ಭಾರತದ ಸಂವಿಧಾನ ಸಮಾನತೆ, ಸ್ವಾತಂತ್ರ್ಯ, ಭಾತೃತ್ವ, ಸಾಮಾಜಿಕ ನ್ಯಾಯ ಒಳಗೊಂಡಿದೆ: ನ್ಯಾ. ನೂರುನ್ನಿಸಾ
ತುಮಕೂರು: ದೇಶದಲ್ಲಿ ಸಮಾನತೆ, ಸ್ವಾತಂತ್ರ್ಯಭಾತೃತ್ವದ ಮಾನವ ಘನತೆ ಹಾಗೂ ಸಾಮಾಜಿಕ ನ್ಯಾಯವನ್ನು ಒಳಗೊಂಡ ಆಶಯಗಳನ್ನು ಸಂವಿಧಾನ ಹೊಂದಿದ್ದು, ಈ ಆಶಯವನ್ನು ತುಮಕೂರಿನಲ್ಲಿ ಜನರ ಮನ-ಮನೆಗಳಿಗೆ ತಲುಪಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿ ಮಾಡಲು ಹೊರಟಿರುವುದು ಶ್ಲಾಘನೀಯ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನಿಕೇತನದಲ್ಲಿ ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಂವಿಧಾನ ಸ್ನೇಹಿ ಬಳಗ ಬೆಂಗಳೂರು ಹಮ್ಮಿಕೊಂಡಿದ್ದ ಮನ-ಮನೆಗೂ ಸಂವಿಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಭಾರತೀಯರಿಗೆ ನಾಗರಿಕ ಹಕ್ಕುಗಳ ಶ್ರೇಷ್ಠತೆಯನ್ನು ನಮ್ಮ ಸಂವಿಧಾನ ನೀಡುವ ಮೂಲಕ ಶಕ್ತಿಯನ್ನು ನೀಡಿದೆ, ಮುಟ್ಟಿಸಿಕೊಳ್ಳದಂತಹ ಇತಿಹಾಸ ಇರುವ ಜನರನ್ನು ಇಂದು ಸಂವಿಧಾನ ಅಪ್ಪಿಕೊಳ್ಳುವಂತೆ ಮಾಡಿದೆ ಎಂದರು.
ಸಂವಿಧಾನ ಕೆಳಸ್ಥರದ ಸಮಾಜದಲ್ಲಿ ಬಹಳಷ್ಟು ಬದಲಾವಣೆಯನ್ನು ತಂದಿದೆ. ಸ್ತ್ರೀಯರ ಅಸ್ಮಿತೆಯಾದ ಮುಟ್ಟನ್ನು ಕೀಳಾಗಿ ನೋಡುವ ಸಮಾಜದ ಅನಾಗರಿಕತೆಯನ್ನು ಹೋಗಲಾಡಿಸಿ ಸಂವಿಧಾನ ನಾಗರಿಕ ಸಮಾಜ ಕಟ್ಟಲು ಪ್ರೇರೇಪಣೆಯಾಗಿದೆ. ಆಧುನಿಕ ಕಾಲದಲ್ಲಿಯು ಗೊಲ್ಲರಹಟ್ಟಿಯಲ್ಲಿ ಮಹಿಳೆಯರ ಪರಿಸ್ಥಿತಿ ಭಯಾನಕವಾಗಿದೆ. ಸಂವಿಧಾನದ ಮೂಲಕ ಕಾನೂನು ಜಾರಿ ಮಾಡಿ ಸಮಾನತೆಯನ್ನು ಸಾಧಿಸಲು ಶ್ರೇಣಿಕರಣ ವ್ಯವಸ್ಥೆಯ ಅಸಮಾನತೆಯನ್ನು ನಿವಾರಣೆ ಮಾಡಲು 75 ವರ್ಷಗಳು ಕಳೆದಿದೆ, ಎಲ್ಲಾ ಧರ್ಮಗಳಲ್ಲಿ ಮನಷ್ಯರನ್ನು ಪ್ರೀತಿಯಿಂದ ಗೌರವಿಸಬೇಕೆಂಬ ಭೋದನೆಯನ್ನು ಮಾಡಿದೆ ಹಾಗಾಗಿ ಸಂವಿಧಾನ ಸಾರ್ಥಕತೆಯಾಗಬೇಕಾದರೆ ಕಟ್ಟಕಡೆಯ ವ್ಯಕ್ತಿಯು ಸಂವಿಧಾನ ಶಿಕ್ಷಣ ಪಡೆಯಬೇಕೆಂದು ನ್ಯಾ.ನೂರುನ್ನಿಸಾ ನುಡಿದರು.
