×
Ad

ತುಮಕೂರು | ನ.22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ

Update: 2025-11-21 19:34 IST

ತುಮಕೂರು : ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ನವೆಂಬರ್ 22ರಂದು ಶ್ರೀ ಸಿದ್ದಾರ್ಥ ಅಕಾಡೆಮಿ ಅಫ್ ಹೈಯರ್ ಎಜುಕೇಷನ್, ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಆಯೋಜಿಸಲಾಗಿದೆ ಎಂದು ಸಾಹೇ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 14ನೇ ಸಾಹೇ ಘಟಿಕೋತ್ಸವದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಸ್ಥಾಪಕರಾದ ಶ್ರೀಸ್ವಾಮಿ ಜಪಾನಂದ ಜಿ ಮಹಾರಾಜ್ ಹಾಗೂ ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆಯ ವಿರೋಸ್ಪೇಸ್ ಇಂಜಿನಿಯರಿಂಗ್‍ನ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಕೆ.ಪಿ.ಜೆ.ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ ಎಂದರು.

ಸಾಹೇ ವಿವಿಯ 14ನೇ ಘಟಿಕೋತ್ಸವದಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಜಯರಾಮ್ ರಮೇಶ್ ಅವರು ಭಾಷಣ ಮಾಡಲಿದ್ದಾರೆ. ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ ಅವರು ಪದವಿ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಗೌಪ್ಯತೆಯನ್ನು ಭೋದಿಸಿ, ಪ್ರಮಾಣ ಪತ್ರಗಳನ್ನು ವಿತರಿಸಲಿದ್ದಾರೆ ಹಾಗೂ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರಿ ಮತ್ತು ಡಾ.ಜಿ.ಎಸ್.ಆನಂದ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವರಾದ ಡಾ.ಅಶೋಕ್ ಮೆಹತಾ, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ.ಗುರುಶಂಕರ್ ಸಿ., ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್ ಜಿ ಎನ್., ಉಪ ಕುಲಸಚಿವರಾದ ಡಾ.ಸುದೀಪ್ ಕುಮಾರ್, ಟಿ.ಬೇಗೂರಿನ ಶ್ರೀ ಸಿದ್ದಾರ್ಥ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ ಡಾ ದಿವಾಕರ್, ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ವಿ.ರವಿ ಪ್ರಕಾಶ್ ಹಾಗೂ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಲಿದ್ದಾರೆ.

ಶ್ರೀ ಸಿದ್ದಾರ್ಥ ಅಕಾಡೆಮಿ ಅಫ್ ಹೈಯರ್ ಎಜುಕೇಷನ್ ಸಾಹೇ ವಿವಿಯ 14ನೇ ಘಟಿಕೋತ್ಸವದಲ್ಲಿ 664 ಬಿಇ ಮತ್ತು ಎಂಟೆಕ್, 372 ಎಂ.ಬಿ.ಬಿ.ಎಸ್ ಮತ್ತು ಎಂ.ಡಿ., 34 ಬಿಡಿಎಸ್ ಮತ್ತು ಎಂ.ಡಿ.ಎಸ್ ಹಾಗೂ 14 ಪಿಹೆಚ್‍ಡಿ ಪದವಿಗಳು ಸೇರಿದಂತೆ ಒಟ್ಟು 1086 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುವುದು. ಶೈಕ್ಷಣಿಕ ಬೆಳವಣಿಗೆಯಲ್ಲಿ ಸಾಧನೆ ತೋರಿದ 15 ಜನರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಇಂಜಿನಿಯರಿಂಗ್ ನ 8, ವೈದ್ಯಕೀಯ ವಿಭಾಗದ 3, ದಂತ ವೈದ್ಯಕೀಯದ 2, ಎಂಸಿಎ ಮತ್ತು ಎಂಟೆಕ್ ವಿಭಾಗದ 2 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಲಭಿಸಲಿದೆ ಎಂದು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News