×
Ad

ಉಡುಪಿ | ಸಿಟಿ ಬಸ್ ಗಳ ಸಮಯದ ವಿಚಾರವಾಗಿ ಗಲಾಟೆ: ಮೂವರಿಗೆ ಗಾಯ,ದೂರು ದಾಖಲು

Update: 2024-01-20 11:16 IST

ಉಡುಪಿ, ಜ.20: ಪರ್ಯಾಯ ಮಹೋತ್ಸವದ ಸಂದರ್ಭ ಸಿಟಿ ಬಸ್ ಗಳ ಸಮಯದ ವಿಚಾರಕ್ಕೆ ಸಂಬಂಧಿಸಿ ಜ.19ರಂದು ರಾತ್ರಿ 11ಗಂಟೆ ಸುಮಾರಿಗೆ ಬಸ್ ಸಿಬಂದಿ ಮಧ್ಯೆ ಗಲಾಟೆ ನಡೆದಿದ್ದು, ಇದರಲ್ಲಿ ಚೂರಿ ಇರಿತದಿಂದ ಮೂವರು ಗಾಯಗೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

ಸಿಟಿ ಬಸ್ ಚಾಲಕರಾದ ನಿಟ್ಟೂರಿನ ರಾಜೀವನಗರದ ಸಂತೋಷ್ ಕುಮಾರ್ (30) ಹಾಗೂ ತೊಟ್ಟಂ ಬಡಾನಿಡಿಯೂರಿನ ಶಿಶಿರ್ ಪಾಲನ್(31) ಸ್ಕೂಟರ್ ನಲ್ಲಿ ಕೆಲಸ ಮುಗಿಸಿ ಮನೆ ಕಡೆ ಹೋಗುತ್ತಿದ್ದಾಗ ಉಡುಪಿಯ ಬನ್ನಂಜೆ ನವೀನ್ ಗ್ಯಾರೇಜ್ ಎದುರು ರಿಕ್ಷಾದಲ್ಲಿ ಬಂದ ಸುದೀಪ್, ಬುರ್ಹಾನ್, ಶಾರುಕ್ ಮತ್ತು ತನ್ವೀರ್ ಅಡ್ಡಗಟ್ಟಿ,   ಸಂತೋಷ್ ಹಾಗೂ ಶಿಶಿರ್ ಗೆ    ಚೂರಿ ಹಾಗೂ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿಕಿದ್ದಾರೆಂದು ದೂರಲಾಗಿದೆ.

ಜ.17ರ ರಾತ್ರಿ ಪರ್ಯಾಯದ ಪ್ರಯುಕ್ತ ಟಿಎಂಟಿ ಮತ್ತು ಜೆಎಂಟಿ ಬಸ್ಸಿನ ಮಧ್ಯೆ ಸಮಯದ ವಿಚಾರದಲ್ಲಿ ನಡೆದ ವಾಗ್ವಾದಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟಿದ್ದಕ್ಕೆ ದ್ವೇಷಗೊಂಡು ಆರೋಪಿಗಳು ಹಲ್ಲೆ ನಡೆಸಿದ್ದಾರೆಂದು ಸಂತೋಷ್ ಕುಮಾರ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು: ಸಿಟಿ ಬಸ್ ಚಾಲಕರಾದ ಮಲ್ಪೆ ಬಲರಾಮ ನಗರದ ಮುಹಮ್ಮದ್ ಬುರ್ಹಾನ್(29) ಎಂಬವರು ಆಟೋ ರಿಕ್ಷಾದಲ್ಲಿ ಸತೀಶ ಮತ್ತು ಸುದೀಪ್ ಎಂಬವರೊಂದಿಗೆ ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಅಂಗಡಿಯ ಬಳಿ ಹೋಗುತ್ತಿದ್ದಾಗ 4-5 ಬೈಕ್ ಗಳಲ್ಲಿ ಬಂದ ಶಿಶಿರ್, ಗಣೇಶ್, ವಿಖ್ಯಾತ್, ಸಂತು, ಚೇತು, ಶರತ್, ಇತರರು, ರಿಕ್ಷಾವನ್ನು ಅಡ್ಡಗಟ್ಟಿ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಚೂರಿ ಹಾಗೂ ಬಿಯರ್ ಬಾಟಲಿಯಿಂದ ಇರಿದು ಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದಾರೆಂದು ದೂರಲಾಗಿದೆ.

ಜ.17ರ ರಾತ್ರಿ ಸಿಟಿ ಬಸ್ ನಿಲ್ದಾಣದಲ್ಲಿ ಉಡುಪಿಯ ಪರ್ಯಾಯ ನಿಮಿತ್ತ ಟಿಎಂಟಿ ಮತ್ತು ಜೆಎಂಟಿ ಬಸ್ ಗಳ ಸಿಬ್ಬಂದಿ ಮಧ್ಯೆ  ವಾಗ್ವಾದ ನಡೆದಿದ್ದು, ಈ ಬಗ್ಗೆ ಸುದೀಪ್ ದೂರು ನೀಡಿದ ದ್ವೇಷದಲ್ಲಿ  ಆರೋಪಿಗಳು ಈ ಕೃತ್ಯ ಎಸಗಿದ್ದಾರೆಂದು ಬುರ್ಹಾನ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News