AI ಬಳಕೆಯಲ್ಲಿ 64ನೇ ಸ್ಥಾನದಲ್ಲಿ ಭಾರತ; AI ಕುರಿತ ಮೈಕ್ರೋಸಾಫ್ಟ್ ವರದಿಯಲ್ಲಿ ಏನಿದೆ?
ಸಾಂದರ್ಭಿಕ ಚಿತ್ರ | Photo Credit : freepik
ವರದಿಯ ಪ್ರಕಾರ 2025ರ ಎರಡನೇ ಅರ್ಧಭಾಗದಲ್ಲಿ ಚೀನಾ, ಬ್ರೆಝಿಲ್, ಜರ್ಮನಿ, ಜಪಾನ್ ಮತ್ತು ಅಮೆರಿಕಗಳಿಗೆ ಹೋಲಿಸಿದಲ್ಲಿ ಭಾರತ ಹಿಂದೆ ಬಿದ್ದಿರುವುದು ಮುಂದುವರಿದಿದೆ.
ಜಾಗತಿಕವಾಗಿ ಕೃತಕಬುದ್ಧಿಮತ್ತೆ (AI) ಅಳವಡಿಸಿಕೊಳ್ಳುವುದು ವೇಗವಾಗಿ ಸಾಗುತ್ತಿರುವಾಗ ಭಾರತದಲ್ಲಿ ನಿಧಾನಗತಿಯ ಅಳವಡಿಕೆ ಕಂಡುಬರುತ್ತಿದೆ ಎಂದು ಮೈಕ್ರೋಸಾಫ್ಟ್ ವರದಿಯೊಂದು ಹೇಳಿದೆ. ವರದಿಯ ಪ್ರಕಾರ 2025ರ ಎರಡನೇ ಅರ್ಧಭಾಗದಲ್ಲಿ ಚೀನಾ, ಬ್ರೆಝಿಲ್, ಜರ್ಮನಿ, ಜಪಾನ್ ಮತ್ತು ಅಮೆರಿಕಗಳಿಗೆ ಹೋಲಿಸಿದಲ್ಲಿ ಭಾರತ ಹಿಂದೆ ಬಿದ್ದಿರುವುದು ಮುಂದುವರಿದಿದೆ.
ದೇಶದಲ್ಲಿ AI ಚದುರುವಿಕೆಯು 2025ರ ಮೊದಲನೇ ಅರ್ಧಭಾಗಕ್ಕೆ ಹೋಲಿಸಿದಲ್ಲಿ ಎರಡನೇ ಅರ್ಧಭಾಗದಲ್ಲಿ ಶೇ 1.4ರಷ್ಟು ಏರಿಕೆಯಾಗಿದೆ. ಅಂದರೆ ಶೇ 14.2ರಿಂದ ಶೇ. 15.7ರಷ್ಟು ಏರಿಕೆಯಾಗಿದೆ. ಜನವರಿ 8ರಂದು ಮೈಕ್ರೋಸಾಫ್ಟ್‌ನ AI ಇಕಾನಮಿ ಇನ್‌ಸ್ಟಿಟ್ಯೂಟ್ (ಎಐಇಐ) ಪ್ರಕಟಿಸಿದ ‘ಅಐ ಡಿಫ್ಯೂಶನ್ ರಿಪೋರ್ಟ್’ ಎನ್ನುವ ವರದಿಯಲ್ಲಿ ಈ ವಿವರಗಳಿವೆ.
ವರದಿಯ ಪ್ರಕಾರ 2025ರ ಎರಡನೇ ಅವಧಿಯಲ್ಲಿ ಜಾಗತಿಕವಾಗಿ ಎಐ ಬಳಕೆಯು ಶೇ 1.2ರಷ್ಟು ಏರಿಕೆಯಾಗಿ ಶೇ 16.3ರಷ್ಟಾಗಿದೆ. ಮೊದಲನೇ ಅವಧಿಯಲ್ಲಿ AI ಬಳಕೆಯು ಶೇ 15.1ರಷ್ಟಿತ್ತು. ಪ್ರಸ್ತುತ ಜಾಗತಿಕವಾಗಿ ಆರು ಮಂದಿಯಲ್ಲಿ ಒಬ್ಬ ವ್ಯಕ್ತಿ ಎಐ ಟೂಲ್‌ಗಳನ್ನು ಬಳಸುತ್ತಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸಿಂಗಾಪುರ ಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಜನರು AI ಬಳಸುತ್ತಿದ್ದಾರೆ. ಆ ನಂತರದ ಸ್ಥಾನದಲ್ಲಿ ನಾರ್ವೆ, ಐರ್ಲ್ಯಾಂಡ್, ಫ್ರಾನ್ಸ್ ಮತ್ತು ಸ್ಪೇನ್ ರಾಷ್ಟ್ರಗಳಿವೆ.
