×
Ad

ಟೈಲರ್ಸ್‌ಗಳಂತೆ ಸಮಾಜವನ್ನು ಹೊಲಿದು ಒಗ್ಗೂಡಿಸುವುದು ಅಗತ್ಯ: ಪುತ್ತಿಗೆ ಶ್ರೀ

ಉಡುಪಿ ಜಿಲ್ಲಾ ಟೈಲರ್ಸ್‌ ವೃತ್ತಿ ಬಾಂಧವರ ಸಮಾವೇಶ

Update: 2025-08-10 19:56 IST

ಉಡುಪಿ, ಆ.10: ಟೈಲರ್ಸ್‌ಗಳಂತೆ ಎಲ್ಲರು ಸಮಾಜವನ್ನು ಹೊಲಿಯುವ ಕೆಲಸ ಮಾಡಬೇಕು. ಆ ಮೂಲಕ ಪರಸ್ಪರ ಸಹಕಾರದೊಂದಿಗೆ ಸಮಾಜವನ್ನು ಒಗ್ಗೂಡಿಸಬೇಕೆಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಷನ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ ರಜತ ಸಂಭ್ರಮ-25, ಟೈಲರ್ಸ್‌ ವೃತ್ತಿ ಬಾಂಧವರ ಸಮಾವೇಶ ಹಾಗೂ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಮ್ಮ ಸಮಾಜಕ್ಕೆ ಈಗ ಬೇಕಿರುವುದು ಹೊಲಿಯುವರೇ ಹೊರತು ಬೇರ್ಪಡಿಸುವವರಲ್ಲ. ನಾವು ಸಮಾಜವನ್ನು ಟೈಲರ್‌ಗಳಂತೆ ಹೊಲಿದು ಅಂದವಾದ ರೂಪ ಕೊಡಬೇಕು. ಆದುದರಿಂದ ಇಂತಹ ವೃತ್ತಿ ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಆಹಾರ ತಯಾರಿಕೆ, ಬಟ್ಟೆ ಹೊಲಿಯುವುದು ಪ್ರಾಚೀನ ಕಾಲದ ವೃತ್ತಿ. ಇದಕ್ಕೆ ಇತಿಹಾಸ ಇದೆ. ಇದರಲ್ಲಿ ನೈಪ್ಯುಣತೆ ಹಾಗೂ ಪ್ರಗತಿ ಸಾಧಿಸಲು ಸಂಘಟನೆ ಅಗತ್ಯ. ಆ ಮೂಲಕ ರಕ್ಷಣೆ ಮತ್ತು ಪ್ರಗತಿ ಹೊಂದಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಮಾಜದಲ್ಲಿ ಶಾಂತಿ ಸ್ಥಾಪನೆಯಾಗಬೇಕಾದರೆ ಕೇವಲ ತಪ್ಪು ಮಾಡಿದವರಿಗೆ ಮಾತ್ರವಲ್ಲ ಪ್ರೇರಣೆ ಕೊಟ್ಟವರಿಗೆ ಶಿಕ್ಷೆಯಾಗಬೇಕು. ಟೈಲರ್‌ಗಳು ಸಮಾಜವನ್ನು ಒಡೆಯುವವ ರಲ್ಲ, ಹೊಲಿಗೆ ಹಾಕಿ ಎಲ್ಲರನ್ನು ಸೇರಿಸುವವರು. ಎಲ್ಲ ವರ್ಗದವರು ಒಂದಾಗಿದ್ದರೆ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ ಮತ್ತು ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ. ಯಾವುದೇ ಧರ್ಮ ಕೂಡ ಇನ್ನೊಬರಿಗೆ ತೊಂದರೆ ಕೊಡಬೇಕು ಎಂದು ಹೇಳುವುದಿಲ್ಲ. ನಾವು ಧರ್ಮಗ್ರಂಥ ಓದಿದರೆ ಪ್ರಯೋಜನ ಇಲ್ಲ. ಅದನ್ನು ಆಚರಣೆಯಲ್ಲಿ ತರಬೇಕು ಎಂದರು.

ಅಧ್ಯಕ್ಷತೆಯನ್ನು ಅಸೋಸಿಯೇಶನ್ ಉಡುಪಿ ಜಿಲ್ಲಾಧ್ಯಕ್ಷ ಗುರುರಾಜ ಎಂ.ಶೆಟ್ಟಿ ವಹಿಸಿದ್ದರು. ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಬಿ.ಎ.ನಾರಾಯಣ, ರಾಜ್ಯ ಕೋಶಾಧಿಕಾರಿ ಕೆ.ರಾಮಚಂದ್ರ, ಉದ್ಯಮಿ ಸುರೇಶ್ ಪುರೋಹಿತ್, ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಯೋಗೀಶ್ ಕಾಮತ್ ಕಾರ್ಕಳಸ ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಪಾಲನ್, ಕುಂದಾಪುರ ಕ್ಷೇತ್ರ ಅಧ್ಯಕ್ಷ ರಾಜೀವ ಆರ್.ಪೂಜಾರಿ, ಬೈಂದೂರು ಕ್ಷೇತ್ರ ಅಧ್ಯಕ್ಷೆ ಲಕ್ಷ್ಮೀ ಆರ್.ಭಟ್, ಕಾಪು ಅಧ್ಯಕ್ಷ ರಮಾನಂದ ಅತ್ತೂರು, ಕಾರ್ಕಳ ಅಧ್ಯಕ್ಷ ರವಿ ನಾಯಕ್, ಬ್ರಹ್ಮಾವರ ಕ್ಷೇತ್ರ ಮಾಜಿ ಅಧ್ಯಕ್ಷ ನವೀನ್ ಬಿ.ರಾವ್, ಜಿಲ್ಲಾ ಉಪಾಧ್ಯಕ್ಷರಾದ ಮಹಾಬಲ ಮೊಗವೀರ ಬೈಂದೂರು, ಬಿ.ಕೆ.ಶ್ರೀನಿವಾಸ ಕಾಪು, ಗೌರಿ ವಿ.ಪೂಜಾರಿ ಬಾರಕೂರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಜಿ ಅಧ್ಯಕ್ಷರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸ ಲಾಯಿತು. ಸಂಸ್ಥೆಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

‘ಟೈಲರ್‌ಗಳ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಂಡು ವಿಧಾನಸಭೆಯಲ್ಲಿ ಮಾತನಾಡಿದರೆ ಮಾತ್ರ ಅದಕ್ಕೆ ಸರಿಯಾದ ಉತ್ತರ ಸಿಗಬಹುದು. ಆ ಉತ್ತರದ ಬಗ್ಗೆ ಚರ್ಚಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸಂಬಂಧಪಟ್ಟ ಸಚಿವರಿಗೆ ಸಮಸ್ಯೆಗಳ ಕುರಿತು ಮಾಹಿತಿ ಕೊಡುವುದು ಮಾತ್ರವಲ್ಲ, ಯೋಜನೆ ಜಾರಿ ಬಗ್ಗೆಯೂ ಚರ್ಚಿಸಬೇಕು. ಸಮಸ್ಯೆ ಬಗ್ಗೆ ಮಂತ್ರಿಗಳಿಗೆ ಮನದಟ್ಟು ಮಾಡಬೇಕು’

-ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News