಕೆಯನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಪ್ರಜೆಗಳು ಹೇಳಿದರೆಂದು ಏನೂ ನಡೆಯದೆ ಇರುವ ಪ್ರಜಾಪ್ರಭುತ್ವದ ಸ್ಥಿತಿಯನ್ನು ಬದಲಾಯಿಸಿದ ಕೀರ್ತಿ ಸಲ್ಲಬೇಕಾದದ್ದು ಯುವಜನತೆಗೆ. ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಎಂಬುದನ್ನು ನೆನಪಿಸಿಕೊಂಡರೆ ವರ್ಧಮಾನದ ಶಕ್ತಿ ಗೊತ್ತಾದೀತು.
1975ರ ತುರ್ತುಪರಿಸ್ಥಿತಿಯ ನಂತರ ಜನಾಭಿಪ್ರಾಯವನ್ನು ಲೆಕ್ಕಿಸದೆ ತನ್ನಿಚ್ಛೆಯನ್ನು ಸಾಧಿಸಹೊರಟ ಒಕ್ಕೂಟ ಸರಕಾರದ ವಿರುದ್ಧ ಬಹುಪಾಲು ನಿವೃತ್ತರು, ಹಿರಿಯರು, ವಿದ್ವಾಂಸರು, ಸಾಹಿತಿ-ಕಲಾವಿದರು, ಬುದ್ಧಿಜೀವಿಗಳು ಮುಂತಾದವರು ಬಾಲಮಡಚಿ ಸುಮ್ಮನಿದ್ದ ಈ ಕಾಲದಲ್ಲಿ ವಿದ್ಯಾರ್ಥಿಗಳು ಈ ರೀತಿ ಸ್ಫೋಟಗೊಂಡದ್ದು ಒಂದು ಅಸಾಮಾನ್ಯ ಸಂಗತಿ.
ಈ ಬೆಳವಣಿಗೆಗೆ ಅರಿತೋ ಅರಿಯದೆಯೋ ಇಂಬುಕೊಟ್ಟಂತಿದ್ದ ಭಾರತದ ಮುಖ್ಯ ನ್ಯಾಯಮೂರ್ತಿಗಳು ಅರಿವಿಲ್ಲದೆ ಕಾಕ್ರೋಚ್ ಎಂಬ ಪದವನ್ನು ಬಳಸಿದ್ದು ಅನಗತ್ಯ ಅಥವಾ ಅವರ ಉದ್ದೇಶ-ಅವರೇ ನಂತರದಲ್ಲಿ ಸಮರ್ಥಿಸಿಕೊಂಡಂತೆ- ಮತ್ತು ಅದು ಯಾರನ್ನೂ ಉದ್ದೇಶಿಸಿ ಹೇಳಿದ್ದಲ್ಲವೆಂದು ನೀಡಿದ ಹೇಳಿಕೆ ಸ್ವೀಕೃತವಾಗಲಿಲ್ಲ. ಅದೀಗ ಲೇವಡಿಗೆ ಕಾರಣವಾಗಿದೆ. ಆದರೆ ಇದು ಎಲ್ಲ ಹಿರಿಯರಿಗೆ ಮುನ್ನೆಚ್ಚರಿಕೆ: ದಯವಿಟ್ಟು ನಿಮ್ಮ ನಾಲಗೆಯನ್ನು ಹಿಡಿತದಲ್ಲಿಡಿ. ಅಧಿಕಾರವಿದೆಯೆಂದು ಏನು ಮಾತನಾಡಿದರೂ ಸಹಿಸುವ ಜಾಯಮಾನ ಇಂದಿನ ಯುವಜನತೆಯದಲ್ಲ ಎಂಬ ಎಚ್ಚರಿಕೆಯನ್ನು ಯುವಜನತೆಯು ಸರಕಾರಕ್ಕೆ ಮತ್ತು ಅದರ ಎಲ್ಲ ಅಂಗಗಳಿಗೆ ನೀಡಿದೆ.