ಅಂಕಣಕಾರ ಶಿವಸುಂದರ್ ಮಾತನಾಡಿ, ನವೆಂಬರ್ 26ಕ್ಕೆ ಸಂವಿಧಾನ ಅರ್ಪಣೆಯಾಗಿ 75 ವರ್ಷ ಆಗುತ್ತಿದೆ.ಸಂವಿಧಾನ ಎಲ್ಲರಿಗೂ ಒಂದೇ ಮತದ ಹಕ್ಕನ್ನು ನೀಡಿದೆ. ಪ್ರಜಾತಂತ್ರ ಬರಿ ವೋಟ್ ಅಲ್ಲ. ದೇಶದಲ್ಲಿರುವ ಜನರಿಗೆ ತೀರ್ಮಾನಿಸುವ ಅಧಿಕಾರ ನೀಡುವುದಾಗಿದೆ.ಆದರೆ ಈ ಅಧಿಕಾರ ಇಂದು ಯಾವ ಸಂವಿಧಾನವನ್ನು ದ್ವೇಷಿಸುವವರ ಕೈಯಲ್ಲಿ ಸಿಕ್ಕಿರುವುದು ವಿಪರ್ಯಾಸವಾಗಿದೆ ಎಂದರು.
ಇಂದು ಮನ-ಮನೆಗೂ ಧ್ವೇಷ ಬಿತ್ತುವ ಸಂದರ್ಭದಲ್ಲಿ ಸಾಮಾನ್ಯ ಜನರ ಮನಕ್ಕೆ ಮತ್ತು ಮನೆಗೆ ಸಂವಿಧಾನ ತಲುಪಿಸಲು ಹೊರಟಿರುವುದು ವಿಶೇಷ. ಯಾವ ಜನರಿಗೆ ಸಂವಿಧಾನದ ಅಗತ್ಯವಿದೆಯೇ, ಆ ಜನರ ಜೊತೆಯಲ್ಲಿದ್ದಾಗ ಮಾತ್ರ ಶಕ್ತಿ ಹೆಚ್ಚಾಗುತ್ತದೆ. ಸ್ಲಂ ಇರದ ಭಾರತ, ಎಲ್ಲರಿಗೂ ಅವಕಾಶ ನೀಡುವ ಭಾರತ, ಸಮಾನ ಶಿಕ್ಷಣ ನೀಡುವ ಭಾರತ, ನಮ್ಮ ಕನಸ್ಸಾಗಬೇಕು. ಮನುಸ್ಮೃತಿ ಜಾತಿ ವ್ಯವಸ್ಥೆಯಲ್ಲಿ ಭಾರತದ ಆಡಳಿತ ವ್ಯವಸ್ಥೆ ಮಾಡುತ್ತಿದೆ, ಹುಟ್ಟಿನ ಮೇಲೆ ಮನುಸ್ಮೃತಿ ಅಧಿಕಾರ ನೀಡಿದರೇ ನಮ್ಮ ಸಂವಿಧಾನ ಜನರ ಭವಿಷ್ಯವನ್ನು ತೀರ್ಮಾನಿಸುತ್ತದೆ. ಎಲ್ಲರಿಗೂ ಅವಕಾಶವನ್ನು ಕಲ್ಪಿಸುವುದು ಸರಕಾರಗಳು ಮಾಡಬೇಕಿದೆ ಇದು ಸಂವಿಧಾನದ ಆಶಯವು ಸಹ ಆಗಿದೆ ಎಂದು ಶಿವಸುಂದರ್ ನುಡಿದರು.
ಸಂವಿಧಾನವನ್ನು ವಿರೋಧಿಸುವವರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮನ್ನು ದಯನೀಯ ಸ್ಥಿತಿಯಲ್ಲಿಟ್ಟರೆ ನಾವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಸಾಧ್ಯವಾಗಲ್ಲ.ಇತ್ತೀಚೆಗೆ ಸರಕಾರಗಳು ನೆಪ ಮಾತ್ರಕ್ಕೆ ಗ್ಯಾರಂಟಿಗಳನ್ನು ನೀಡಿ ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಹೊರಟಿರುವುದು. ಜನಕಲ್ಯಾಣಕ್ಕೆ ವಿರುದ್ಧವಾಗಿದೆ ಎಂದು ಶಿವಸುಂದರ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಕೆ.ದೊರೈರಾಜು ವಹಿಸಿದ್ದರು. ಡಾ.ಅರುಂಧತ್ತಿ, ಎಐಟಿಸಿಯ ಗಿರೀಶ್, ಎಐಎಂಎಸ್‍ಎಸ್ ನ ಕಲ್ಯಾಣಿ, ಸಾವಿತ್ರಿ ಬಾಯಿಪುಲೆ ಸಂಘಟನೆಯ ಅನುಪಮಾ, ದಸಂಸದ ಕೃಷ್ಣಪ್ಪ ಮೆಲ್ಲದಮಡು, ಪಿಎನ್ ರಾಮಯ್ಯ, ಚೋಳೂರ್‍ಶಿವನಂಜಪ್ಪ, ಭರತ್ ಮೆಲ್ಲದಮಡು, ವಕೀಲರಾದ ಶಿವಣ್ಣ, ಎಪಿಸಿಆರ್ ನ ತಾಜುದ್ದೀನ್ ಷರೀಫ್ ಉಪಸ್ಥಿತರಿದ್ದರು.