64ನೇ ಸ್ಥಾನದಲ್ಲಿರುವ ಭಾರತ
ಆದರೆ 1.45 ಶತಕೋಟಿ ಜನಸಂಖ್ಯೆ ಇರುವ ಭಾರತ ಪ್ರಸ್ತುತ ಪಟ್ಟಿಯಲ್ಲಿ 64ನೇ ಸ್ಥಾನದಲ್ಲಿದೆ. ದೇಶದಲ್ಲಿ AI ದೈತ್ಯರಾದ OpenAI, ಆಂತ್ರೋಪಿಕ್, ಗೂಗಲ್ ಮತ್ತು ಪರ್ಪ್ಲೆಕ್ಸಿಟಿಗಳಿಗೆ ಪ್ರಮುಖ ಬಳಕೆದಾರ ಪ್ರಗತಿ ಮಾರುಕಟ್ಟೆಯನ್ನು ಗುರುತಿಸಿರುವ ಸಂದರ್ಭದಲ್ಲಿ ಈ ವರದಿ ಬಂದಿದೆ.
ಸುಮಾರು 730 ದಶಲಕ್ಷ ಮೊಬೈಲ್ ಸಾಧನಗಳನ್ನು ಬಳಸುವ ಭಾರತ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರ್ಕೆಟ್ ಆಗಿರುತ್ತದೆ. ಹೀಗಾಗಿ ಸರಾಸರಿ ಭಾರತೀಯರು ಮಾಸಿಕ 21 ಗಿಗಾಬೈಟ್‌ಗಳಷ್ಟು ದತ್ತಾಂಶವನ್ನು ಬಳಸುತ್ತಾರೆ. ಪ್ರತಿ ಗಿಗಾಬೈಟ್‌ಗೆ 9.2 ಸೆಂಟ್‌ಗಳಷ್ಟು ಪಾವತಿಸುತ್ತಾರೆ. ಇದು ಜಾಗತಿಕವಾಗಿ ಅತಿ ಕಡಿಮೆ ದತ್ತಾಂಶ ದರವಾಗಿದೆ.
ದಕ್ಷಿಣಕ್ಕೂ ಉತ್ತರಕ್ಕೂ ದೊಡ್ಡ ಅಂತರ
ಮೈಕ್ರೋಸಾಫ್ಟ್ ವರದಿಯಲ್ಲಿ ಉಲ್ಲೇಖಿಸಲಾದ ಮತ್ತೊಂದು ವಿವರವೆಂದರೆ, ಜಾಗತಿಕವಾಗಿ ಉತ್ತರ ಭಾಗದಲ್ಲಿ ದಕ್ಷಿಣಕ್ಕೆ ಹೋಲಿಸಿದರೆ ದುಪ್ಪಟ್ಟು ವೇಗದಲ್ಲಿ AI ಬಳಕೆ ಆರಂಭವಾಗಿದೆ. ಜಾಗತಿಕ ಉತ್ತರ ಭಾಗದಲ್ಲಿ ಸುಮಾರು ಶೇ 24.7ರಷ್ಟು ಪ್ರಮಾಣದಲ್ಲಿ AI ಬಳಕೆಯಾಗುತ್ತಿದೆ. ಆದರೆ ಜಾಗತಿಕ ದಕ್ಷಿಣ ಭಾಗದಲ್ಲಿ ಶೇ 14.1ರಷ್ಟು ಮಾತ್ರವೇ ಬಳಕೆಯಾಗುತ್ತಿದೆ. ಅತಿ ಹೆಚ್ಚು AI ಬಳಕೆ ಮಾಡುವ ದೇಶಗಳು ಅತ್ಯಧಿಕ ಆದಾಯವಿರುವ ಅರ್ಥವ್ಯವಸ್ಥೆಗಳಾಗಿರುತ್ತವೆ. ಒಟ್ಟಿನಲ್ಲಿ ಜಗತ್ತು AI ಅನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದರೆ ಭಾರತ ಮತ್ತು ದಕ್ಷಿಣದ ಭಾಗ ಹಿಂದೆ ಬೀಳುತ್ತಿದೆ. ಈ ಅನ್ವೇಷಣೆಯ ಅಲೆಯಲ್ಲಿ ಹೆಚ್ಚು ಮಂದಿಗೆ ತಲುಪಿಸುವ ಸವಾಲು ಮುಂದೆ ಇದೆ ಎಂದು ವರದಿ ಹೇಳಿದೆ.