ಹಿಂದೆಲ್ಲ ಸಡಿಲ ಮಾತು ಕೆಲವೇ ಜನರಿಗೆ ಮೀಸಲಾಗಿತ್ತು. ಅದನ್ನು ನೇರಾನೇರ ಅಸಭ್ಯತೆಯೆಂದು ಘೋಷಿಲಾಗುತ್ತಿತ್ತು. ಸಾರ್ವಜನಿಕವಾಗಿ ತೀರ ಹಗುರಾಗಲು ರಾಜಕೀಯ ನಾಯಕರೂ ಸಿದ್ಧರಾಗಿರಲಿಲ್ಲ. ಇದ್ದಾಗಲೂ ಇಲ್ಲದಿದ್ದಾಗಲೂ ಜನರು ತಮ್ಮನ್ನು ಗೌರವಿಸಬೇಕೆಂಬ ಹಪಹಪಿಕೆ ಬಹುತೇಕ ನಾಯಕರಿಗಿತ್ತು. ಹೀಗೆಯೇ ಸಾರ್ವಜನಿಕ ಹೊಣೆ ಹೊತ್ತ ಅಧಿಕಾರಿಗಳೂ ತುಸುವಾದರೂ ಶಬ್ದದ ಲಜ್ಜೆಯನ್ನು ಪ್ರದರ್ಶಿಸುತ್ತಿದ್ದರು. ಯಾವುದೇ ಹಂತದ ಅಧಿಕಾರಿಗಳಾದರೂ ಸಾರ್ವಜನಿಕವಾಗಿ ತೆರೆದುಕೊಳ್ಳುತ್ತಿದ್ದದ್ದು ಅಪರೂಪ. ಏನಾದರೂ ಮಾತನಾಡಬೇಕೆಂದರೆ ಅದನ್ನು ಸಾಕಷ್ಟು ಮುಂಚಿತವಾಗಿ ಸಜ್ಜುಗೊಳಿಸು ತ್ತಿದ್ದರು. ಅದಕ್ಕೆ ಯಾವುದೇ ರೀತಿಯ ವಿವಾದ ಅಂಟಿಕೊಳ್ಳದಂತೆ, ರಾಜಕೀಯದ ವಾಸನೆ ಬಾರದಂತೆ ಮಾತುಗಾರರು ಎಚ್ಚರ ವಹಿಸುತ್ತಿದ್ದರು.
ಕಳೆದ ಒಂದೆರಡು ದಶಕಗಳಲ್ಲಿ ಭಾರತದ ಯೋಚನಾ ಲಹರಿ ಸಂಪೂರ್ಣ ಬದಲಾಗಿದೆ. ಒಂದಷ್ಟು ಜನರು ಸಮಾಜದ ಕಡೆಗೆ ತಲೆಹಾಕದೆ ತಮ್ಮ ತಮ್ಮ ಲಾಭದ, ಪ್ರತಿಷ್ಠೆಯ, ಪ್ರಸಿದ್ಧಿಯ, ಪ್ರಚಾರದ ಯೋಚನೆ-ಯೋಜನೆಗಳಲ್ಲಿ ಮುಳುಗಿದ್ದರೆ, ಇನ್ನುಳಿದವರು ಬೇಕಾಬಿಟ್ಟಿ ವ್ಯವಹರಿಸುತ್ತಿದ್ದಾರೆ. ಹಿಂದೆ ಯಾವುದೇ ಸ್ಥಾನಕ್ಕೆ ಆಯ್ಕೆಯಾಗಬೇಕಾದರೆ ಚಾರಿತ್ರ್ಯ ಅಗತ್ಯವಾಗಿತ್ತು. ಆದರೆ ಯಾವಾಗ ಹಣ, ಭ್ರಷ್ಟಾಚಾರ ಮುಂತಾದವು ಬದುಕಿನ ಆಧಾರವಾದ ಮೇಲೆ, ಯಾರು ಬೇಕಾದರೂ ನಾಯಕರಾಗಬಹುದೆಂಬ ಹೊಸ ಪ್ರಜಾಪ್ರಭುತ್ವ ನೀತಿಯು