ವಿವಿಧತೆ ಮತ್ತು ಅಸಮಾನತೆ ಎರಡು ಭಾರತೀಯರ ಡಿಎನ್‍ಎ ನಲ್ಲಿಯೇ ಇದೆ: ಜೈರಾಮ್ ರಮೇಶ್
ತುಮಕೂರು: ಸಾಹೇ ವಿವಿಯಲ್ಲಿ 14ನೇ ಘಟಿಕೋತ್ಸವ
ತುಮಕೂರು: ವಿವಿಧತೆಯಲ್ಲಿ ಏಕತೆ ಮತ್ತು ಅಸಮಾನತೆ ಎಂಬುದು ಭಾರತೀಯರ ಡಿಎನ್‍ಎಯಲ್ಲಿ ಇದೆ. ಬಹುತ್ವದ ಭಾರತದಲ್ಲಿ ವಿವಿಧತೆಯನ್ನು ಕಾಪಾಡಿಕೊಳ್ಳುವುದು ಮತ್ತು ಎಲ್ಲಾ ರೀತಿಯ ಅಸಮಾನತೆಯನ್ನು ತೊಡೆದು ಹಾಕುವುದು ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ವಿದ್ಯಾವಂತ ಯುವಜನತೆ ಆಲೋಚಿಸಬೇಕಾದ ಅಗತ್ಯತೆ ಇದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕೇಂದ್ರ ಮಂತ್ರಿ ಜೈರಾಮ್ ರಮೇಶ್ ಹೇಳಿದರು.
ನಗರದ ಶ್ರೀಸಿದ್ದಾರ್ಥ ಅಕಾಡೆಮಿ ಅಫ್ ಹೈಯರ್ ಏಜುಕೇಷನ್(ಸಾಹೇ ವಿವಿ) ವತಿಯಿಂದ ಆಯೋಜಿಸಿದ್ದ 14ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಘಟಿಕೋತ್ಸವ ಮಾತನಾಡಿದ ಅವರು, ದೇಶದ ಐಕತ್ಯೆ, ಸಮಗ್ರತೆಯ ದೃಷ್ಠಿಯಿಂದ ಒಗ್ಗಟ್ಟು ಕಾಯ್ದುಕೊಳ್ಳಬೇಕಿದೆ ಎಂದರು.
ಭಾಷೆ, ಜಾತಿ, ಧರ್ಮ, ಅಚಾರ, ವಿಚಾರ ಎಲ್ಲದರಲ್ಲಿಯೂ ಭಾರತದಲ್ಲಿ ವಿವಿಧೆತೆ ಇದೆ. ಇದೇ ಪ್ರಜಾಪ್ರಭುತ್ವದ ನಿಜವಾದ ಸೌಂಧರ್ಯ. ಸಹಿಷ್ಣತೆಯ ಮೂಲಕ ಅವುಗಳನ್ನು ಕಾಪಾಡಿಕೊಳ್ಳಬೇಕಿದೆ. ಹಾಗೆಯೇ ಶಿಕ್ಷಣ, ಆರೋಗ್ಯ,ಹಣಕಾಸು, ರಾಜಕೀಯ ಅಧಿಕಾರ, ಪ್ರಾಕೃತಿಕ ಸಂಪತ್ತು ಹಂಚಿಕೆ ಎಲ್ಲದರಲ್ಲಿಯೂ ಅಸಮಾನತೆಯನ್ನು ಹಲವಾರು ಶತಮಾನಗಳಿಂದ ನೋಡುತ್ತಲೇ ಬಂದಿದ್ದೇವೆ. ದೇಶದ ಸಂಪತ್ತಾಗಿರುವ ಪದವಿಧರರ ವಿದ್ಯಾವಂತ ಯುವಜನತೆ, ವಿವಿಧೆತೆಯನ್ನು ಉಳಿಸಿಕೊಂಡು ಹೋಗಲು ತಮ್ಮ ಬುದ್ದಿವಂತಿಕೆಯನ್ನು ಖರ್ಚು ಮಾಡುವುದರ ಜೊತೆಗೆ, ಹೇಗೆ ಬಡವ, ಬಲ್ಲಿದರ ನಡುವೆ ಇರುವ ಎಲ್ಲಾ ತಾರತಮ್ಯಗಳನ್ನು ಹೋಗಲಾಡಿಸಲು ಕೆಲಸ ಮಾಡಬೇಕೆಂಬ ಕಡೆಯೂ ಆಲೋಚಿಸುವ ಅಗತ್ಯವಿದೆ. ಆಗ ಮಾತ್ರ ಭಾರತ ʼಸೂಪರ್ ಪವರ್ʼ ರಾಷ್ಟ್ರವಾಗಲು ಸಾಧ್ಯ. ನಮ್ಮಲಿರುವ ಒಗ್ಗಟ್ಟು ಕಳೆದುಕೊಂಡರೆ ಭಾರತದ ಅಸ್ಥಿತ್ವವೇ ಇರುವುದಿಲ್ಲ ಎಂಬ ಎಚ್ಚರಿಕೆ ನಮಗೆ ಮೂಡಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಹೇಳಿದರು.