AI ಮೂಲಸೌಕರ್ಯದಲ್ಲಿ ಹೂಡಿಕೆ
ಡಿಜಿಟಲ್ ಮೂಲಸೌಕರ್ಯದಲ್ಲಿ ಆರಂಭಿಕ ಹಂತದಲ್ಲಿ ಹೂಡಿಕೆ ಮಾಡಿರುವ ದೇಶಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ), ಸಿಂಗಾಪೂರ್, ನಾರ್ವೆ, ಐರ್ಲ್ಯಾಂಡ್, ಫ್ರಾನ್ಸ್ ಮತ್ತು ಸ್ಪೇನ್‌ಗಳು ಎಐ ಕೌಶಲ್ಯ ಮತ್ತು ಅಳವಡಿಕೆಯಲ್ಲಿ ಮುಂಚೂಣಿಯಲ್ಲಿವೆ. 2025ರ ಅಂತ್ಯಭಾಗದಲ್ಲಿ ಯುಎಇಯ ಶೇ 64ರಷ್ಟು ಮಂದಿ ಎಐ ಬಳಸುತ್ತಿದೆ. ಅದೇ ಸಂದರ್ಭದಲ್ಲಿ ಸಿಂಗಾಪುರದಲ್ಲಿ ಶೇ 60.0ರಷ್ಟು ಎಐ ಬಳಕೆಯಾಗುತ್ತಿದೆ.
ಅನ್ವೇಷಣೆ ಎಂದರೆ ಅಳವಡಿಕೆಯಲ್ಲ
ಎಐ ಮೂಲಸೌಕರ್ಯ ಮತ್ತು ಫ್ರಂಟಿಯರ್ ಮಾಡೆಲ್ ಅಭಿವೃದ್ಧಿಯಲ್ಲಿ ಅಮೆರಿಕ ಮುಂಚೂಣಿಯಲ್ಲಿದ್ದರೂ ಎಐ ಬಳಕೆಯಲ್ಲಿ ಹಿಂದಿದೆ. 23ರಿಂದ 24ನೇ ಸ್ಥಾನದಲ್ಲಿದೆ. ದೇಶದಲ್ಲಿ ಶೇ 28.3ರಷ್ಟು ಮಾತ್ರ ಎಐ ಬಳಕೆಯಾಗುತ್ತಿದೆ. ದಕ್ಷಿಣ ಕೊರಿಯ ವೇಗವಾಗಿ ಎಐ ಅಳವಡಿಸಿಕೊಳ್ಳುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ದಕ್ಷಿಣ ಕೊರಿಯ 2025ರ ಆರಂಭದಲ್ಲಿ 25ನೇ ಸ್ಥಾನದಲ್ಲಿದ್ದರೆ, ಅಂತ್ಯಕ್ಕಾಗುವಾಗ 18ನೇ ಸ್ಥಾನಕ್ಕೇರಿದೆ. ಈ ದೇಶದಲ್ಲಿ ಶೇ 26ರಿಂದ 30ರಷ್ಟು ಮಂದಿ ಎಐ ಬಳಸುತ್ತಿದ್ದಾರೆ. ದಕ್ಷಿಣ ಕೊರಿಯದಲ್ಲಿ ರಾಷ್ಟ್ರೀಯ ನೀತಿಗಳು ಮತ್ತು ಕೊರಿಯನ್ ಭಾಷೆಯಲ್ಲಿ ಫ್ರಂಟಿಯರ್ ಮಾಡೆಲ್‌ಗಳು ಬಂದಿರುವುದು, ಗ್ರಾಹಕಮುಖಿ ವೈಶಿಷ್ಟ್ಯಗಳು ಬಳಕೆ ಏರಲು ಕಾರಣವಾಗಿದೆ. ಮತ್ತೊಂದು ಮುಖ್ಯ ಕಾರಣವೆಂದರೆ ಜನರೇಟಿವ್ ಎಐ ಅನ್ನು ಸದ್ಯ ಶಾಲೆಗಳು, ಕಾರ್ಯಸ್ಥಳಗಳು ಮತ್ತು ಸಾರ್ವಜನಿಕ ಸೇವೆಗಳಲ್ಲಿ ಬಳಸಲಾಗುತ್ತಿದೆ. ಹೀಗಾಗಿ ದಕ್ಷಿಣ ಕೊರಿಯ ಚಾಟ್‌ಜಿಪಿಟಿಯ ಅತಿ ವೇಗವಾಗಿ ಬೆಳೆಯುವ ಮಾರುಕಟ್ಟೆಯಾಗಿದೆ. ಎಐ ಉತ್ಪಾದಿತ ಗಿಬ್ಲಿ ಸ್ಟೈಲ್ ಚಿತ್ರಗಳು ದಕ್ಷಿಣ ಕೊರಿಯದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಈ ನಡುವೆ ಚೀನಾ ಮೂಲದ ಡೀಪ್ ಸೀಕ್ ರಷ್ಯಾ, ಇರಾನ್, ಕ್ಯೂಬಾ ಮತ್ತು ಬೆಲಾರಸ್‌ಗಳಲ್ಲಿ ಜನಪ್ರಿಯತೆ ಪಡೆದಿದೆ.