ಸ್ವೀಕೃತವಾಯಿತು. ಸಾರ್ವಜನಿಕ ನೆನಪು ತೀರ ಕಿರಿದಾದಾಗ ಮತ್ತು ಎಲ್ಲವೂ ಕ್ಷಮಿಸಬಲ್ಲ ದೋಷಗಳಾದಾಗ, ವೈಯಕ್ತಿಕ ಇಲ್ಲವೇ ಸಂಘಟಿತ ಲಾಭ ತರುವ ಯಾವುದೇ ಹುಳುಕು, ಕ್ಷಮಾರ್ಹವಾಗುತ್ತದೆ. ತೀರ ಅಸಭ್ಯ, ಅಶ್ಲೀಲ, ಹಿಂಸಾಪ್ರಚೋದಕ ಮಾತುಗಳು ಜನರಿಗೆ ಇಷ್ಟವಾಗುತ್ತದೆಂದಾದರೆ ಅದನ್ನು ಮಾತನಾಡುವ ರಾಜಕಾರಣಿಗಳಿಗೆ ಬರವಿಲ್ಲ. ಅದೀಗ ವಿವಾದವನ್ನೆಬ್ಬಿಸುತ್ತದೆಯಾದರೂ ಅದನ್ನು ಅಪ್ಪಿಕೊಳ್ಳುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.
ರಾಜಕಾರಣಿಗಳನ್ನು ತಿದ್ದುವವರಿಲ್ಲ. ಇವರಿಗೆ ಸಾಥ್ ನೀಡುವ ಅಧಿಕಾರಿಗಳು ಇವರಿಗಿಂತ ಕಡಿಮೆಯೇನಲ್ಲ. ಅಧಿಕಾರಶಾಹಿಯು ಮಾತನಾಡುವ ಸಂದರ್ಭ ಕಡಿಮೆ. ಆದರೆ ಕೇಡಿನ ಕಡೆಗೆ ಅವರ ನಡೆ; ಮತ್ತು ದುಡಿಮೆ.
ಈ ಎರಡು ಅಂಗಗಳಿಗೆ ಹೋಲಿಸಿದರೆ ನ್ಯಾಯಾಂಗ ಹೆಚ್ಚು ಗೌರವಯುತವಾಗಿದೆ. ಈ ಎರಡೂ ಅಂಗಗಳನ್ನು ನಿಯಂತ್ರಿಸುವ ಅಧಿಕಾರ, ಸಾಮರ್ಥ್ಯವಿರುವುದು, ಇರಬೇಕಾದದ್ದು ನ್ಯಾಯಾಂಗಕ್ಕೆ. ಆದರೆ ಮೊದಮೊದಲು ನ್ಯಾಯಾಂಗವು ತನ್ನ ತುಟಿಗಳನ್ನು ಹೊಲಿದುಕೊಂಡು ನ್ಯಾಯ ನೀಡುವುದಕ್ಕೆ ಮತ್ತು ಸಮಾಜದ ಕೇಡುಗಳನ್ನು ದೂರವಿಡುವುದಕ್ಕೆ ಮಾತ್ರ ಉತ್ಸುಕವಾಗಿರುತ್ತಿತ್ತು. ಕೈಮೀರಿ ಒಂದು ಪುಟ್ಟ/ಸಣ್ಣ ತಪ್ಪಾದರೂ ನ್ಯಾಯಮೂರ್ತಿಗಳು, ನ್ಯಾಯಾಧೀಶರು ಕೊರಗುತ್ತಿದ್ದರು, ಮರುಗುತ್ತಿದ್ದರು. ನ್ಯಾಯಾಂಗದ ನಿಷ್ಠುರ ರೀತಿ-ನೀತಿ ಇತರ ಎಲ್ಲಾ ಅಂಗಗಳನ್ನು ಹದ್ದಿನಲ್ಲಿಡಲು ಶಕ್ತವಾಗಿತ್ತು.