ಅಭಿವೃದ್ದಿಯ ಹೆಸರಿನಲ್ಲಿ ಭಾರತದಲ್ಲಿ ಸುಸ್ಥಿರತೆ ಎಂಬುದು ಕಾಣದಾಗಿದೆ. ಜಲ, ಗಾಳಿ, ಭೂಮಿ ಎಲ್ಲವೂ ಮಾಲಿನ್ಯಗೊಂಡಿದೆ. 2050ರ ವೇಳೆಗೆ ಭಾರತದ ಜನಸಂಖ್ಯೆ 300 ಕೋಟಿ ದಾಟುವ ನಿರೀಕ್ಷೆಯಿದೆ. ಉಳಿದೆಲ್ಲಾ ದೇಶಗಳಲ್ಲಿ ಜನಸಂಖ್ಯೆ ಇಳಿಕೆಯಾದರೆ, ಭಾರತದಲ್ಲಿ ಮಾತ್ರ ಏರುಗತಿಯಲ್ಲಿದೆ. ಈಗಿನಿಂದಲೇ ಭೂಮಿಯ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯದಿದ್ದರೆ ನಮ್ಮ ಮಕ್ಕಳಿಗೆ, ಮೊಮಕ್ಕಳಿಗೆ ಒಳ್ಳೆಯ ದಿನಗಳನ್ನು ನೀಡಲು ಸಾಧ್ಯವಿಲ್ಲ. ಎಲ್ಲಾ ರಂಗದಲ್ಲಿಯೂ ಎಷ್ಟೇ ಮುಂದುವರೆದರೂ, ಪರಿಸರ ಮೇಲಾಗುತ್ತಿರುವ ದಬ್ಬಾಳಿಕೆ ತಡೆಯದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ. 2004 ರಲ್ಲಿ ಬಂದ ಸುನಾಮಿಯನ್ನು ಒಮ್ಮೆ ನಾವೆಲ್ಲರೂ ಆವಲೋಕನ ಮಾಡಿ, ಮುನ್ನೆಡೆದರೆ ಭವಿಷ ಒಳ್ಳೆಯದಾಗಲಿದೆ ಎಂದು ಜೈರಾಮ್ ರಮೇಶ್ ಎಚ್ಚರಿಕೆ ನೀಡಿದರು.
ದೇಶದ ಅರ್ಧದಷ್ಟಿರುವ ಹೆಣ್ಣು ಮಕ್ಕಳಿಗೆ ಅವಕಾಶಗಳು ಕಡಿಮೆ ಇವೆ ಎಂಬ ಮಾತುಗಳು ಕೇಳಿ ಬರುತ್ತಿರುವ ಕಾಲದಲ್ಲಿ ಶ್ರೀಸಿದ್ದಾರ್ಥ ಅಕಾಡೆಮಿ ಅಫ್ ಹೈಯರ್ ಏಜುಕೇಷನ್‍ನ ಎಲ್ಲಾ ವಿಭಾಗಗಳಲ್ಲಿ ಶೇ. 60ಕ್ಕಿಂತ ಹೆಚ್ಚು ಹೆಣ್ಣು ಮಕ್ಕಳು ಪ್ರವೇಶ ಪಡೆದಿರುವುದು ನಿಜಕ್ಕೂ ಸಂತೋಷದ ವಿಷಯ. ಇದಕ್ಕಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಜಿ.ಪರಮೇಶ್ವರ್ ಅವರನ್ನು ಅಭಿನಂದಿಸುತ್ತೇನೆ ಎಂದು ಜೈರಾಮ್ ರಮೇಶ್ ಹೇಳಿದರು.
