ಭಾರತ FIFA ವಿಶ್ವಕಪ್ ಗೆ ಅರ್ಹತೆ ಪಡೆಯುವುದು ಯಾವಾಗ?; ರಾಜ್ಯಸಭೆಯಲ್ಲಿ ಪ್ರಶ್ನೆ
Photo Credit ; NDTV
ಹೊಸದಿಲ್ಲಿ, ಡಿ. 18: ಕೇರಳದ ರಾಜ್ಯಸಭಾ ಸದಸ್ಯ ಜೋಸ್ ಕೆ. ಮಣಿ ಗುರುವಾರ ಸದನದಲ್ಲಿ ಭಾರತೀಯ ಫುಟ್ಬಾಲ್ ತಂಡದ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಜಗತ್ತಿನ ಸಣ್ಣ ದೇಶ ಕ್ಯುರಸೌ 2026ರ ಫಿಫಾ ವಿಶ್ವಕಪ್ ಗೆ ಪ್ರವೇಶ ಪಡೆದಿರುವುದನ್ನು ಉದಾಹರಿಸಿದ ಅವರು, ಭಾರತದಲ್ಲಿ ಈ ಕ್ರೀಡೆಯ ಅಭಿವೃದ್ಧಿಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯರನ್ನು ಪ್ರಶ್ನಿಸಿದರು.
ಕೇವಲ 1,58,000 ಜನಸಂಖ್ಯೆ ಹೊಂದಿರುವ ಮತ್ತು 450 ಚದರ ಕಿಲೋಮೀಟರ್ ಗಿಂತಲೂ ಕಡಿಮೆ ಭೂಪ್ರದೇಶ ಹೊಂದಿರುವ ಕ್ಯೂರಸೌ ಮುಂದಿನ ವರ್ಷದ ಫುಟ್ಬಾಲ್ ವಿಶ್ವಕಪ್‌ಗೆ ಕೊಂಕಾಕಾಫ್ ಮೂಲಕ ಅರ್ಹತೆ ಪಡೆದಿರುವುದನ್ನು ಮಣಿ ಉಲ್ಲೇಖಿಸಿದರು. ಆದರೆ, 145 ಕೋಟಿಗಿಂತಲೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತ ಪರದಾಡುತ್ತಿದೆ ಎಂದು ಅವರು ನುಡಿದರು.
ಮಣಿಯ ಪ್ರಶ್ನೆಗೆ ಉತ್ತರಿಸಿದ ಕ್ರೀಡಾ ಸಚಿವ ಮಾಂಡವೀಯ, ಫಿಫಾ ರೂಪಿಸಿದ ನಿಯಮಾವಳಿಗಳ ಆಧಾರದಲ್ಲಿ ವಿಶ್ವಕಪ್‌ಗೆ ಅರ್ಹತೆ ಲಭಿಸುತ್ತದೆ ಎಂದು ಹೇಳಿದರು.
‘‘ನಿರ್ದಿಷ್ಟ ಕ್ರೀಡೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿಶ್ವಕಪ್/ವಿಶ್ವ ಚಾಂಪಿಯನ್ ಶಿಪ್ ಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಂಬಂಧಿತ ರಾಷ್ಟ್ರೀಯ ಕ್ರೀಡಾ ಒಕ್ಕೂಟದ ಜವಾಬ್ದಾರಿಯಾಗಿದೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನನ್ನು ನನ್ನ ಸಚಿವಾಲಯವು ರಾಷ್ಟ್ರೀಯ ಕ್ರೀಡಾ ಒಕ್ಕೂಟ ಎಂಬುದಾಗಿ ಮಾನ್ಯ ಮಾಡಿದೆ. ಭಾರತವು ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ನೆರವಾಗಲು ತನ್ನ ಬಳಿ ದೀರ್ಘಾವಧಿ ಯೋಜನೆ ಇದೆ ಎಂದು ಎಐಎಫ್‌ಎಫ್ ತಿಳಿಸಿದೆ’’ ಎಂದು ಕ್ರೀಡಾ ಸಚಿವರು ತಿಳಿಸಿದರು.