ನ್ಯಾಯಾಂಗದಲ್ಲಿ ಈಚೆಗಿನ ದಶಕಗಳ ಬದಲಾವಣೆಯನ್ನು ಗಮನಿಸಬಹುದು: ಸಮಾಜದ ವಿನಾಶಕಾರೀ ಸಂಗತಿಗಳನ್ನು ಅಗತ್ಯವಿರಲಿ, ಇಲ್ಲದಿರಲಿ, ತೀರ್ಪಿನ ಮೂಲಕ ಟೀಕಿಸುವುದು ಮತ್ತು ಬಹಿರಂಗವಾಗಿಯೇ ತಮ್ಮ ಇಷ್ಟಾನಿಷ್ಟಗಳನ್ನು, ಅಭಿಮತವನ್ನು ಅದೆಷ್ಟೇ ವಿವಾದಾತ್ಮಕವಾಗಲೀ, ತಮ್ಮ ಹುದ್ದೆಗೆ ಅಗೌರವವನ್ನು ತರಲಿ, ಮಾತಿನ ಮೂಲಕ ಪ್ರಕಟಿಸುವುದು.
ಯಾವುದೇ ತೀರ್ಪನ್ನು ಖಂಡಿಸಬಹುದು. ಹಾಗೆಂದು ಅದನ್ನು ಗೊಂದಲಮಯವಾಗಿ ಮಾಡುವುದು ರಾಜಕಾರಣದ ಲಕ್ಷಣ. ಹಿಂದೆ ತೀರ್ಪುಗಳಿಗೆ ಮಹತ್ತರವಾದ ಗೌರವವಿರುತ್ತಿತ್ತು. ಈಗ ಅದನ್ನು ಮತ್ತು ಆ ತೀರ್ಪನ್ನು ಬರೆದವರನ್ನು ಅರ್ಥಾತ್ ನೀಡಿದವರನ್ನು ಟೀಕಿಸುವ ಮಂದಿ ಹೆಚ್ಚಾಗಿದ್ದಾರೆ.
ಹಿಂದೆ ಸಾಮಾನ್ಯವಾಗಿ ನಿವೃತ್ತಿಯವರೆಗೆ ಯಾವನೇ ಸರಕಾರಿ ಅಧಿಕಾರಿಯಾಗಲೀ ತನ್ನ ವ್ಯವಸ್ಥೆಯನ್ನು ಧಿಕ್ಕರಿಸುತ್ತಿರಲಿಲ್ಲ, ಆನಂತರವೂ ತನ್ನ ಭೂತವನ್ನು ತೆರೆದಿಡುವ ಸಂದರ್ಭದಲ್ಲೂ ಯಾರಿಗೂ ಮುಜುಗರವಾಗದಂತೆ ಜಾಗ್ರತೆ ವಹಿಸುತ್ತಿದ್ದರು, ಈಗ ಉಚ್ಚ ಮತ್ತು ಸರ್ವೋಚ್ಚ ನ್ಯಾಯಮೂರ್ತಿಗಳು ಪಕ್ಷ, ಪಂಗಡ ಮುಂತಾದವುಗಳನ್ನು ಸಮೀಪಿಸುವ ಹೊಸ ವರ್ತನೆ ತುಂಬಾ ಅಪಾಯಕಾರಿ. ನಿವೃತ್ತಿಯ ಸುಖಕ್ಕಿಂತ ನಿವೃತ್ತಿಯಾದ ತಕ್ಷಣ ಸಿಗಬಲ್ಲ ಹುದ್ದೆಯನ್ನು ನಿರೀಕ್ಷಿಸಿ ಅದಕ್ಕೆ ಬೇಕಾದಂತೆ ಮಾತನಾಡುವವರು ಬಹಳಷ್ಟು ಮಂದಿ ಇದ್ದಾರೆ. ಅಧಿಕಾರಾವಧಿ ಮುಗಿದ ಮೇಲೆ ಅಂದರೆ ನಿವೃತ್ತಿಯಾದ ಬಳಿಕ ರಾಜ್ಯಪಾಲ, ರಾಜ್ಯಸಭಾ ಸದಸ್ಯತ್ವ ಮುಂತಾದ ಘನತೆ ಗೌರವಗಳನ್ನು ಇಳಿಸುವ ರಾಜಕೀಯ ಹುದ್ದೆಗಳನ್ನು ಅಲಂಕರಿಸುವುದಕ್ಕೆ ಬಹಳಷ್ಟು ನ್ಯಾಯಮೂರ್ತಿಗಳು ಉತ್ಸಾಹಿಗಳಾದಂತೆ ಕಾಣುತ್ತದೆ. ಇವುಗಳಿಗೆ ನಿದರ್ಶನಗಳ ಅಗತ್ಯವಿಲ್ಲ. ದೈನಂದಿನ ಮಾಧ್ಯಮ ವರದಿಗಳೇ ಸಾಕು.
