ಏಶ್ಯಕಪ್: ಒಮಾನ್ ತಂಡಕ್ಕೆ ಸೋಲುಣಿಸಿದ ಯುಎಇ
ಮುಹಮ್ಮದ್ ವಸೀಂ, ಅಲಿಶನ್ ಶರಫು ಅರ್ಧಶತಕ
Photo Credit : X.com
ಅಬುಧಾಬಿ, ಸೆ.15: ಆರಂಭಿಕ ಆಟಗಾರರಾದ ಮುಹಮ್ಮದ್ ವಸೀಂ (69 ರನ್, 54 ಎಸೆತ),ಅಲಿಶನ್ ಶರಫು(51 ರನ್, 38 ಎಸೆತ)ಅರ್ಧಶತಕದ ಕೊಡುಗೆ ಹಾಗೂ ಜುನೈದ್ ಸಿದ್ದೀಕ್(4-23) ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಯುಎಇ ಕ್ರಿಕೆಟ್ ತಂಡ ಒಮಾನ್ ತಂಡದ ವಿರುದ್ಧದ ಏಶ್ಯಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ 42 ರನ್‌ಗಳ ಅಂತರದಿಂದ ಜಯ ಸಾಧಿಸಿದೆ.
ಈ ಮೂಲಕ ಪಂದ್ಯಾವಳಿಯಲ್ಲಿ ಅಂಕದ ಖಾತೆ ತೆರೆದಿದೆ.
ಸೋಮವಾರ ನಡೆದ ಏಶ್ಯಕಪ್ ನ 7ನೇ ಪಂದ್ಯದಲ್ಲಿ ಗೆಲ್ಲಲು 173 ರನ್ ಗುರಿ ಪಡೆದಿದ್ದ ಒಮಾನ್ ತಂಡವು 18.4 ಓವರ್‌ಗಳಲ್ಲಿ ಕೇವಲ 130 ರನ್‌ಗೆ ಆಲೌಟಾಯಿತು.
ಒಮಾನ್ ತಂಡದ ಪರ ಆರ್ಯನ್ ಬಿಶ್ತ್(24 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ಜಿತೇಂದರ್ ಸಿಂಗ್(20 ರನ್), ವಿನಾಯಕ ಶುಕ್ಲಾ(20 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಯುಎಇ ಪರ ವೇಗದ ಬೌಲರ್ ಸಿದ್ದೀಕ್ ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಜವಾದುಲ್ಲಾ(2-18) ಹಾಗೂ ಹೈದರ್ ಅಲಿ(2-22)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.
ಯುಎಇ 172/5:
ಇದಕ್ಕೂ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಯುಎಇ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 172 ರನ್ ಗಳಿಸಿತು.
ನಾಯಕ ಮುಹಮ್ಮದ್ ವಸೀಂ(69 ರನ್, 54 ಎಸೆತ, 6 ಬೌಂಡರಿ,3 ಸಿಕ್ಸರ್)ಹಾಗೂ ಅಲಿಶನ್ ಶರಫು(51 ರನ್, 38 ಎಸೆತ, 7 ಬೌಂಡರಿ, 1 ಸಿಕ್ಸರ್)ಮೊದಲ ವಿಕೆಟ್‌ಗೆ 88 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
ಯುಎಇ ತಂಡವು 3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿತು. ಮುಂದಿನ 3 ಓವರ್‌ಗಳಲ್ಲಿ 39 ರನ್ ಗಳಿಸಿತು. ಆ ನಂತರ ಹಿಂತಿರುಗಿ ನೋಡಲಿಲ್ಲ.
ವಸೀಂ ಅವರು 27 ಹಾಗೂ 34 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು.
ಆಸಿಫ್ ಖಾನ್(2 ರನ್) ಹಾಗೂ ರಾಹುಲ್ ಚೋಪ್ರಾ(0)ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡ ಯುಎಇ ತಂಡವು ಅಂತಿಮವಾಗಿ ಗೌರವಾರ್ಹ ಮೊತ್ತ ಕಲೆ ಹಾಕಿತು.
ಮುಹಮ್ಮದ್ ರೊಹೈಬ್(21 ರನ್, 13 ಎಸೆತ)ಹಾಗೂ ಹರ್ಷಿತ್ ಕೌಶಿಕ್(ಔಟಾಗದೆ 19, 8 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಒಮಾನ್ ಪರ ಜಿತೇನ್ ರಾಮನಂದಿ(2-24) ಯಶಸ್ವಿ ಪ್ರದರ್ಶನ ನೀಡಿದರು. ಶಾ ಫೈಸಲ್ 19ನೇ ಓವರ್‌ನಲ್ಲಿ 18 ರನ್ ನೀಡಿದರು. 4 ಓವರ್‌ಗಳಲ್ಲಿ 45 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು. ಯುಎಇ ತಂಡವು ಕೊನೆಯ ಓವರ್‌ನಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡರೂ ಎದುರಾಳಿ ತಂಡಕ್ಕೆ ಸಾಕಷ್ಟು ಹಾನಿ ಮಾಡಿತು.