ಮಾಲೂರು ಸರಕಾರಿ ಆಸ್ಪತ್ರೆಗೆ ಸಚಿವ ಯು.ಟಿ.ಖಾದರ್ ಭೇಟಿ; ಪ್ರತೀ ರೋಗಿಗೂ ಗುಣಮಟ್ಟದ ಚಿಕಿತ್ಸೆ ನೀಡಲು ಸೂಚನೆ

Update: 2026-08-13 00:28 IST

ಮಾಲೂರು : ಬಡವರು ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ಆರೋಗ್ಯ ಇಲಾಖೆಗೆ ಸಾವಿರಾರು ಕೋಟಿ ರೂ. ಅನುದಾನ ನೀಡುತ್ತಿದೆ. ಸರಕಾರಿ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂಬ ವಿಶ್ವಾಸ ಮೂಡಿಸುವ ರೀತಿಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ಸೂಚಿಸಿದ್ದಾರೆ.

ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಅವರು ಭೇಟಿ ನೀಡಿ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿ, ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ವೈದ್ಯರಿಂದ ಅಗತ್ಯವಿರುವ ಸೌಲಭ್ಯಗಳು, ಸಿಬ್ಬಂದಿ ಮತ್ತು ಚಿಕಿತ್ಸಾ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು.

ನಂತರ ಮಾತನಾಡಿದ ಸಚಿವರು, ಮಾಲೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಹೆಚ್ಚುವರಿ ವೈದ್ಯರು ಹಾಗೂ ಸಿಬ್ಬಂದಿಯನ್ನು ಸಹ ಒದಗಿಸಲಾಗಿದೆ. ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಸ್ಪಂದಿಸಿ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವುದು ವೈದ್ಯರು ಹಾಗೂ ಸಿಬ್ಬಂದಿಯ ಜವಾಬ್ದಾರಿಯಾಗಿದೆ ಎಂದರು.

ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಿರುವುದರಿಂದ ಪ್ರಸ್ತುತ ಆಸ್ಪತ್ರೆ ಕಟ್ಟಡ ಕಿರಿದಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಕೆ.ವೈ. ನಂಜೇಗೌಡ ಅವರ ಮನವಿಯ ಮೇರೆಗೆ ಆಸ್ಪತ್ರೆಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಸರಕಾರ 40 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ನೋಡಲ್ ಅಧಿಕಾರಿ ರಂಗನಾಥ್, ತಾಲೂಕು ಆರೋಗ್ಯಾಧಿಕಾರಿ ರಮೇಶ್ ಬಾಬು, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News