ಅಧಿಕಾರದಲ್ಲಿದ್ದಾಗಲೇ ವೈಯಕ್ತಿಕ ಅಹಂ ಬಹು ದೂರಗಾಮಿ ಆದರೆ ಸ್ವಾರ್ಥಪರ ದೃಷ್ಟಿಕೋನವನ್ನು ಚಾಚುತ್ತದೆ. ಒಂದೇ ಹಂತದ ವ್ಯವಸ್ಥೆಯಲ್ಲಿ ಭಿನ್ನಾಬಿಪ್ರಾಯವು ಢಾಳಾಗಿ ಕಾಣಿಸುತ್ತಿದೆ. ಅನೇಕ ನ್ಯಾಯಮೂರ್ತಿಗಳು ಪಕ್ಷ-ಪಂಗಡಗಳ ಪರ-ವಿರೋಧಗಳನ್ನು ನ್ಯಾಯಾಲಯಗಳಲ್ಲೇ ಪ್ರಕಟಿಸುತ್ತಾರೆ; ಪ್ರದರ್ಶಿಸುತ್ತಾರೆ. ಸರ್ವೋಚ್ಚ ನ್ಯಾಯಾಲಯದಲ್ಲಂತೂ ವಿವಿಧ ಪೀಠಗಳು ತಮ್ಮ ಹುದ್ದೆಯ ಶೀಲವನ್ನು ಅರ್ಥಮಾಡಿಕೊಳ್ಳದೆಯೇ ಪರಸ್ಪರ ಟೀಕೆಗಳಲ್ಲಿ, ತಿಕ್ಕಾಟಗಳಲ್ಲಿ, ತೊಡಗಿದ ಉದಾಹರಣೆಗಳಿವೆ. ಒಂದು ಪೀಠ ನೀಡಿದ ತೀರ್ಪಿಗೆ ವ್ಯತಿರಿಕ್ತವಾಗಿ ಇನ್ನೊಂದು ಪೀಠವು ತೀರ್ಪು ನೀಡುವುದು ಹೊಸತೇನಲ್ಲವಾದರೂ ಈಗ ಆ ಭಿನ್ನ ಕ್ರಿಯೆ-ಪ್ರತಿಕ್ರಿಯೆಗಳು ಅಸಹನೀಯತೆಯನ್ನು ತೋರಿಸುತ್ತಿವೆ. ಏನು ಬೇಕಾದರೂ ಮಾತನಾಡಬಹುದು ಎಂಬ ನೀತಿಗೆ ನ್ಯಾಯಮೂರ್ತಿಗಳು ಬದ್ಧರಾದಂತೆ ಕಾಣುತ್ತದೆ, ಮೊನ್ನೆ ಮೊನ್ನೆ ಸಮೂಹ ಹಲ್ಲೆಯಿಂದ ರಕ್ಷಣೆ ಬೇಡಿದ ಸಂಸದರೊಬ್ಬರಿಗೆ ‘‘ಮೊಟ್ಟೆಗಳ ಎಸೆತಕ್ಕೆ ನೀವು ಹೆದರಿದರೆ ಗುಂಡಿನ ಎಸೆತಕ್ಕೆ ಎದೆಕೊಟ್ಟ ಸ್ವಾತಂತ್ರ್ಯ ವೀರರು ಏನು ಮಾಡಬೇಕು?’’ ಎಂಬ ಪ್ರಶ್ನೆ ಹಾಕಿ ಪ್ರಕರಣವನ್ನು ತಿರಸ್ಕರಿಸಿದರು. ಅಲ್ಲಿಗೆ ಮೊಟ್ಟೆಗಳ ಎಸೆತ ಮಾನ್ಯವಾಯಿತು. ಸ್ವಾತಂತ್ರ್ಯ ಅತಂತ್ರವಾಯಿತು.
