ತುಮಕೂರು, ಸೆ.3: ನರೇಗಾ ಕಾಮಗಾರಿ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಗುಬ್ಬಿತಾಲೂಕಿನ ಹಾಗಲವಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಗ್ರಾಪಂ ಕಚೇರಿ, ಗುಬ್ಬಿ ತಾಪಂ ಕಚೇರಿ ಸೇರಿದಂತೆ ಆರು ಕಡೆಗಳಲ್ಲಿ ತುಮಕೂರು ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.

ಹಾಗಲವಾಡಿ ಗ್ರಾಪಂ ಕಚೇರಿ, ಗುಬ್ಬಿ ತಾಲೂಕು ಪಂಚಾಯತ್ ಕಚೇರಿ, ಹಾಗಲವಾಡಿ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ಮನೆ, ಪಿಡಿಓ ಶಿವಕುಮಾರ್ ಗುಬ್ಬಿ ಮನೆ, ಮಾಜಿ ಟೆಕ್ನಿಕಲ್ ಅಸಿಸ್ಟೆಂಟ್ ಮಧುಗಿರಿ ಗೋವಿಂದರಾಜು ಎಂಬವರ ಮನೆ ಹಾಗೂ ಗುಬ್ಬಿಯ ಗುರು ಎಂಟರ್ ಪ್ರೈಸಸ್ ಎಂಬ ಅಂಗಡಿ ಮಾಲಕರ ಮನೆ ಮೇಲೂ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ದಾಖಲಾತಿಗಳ ತಪಾಸಣೆ ನಡೆಸಿದ್ದಾರೆ.

ಈ ಆರು ಕಡೆಗಳಲ್ಲಿ ಬುಧವಾರ ಮಧ್ಯಾಹ್ನ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಗುಬ್ಬಿ ತಾಲೂಕು ಪಂಚಾಯ್ತಿ ಕಚೇರಿ ಸೇರಿದಂತೆ ಮೂರ್ನಾಲ್ಕು ಕಡೆಗಳಲ್ಲಿ ಇಂದು ಸಹ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗಿದ್ದ ರಸ್ತೆ, ಚರಂಡಿ, ಇನ್ನಿತರ ಕಾಮಗಾರಿಗಳಲ್ಲಿ ಸುಮಾರು ಒಂದೂವರೆಯಿಂದ 2 ಕೋಟಿ ರೂ.ಗೂ ಅಧಿಕ ಅವ್ಯವಹಾರ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯ ಹಾಗಲವಾಡಿ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ಮನೆ ಮೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕೆಲವು ದಾಖಲೆಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಹಾಗಲವಾಡಿ ಗ್ರಾಮ ಪಂಚಾಯತ್ ಕಚೇರಿಗೂ ಲೋಕಾಯುಕ್ತರ ತಂಡ ಭೇಟಿ ನೀಡಿ ವಿವಿಧ ಕಡತಗಳನ್ನು ಪರಿಶೀಲನೆ ನಡೆಸಿದೆ. ಈಗಾಗಲೇ ಪಿಡಿಓ ಶಿವಕುಮಾರ್ ನರೇಗಾ ಯೋಜನೆಯಲ್ಲಿ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿಗಳಾದ ಸಂತೋಷ್ಕುಮಾರ್, ಮಂಜುನಾಥಗೌಡ ನೇತೃತ್ವದಲ್ಲಿ ಇಂದು ಸಹ ದಾಳಿ ಮುಂದುವರಿಸಿರುವ ಇನ್ ಸ್ಪೆಕ್ಟರ್ ಗಳಾದ ರಾಘವೇಂದ್ರ, ಎನ್. ನಿರ್ಮಲಾ, ರಾಜು, ಶಾಂತಿನಾಥ್, ರಾಮನಗರ ಇನ್ ಸ್ಪೆಕ್ಟರ್ ಬಿ. ವಿಜಯಕುಮಾರ್ ಮತ್ತು ಸಿಬ್ಬಂದಿ ಗುಬ್ಬಿ ತಾಪಂಕಚೇರಿಯಲ್ಲಿ ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor