ಯೂಟ್ಯೂಬರ್ ಮೇಲೆ ಹಲ್ಲೆ: ದಸಂಸ ಮುಖಂಡರಿಂದ ಭೇಟಿ
ಉಡುಪಿ, ಆ.10: ಧರ್ಮಸ್ಥಳ ಗ್ರಾಮದಲ್ಲಿ ಎಸ್‌ಐಟಿ ತಂಡ ತನಿಖೆ ನಡೆಸುತ್ತಿರುವುದರ ಕುರಿತು ಸಮಗ್ರ ಮಾಹಿತಿ ಯನ್ನು ಸಾಮಾಜಿಕ ಜಾಲತಾಣ ದಲ್ಲಿ ಬಿತ್ತರಿಸುವ ಸಂದರ್ಭ ಮಾರಣಾಂತಿಕ ಹಲ್ಲೆಗೆ ಒಳಗಾದ ಯೂಟ್ಯೂಬ್ ಚಾನೆಲ್‌ನ ದಲಿತ ಸಮುದಾಯಕ್ಕೆ ಸೇರಿದ ಅಭಿಷೇಕ್ ಅವರನ್ನು ಉಡುಪಿ ಜಿಲ್ಲೆಯ ದಲಿತ ಪರ ಸಂಘಟನೆಗಳ ನಾಯಕರುಗಳು ಇಂದು ಭೇಟಿ ಮಾಡಿದರು.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಆಗಲಿ, ಯಾವುದೇ ವ್ಯಕ್ತಿಯ ಬಗ್ಗೆ ಆಗಲಿ ನಮಗೆ ಯಾವುದೇ ದ್ವೇಷದ ಭಾವನೆ ಇಲ್ಲ. ಧರ್ಮಸ್ಥಳ ಎಂಬ ಗ್ರಾಮದಲ್ಲಿ ಅತ್ಯಾಚಾರ ಕೊಲೆ ನಡೆದಿರುವ ಆರೋಪ ಇರುವುದರಿಂದ ಅಲ್ಲಿ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ. ಅದು ಕಾನೂನಿನ ಪ್ರಕ್ರಿಯೆಯಾಗಿದ್ದು, ಅದನ್ನು ವರದಿ ಮಾಡುವುದನ್ನು ತಪ್ಪು ಎಂಬುದಾಗಿ ಬಿಂಬಿಸಿ ವರದಿ ಮಾಡಿದವರಿಗೆ ಗುಂಪು ಕಟ್ಟಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸುವುದು ಖಂಡನೀಯ. ಈ ಕೃತ್ಯವನ್ನು ಎಸೆಗಿರುವವರನ್ನು ತಕ್ಷಣ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು, ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಕ.ದ.ಸಂ.ಸ ಜೈ ಭೀಮ್ ನೀಲಿ ಪಡೆ ಜಿಲ್ಲಾ ಸಂಚಾಲಕ ಜಗದೀಶ್ ಗಂಗೊಳ್ಳಿ, ಭೀಮ್ ಆರ್ಮಿ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಜಗದೀಶ್, ಅಂಬೇಡ್ಕರ್ ಸೇನೆ ಕಾರ್ಕಳ ತಾಲೂಕಿನ ಹರೀಶ್ ಕೊಂಡಾಡಿ, ಗಣೇಶ ಕೌಡೂರು, ಕಿರಣ್ ಕೌಡೂರು, ಸುಧೀರ್ ಬೈಲೂರು, ನಿತೀಶ್ ಬೈಲೂರು, ಸಂಜೀವ ಕೌಡೂರು, ಅಂಬೇಡ್ಕರ್ ಯುವ ಸೇನೆ ಹರೀಶ್ ಸಾಲ್ಯಾನ್, ರವಿರಾಜ್ ಲಕ್ಷ್ಮೀನಗರ, ಸತೀಶ್, ವಿಶ್ವನಾಥ್ ಹಾಳೆಕಟ್ಟೆ ಮತ್ತು ಭೀಮ್ ಆರ್ಮಿ ಚಿಕ್ಕಮಗಳೂರಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.