ನ.28 ಐದು ಸಾವಿರ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭ : ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮೀ ಹೆಬ್ಬಾಳ್ಕರ್
ತುಮಕೂರು : ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆಗೆ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ನ.28ರಂದು ಬೆಂಗಳೂರಿನಲ್ಲಿ ನಡೆಯುಲಿರುವ ಕಾರ್ಯಕ್ರಮದಲ್ಲಿ ಐದು ಸಾವಿರ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದೂ ಸೇರಿದಂತೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಪೂರಕ ಮಹತ್ತರ ಮೂರು ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕಪಡೆ ಲೋಕಾರ್ಪಣೆ ಹಾಗೂ ಗೃಹಲಕ್ಷ್ಮೀ ಬ್ಯಾಂಕ್ ಉದ್ಘಾಟನೆ ಕುರಿತ ರಾಜ್ಯ ಮಟ್ಟದ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ ಗರ್ಭಿಣಿಯರಿಗೆ ಬಾಗಿನ ಅರ್ಪಿಸಿ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನೆರವೇರಿಸಲಾಯಿತು. ಅಂಧ ವಿಕಲ ಚೇತನರಿಗೆ ಬ್ರೈಲ್ ಲಿಪಿ ಹಾಗೂ ಕೇಳುವ ಲಿಪಿ ಸಾಧನದ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಣ್ಣ ಎಸ್., ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬಲಿಷ್ಠ ಭಾರತ ನಿರ್ಮಾಣದ ಕನಸು ಹೊತ್ತು 1975ರಲ್ಲಿ ಆರಂಭಿಸಿದ ಸಮಗ್ರ ಶಿಶು ಅಭಿವದ್ಧಿ ಸೇವೆಗಳ ಯೋಜನೆ ಐಸಿಡಿಎಸ್‌ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ನ.28ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ. ಮಹಿಳೆ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಪ್ರಮುಖ ಮೂರು ಯೋಜನೆಗೆ ರಾಜ್ಯ ಸರಕಾರ ಮುಂದಾಗಿದ್ದು ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗುತ್ತಿದೆ.
ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