×
Ad

ಪಶ್ಚಿಮ ರಷ್ಯಾದಲ್ಲಿ ಸೇತುವೆ ಕುಸಿದು ಹಳಿ ತಪ್ಪಿದ ರೈಲು: ಏಳು ಮಂದಿ ಮೃತ್ಯು

Update: 2025-06-01 08:29 IST

PC: x.com/mediazona_en

ಮಾಸ್ಕೊ: ಪಶ್ಚಿಮ ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಸೇತುವೆ ಕುಸಿದ ಪರಿಣಾಮ ಪ್ರಯಾಣಿಕರ ರೈಲು ಹಳಿತಪ್ಪಿ ಸಂಭವಿಸಿದ ದುರಂತದಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. "ಕಾನೂನುಬಾಹಿತ ಹಸ್ತಕ್ಷೇಪ"ದ ಕಾರಣದಿಂದ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಈ ದುರಂತ ಸಮಭವಿಸಿದ್ದು, ಉಕ್ರೇನ್ನ ಮೇಲ್ 2022ರಲ್ಲಿ ರಷ್ಯಾ ದಾಳಿ ಆರಂಭಿಸಿದ ದಿನದಿಂದ ಈ ಪ್ರದೇಶದಲ್ಲಿ ಉದ್ವಿಗ್ನತೆ ಇದೆ. ಸಾರಿಗೆ ಕಾರ್ಯಾಚರಣೆಯಲ್ಲಿ ಕಾನೂನುಬಾಹಿರ ಹಸ್ತಕ್ಷೇಪದಿಂದಾಗಿ ಸೇತುವೆಗೆ ಹಾನಿಯಾಗಿದೆ ಎಂದು ಮಾಸ್ಕೋ ರೈಲ್ವೇಸ್ ಹೇಳಿದೆ.

ರೈಲು ಚಲಿಸುತ್ತಿದ್ದಾಗ ಸೇತುವೆ ಕುಸಿದು ರೈಲಿನ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ ಎಂದು ರಷ್ಯಾದ ಫೆಡರಲ್ ರೋಡ್ ಏಜೆನ್ಸಿ ರೊಸವ್ಟೊಡೋರ್ ದೃಢಪಡಿಸಿದೆ. ದಿಢೀರನೇ ಕಾಂಕ್ರೀಟ್ ತುಂಡುಗಳು ಹಳಿಯ ಮೇಲೆ ಬಿದ್ದು, ರೈಲಿನ ಸಂಚಾರಕ್ಕೆ ಅಡ್ಡಿಯಾಗಿ ರೈಲು ಹಳಿತಪ್ಪಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸೇತುವೆಯ ಅವಶೇಷಗಳಡಿ ರೈಲು ಬೋಗಿಗಳು ಛಿದ್ರವಾಗಿ ಬಿದ್ದಿರುವ ಚಿತ್ರಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ದುರಂತದಿಂದ ಕೂದಲೆಳೆ ಅಂತರದಲ್ಲಿ ಕೆಲ ವಾಹನಗಳು ಪಾರಾದ ಚಿತ್ರಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಬ್ರಿಯಾನ್ಸ್ಕ್ ಗವರ್ನರ್ ಅಲೆಗ್ಸಾಂಡರ್ ಬೊಗೊಮಾಝ್ ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದು, ಗಾಯಾಳುಗಳಲ್ಲಿ ಮಕ್ಕಳು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News