ಸಾಹೇ ವಿವಿಯ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಡಾ.ಕೆ.ಪಿ.ಜೆ. ರೆಡ್ಡಿ, ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳು ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವುದನ್ನು ನೋಡಿದರೆ ನನಗೆ ತುಂಬಾ ಖೇದ ಉಂಟಾಗುತ್ತದೆ. ಹಾಗಾಗಿಯೇ ನಾನು ನಿವೃತ್ತನಾದ ನಂತರ ನಮ್ಮ ಊರಿನ ಹತ್ತಿರದ ಸ್ರಾವಂಡನಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಒಂದು ವಿಜ್ಞಾನ ವಿವಿ ತೆರೆಯಲು ಸರಕಾರಕ್ಕೆ ಅರ್ಜಿ ಸಲ್ಲಿಸಿ, ಅನುಮೋದನೆ ಪಡೆಯಲು ಪ್ರಯತ್ನಿಸಿದ್ದೇನೆ. ದುರಾದೃಷ್ಟ ವಶಾತ್, ಮಧುಗಿರಿ ತುಮಕೂರು ಜಿಲ್ಲೆಗೆ ಸೇರಿರುವ ಕಾರಣ, ಒಂದೇ ಜಿಲ್ಲೆಗೆ ಎರಡು ವಿವಿ ಕೊಡುವುದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ನಿರಾಕರಿಸಿದೆ. ಮಧುಗಿರಿ ಜಿಲ್ಲೆಯಾದರೆ ನನ್ನ ಆಸೆ ಈಡೇರಲಿದೆ. ಅದಕ್ಕಾಗಿ ಜೀವ ಹಿಡಿದು ಕಾಯುತ್ತಿದ್ದೇನೆ. ಜನಸಂಖ್ಯೆಯ ಶೇ.50 ರಷ್ಟಿರುವ ಒಂದು ಸಮುದಾಯದ ಪ್ರತಿಭೆಯನ್ನು ಬಳಕೆ ಮಾಡಿಕೊಳ್ಳದೆ ಹಾಗೆಯೇ ಬಿಡುವುದು ಸರಿಯಲ್ಲ. ದೇಶ ಸೂಪರ್ ಪವರ್ ಆಗಬೇಕೆಂದರೆ ಅದರಲ್ಲಿ ಮಹಿಳೆಯರ ಕೊಡುಗೆಯೂ ಇದ್ದರೆ ಮಾತ್ರ ಸಾಧ್ಯ ಎಂದರು.
ಮತ್ತೋರ್ವ ಡಾಕ್ಟರೇಟ್ ಗೌರವ ಪುರಸ್ಕೃತ, ಪಾವಗಡದ ರಾಮಕೃಷ್ಣ ಆಶ್ರಮದ ಶ್ರೀಜಪಾನಂದಜೀ ಮಹರಾಜ್ ಮಾತನಾಡಿ, ಗ್ರಾಮೀಣ ಭಾಗಕ್ಕೆ ಬರುವ ವೈದ್ಯರು ಕುಷ್ಠ, ಕ್ಷಯ ರೋಗಿಗಳನ್ನು ಮುಟ್ಟಿ ಮಾತನಾಡಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಯುವಜನತೆಯ ಮೇಲೆ ಅಪಾರ ನಂಬಿಕೆ ಇದೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯುವ ಜನತೆ ಮಾನವೀಯ ಗುಣಗಳೊಂದಿಗೆ ಕೆಲಸ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹೇ ವಿವಿ ಕುಲಾಧಿಪತಿಗಳಾದ ಡಾ.ಜಿ.ಪರಮೇಶ್ವರ್ ವಹಿಸಿದ್ದರು.ಸಾಹೇ ವಿವಿ ಮ್ಯಾನೇಜ್‍ಮೆಂಟ್ ಟ್ರಸ್ಟಿಗಳಾದ ಶ್ರೀಮತಿ ಕನ್ನಿಕಾ ಪರಮೇಶ್ವರ್, ಡಾ.ಜಿ..ಎಸ್.ಆನಂದ್, ಸಾಹೇ ವಿವಿ ಉಪಕುಲಪತಿಗಳಾದ ಡಾ.ಲಿಂಗೇಗೌಡ, ಕುಲಸಚಿವರಾದ ಡಾ.ಅಶೋಕ್ ಮೆಹತಾ,ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ.ಗುರುಶಂಕರ್ ಸಿ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್.ಜಿ.ಎನ್.ಉಪ ಕುಲಸಚಿವರು ಆದ ಡಾ.ಸುದೀಪ್ ಕುಮಾರ್, ಟಿ.ಬೇಗೂರಿನ ಶ್ರೀಸಿದ್ದಾರ್ಥ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ ಡಾ ದಿವಾಕರ್, ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ವಿ.ರವಿಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಸಾಹೇ ವಿವಿಯ 14ನೇ ಘಟಿಕೋತ್ಸವದಲ್ಲಿ 14 ಜನರಿಗೆ ಪಿಎಚ್‍ಡಿ, 664 ಜನರಿಗೆ ಇಂಜಿನಿಯರಿಂಗ್‍ನಲ್ಲಿ ಯುಜಿ ಮತ್ತು ಪಿಜಿ ಪದವಿ, 372 ಜನರಿಗೆ ವೈದ್ಯಕೀಯದಲ್ಲಿ ಎಂಬಿಬಿಎಸ್ ಮತ್ತು ಎಂ.ಎಸ್, ಎಂ.ಡಿ. ಪದವಿ, 34 ಜನರಿಗೆ ದಂತ ವೈದ್ಯಕೀಯದಲ್ಲಿ ಬಿಡಿಎಸ್, ಎಂಡಿಎಸ್ ಸೇರಿದಂತೆ ಒಟ್ಟು 1086 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.