ಈಗಾಗಲೇ ಸಾಂವಿಧಾನಿಕ ಪೀಠದಿಂದ ಇತ್ಯರ್ಥಗೊಂಡ ಕೊಲಿಜಿಯಂ ಪದ್ಧತಿಯನ್ನು ಒಬ್ಬರು ನ್ಯಾಯಮೂರ್ತಿಗಳು ಸಮರ್ಥಿಸಿದರೆ ಇನ್ನೊಬ್ಬರು ಟೀಕಿಸುತ್ತಾರೆ. ಇಂತಹ ಅನೇಕ ಉದಾಹರಣೆಗಳಿವೆ. ಆಚಾರವಿಲ್ಲದ ನಾಲಗೆ ಬೇರೆ. ಆಚಾರವಿದ್ದರೂ ಹಿಡಿತವಿಲ್ಲದ ನಾಲಗೆ ಬೇರೆ. ಹಿಂದಿನ ಕಾಲದಲ್ಲಿ ಪ್ರಾಣಿಗಳು ವೇಗವಾಗಿ ಓಡುವಾಗ ಅವುಗಳ ಕಾಲುಗಳ ಉಗುರು, ಖರಪುಟಗಳು ಕಲ್ಲುಗಳಿಗೆ ಸ್ಪರ್ಶಿಸಿದಾಗ ಬೆಂಕಿಯ ಕಿಡಿ ಹುಟ್ಟಿ ಕಾಡಿಗೆ ಕಾಡೇ ಹೊತ್ತಿ ಉರಿಯುತ್ತಿತ್ತಂತೆ. ಧರ್ಮರಾಜನೇ ಸುಳ್ಳು ಹೇಳಿ ದ್ರೋಣನ ಸಾವಿಗೆ ಕಾರಣನಾದನೆಂಬ ಅಪಖ್ಯಾತಿಗೆ ತುತ್ತಾಗಿರುವಾಗ ಈಗ ಈ ಬೆಂಕಿ ಹಚ್ಚುವ ಮಾತುಗಳು ಅದನ್ನೂ ಮೀರಿಸಿ ದೇಶಕ್ಕೆ ದೇಶವೇ ಉರಿಯಲು ದಾರಿಯಾಗಬಲ್ಲವು. ಅಲ್ಲದೆ ಮಾತುಗಳಿಗೆ ವಿಪರೀತಾರ್ಥವನ್ನು ಕಲ್ಪಿಸುವ ಹವ್ಯಾಸ ಈಗ ವ್ಯವಸಾಯವಾಗಿರುವಾಗ ಮೌನವೇ ಪರಮ ನೀತಿಯಾಗಿರಬೇಕು ಅಥವಾ ಮಾತು ಜ್ಯೋತಿರ್ಲಿಂಗವಾಗಬೇಕು.