Tumakur | ಕರ್ನಾಟಕ ಪಬ್ಲಿಕ್ ಶಾಲೆಗೆ ಕಲ್ಲು ತೂರಾಟ: ಕಿಟಕಿಗಳಿಗೆ ಹಾನಿ
ಮುಖ್ಯಶಿಕ್ಷಕರ ಕಚೇರಿಯಲ್ಲಿ ವಾಮಾಚಾರ ವಸ್ತು ಪತ್ತೆ
ಕೊರಟಗೆರೆ : ತಾಲೂಕಿನ ಹೊಳವನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಕಿಟಕಿ ಗಾಜುಗಳಿಗೆ ಹಾಗೂ ಶಾಲಾ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳಿಗೂ ದುಷ್ಕರ್ಮಿಗಳು ಕಲ್ಲು ತೂರಿ ಹಾನಿಗೊಳಿಸಿರುವ ಘಟನೆ ರವಿವಾರ ರಾತ್ರಿ ವರದಿಯಾಗಿದೆ.
ಘಟನೆಯಲ್ಲಿ ಶಾಲೆಯ ಎಂಟಕ್ಕೂ ಹೆಚ್ಚು ಕೊಠಡಿಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಗಾಜಿನ ಚೂರುಗಳು ತರಗತಿ ಕೊಠಡಿಗಳ ಒಳಭಾಗದಲ್ಲೇ ಬಿದ್ದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೊಠಡಿಗಳಲ್ಲಿ ಕೂರಿಸದೆ ಶಾಲಾ ಆವರಣದ ಹೊರಭಾಗದಲ್ಲಿ ಕೂರಿಸಿ ಪಾಠ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಕರಣ ಕುರಿತು ಶಾಲೆಯ ಮುಖ್ಯಶಿಕ್ಷಕ ರಾಜಣ್ಣ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಫಯಾಜ್ ಬೇಗಂ ತಿಳಿಸಿದ್ದಾರೆ.
ಮುಖ್ಯಶಿಕ್ಷಕರ ಕಚೇರಿಯಲ್ಲಿ ವಾಮಾಚಾರ ವಸ್ತು ಪತ್ತೆ: ಕಲ್ಲುತೂರಾಟದ ಘಟನೆ ಬೆನ್ನಲ್ಲೇ ಶಾಲೆಯ ಮುಖ್ಯಶಿಕ್ಷಕರ ಕಚೇರಿಯಲ್ಲಿ ಕೋಳಿ ಮೊಟ್ಟೆ, ಅರಿಶಿನ-ಕುಂಕುಮ ಹಾಗೂ ಅಕ್ಷತೆ ಕಾಳುಗಳಂತಹ ಕೆಲವು ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಘಟನೆಯ ಸಮಗ್ರ ತನಿಖೆ ನಡೆಸಬೇಕು ಎಂದು ಎಸ್‌ಡಿಎಂಸಿ ಸದಸ್ಯರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೊಳವನಹಳ್ಳಿ ಪಬ್ಲಿಕ್ ಶಾಲೆಯಲ್ಲಿ ಹತ್ತಕ್ಕೂ ಹೆಚ್ಚು ಕೊಠಡಿಗಳ ಕಿಟಕಿ ಗಾಜುಗಳಿಗೆ ಕಲ್ಲು ತೂರಿ ಹಾನಿಗೊಳಿಸಿರುವ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ಕ್ಯಾಮರಾಗಳಿಗೂ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು. ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ.
ಫಯಾಜ್ ಬೇಗಂ, ಕ್ಷೇತ್ರ ಶಿಕ್ಷಣಾಧಿಕಾರಿ, ಕೊರಟಗೆರೆ
ರವಿವಾರ ಯಾರೋ ದುಷ್ಕರ್ಮಿಗಳು ಕಲ್ಲು ತೂರಿ ಶಾಲೆಯ ಕಿಟಕಿ ಗಾಜುಗಳಿಗೆ ಹಾನಿ ಮಾಡಿದ್ದಾರೆ. ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು.
ರಾಜಣ್ಣ, ಮುಖ್ಯಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಹೊಳವನಹಳ್ಳಿ