ಕೇಂದ್ರದಿಂದ ಪ್ರತಿವರ್ಷ ಬಜೆಟ್ ಅನುದಾನ ಕಡಿತ: ಪುಟ್ಟುಮಾದು
ಕುಂದಾಪುರ, ಆ.10: ನೆರೆಯ ರಾಜ್ಯ ಕೇರಳದಲ್ಲಿ ಕೃಷಿಕೂಲಿಕಾರರಿಗೆ 60ವರ್ಷದ ನಂತರ 3000 ಪಿಂಚಣಿ, ಮನೆ ಕಟ್ಟು 5ಸೆಂಟ್ಸ್ ಜಾಗ ಹಾಗೂ ಕಲ್ಯಾಣ ಮಂಡಳಿ ಸವಲತ್ತುಗಳು ಸಿಗುತ್ತವೆ. ಅದರೆ ಕರ್ನಾಟಕ ರಾಜ್ಯದಲ್ಲಿ ಆ ಯೇಆವುದೇ ಸೌಲಭ್ಯಗಳು ಸಿಗುತ್ತಿಲ್ಲ. ಕೇಂದ್ರ ಸರಕಾರ ಪ್ರತಿವರ್ಷ ಬಜೆಟ್ ಅನುದಾನ ಕಡಿತಗೊಳಿಸಿ ಕೊಂಡುಬರುತ್ತಿದೆ ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟುಮಾದು ಹೇಳಿದ್ದಾರೆ.
ಕುಂದಾಪುರ ಹೆಂಚು ಕಾರ್ಮಿಕರ ಭವನದಲ್ಲಿ ರವಿವಾರ ಆಯೋಜಿಸ ಲಾದ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉದ್ಯೋಗ ಖಾತರಿ ಸಮಸ್ಯೆಗಳು, ನಿವೇಶನ ಸಮಸ್ಯೆಗಳ ಬಗ್ಗೆ ಎರಡು ಸರಕಾರಗಳ ಧೋರಣೆ ಸರಿಯಿಲ್ಲ. ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಸ್ಯೆಗಳ ಬಗ್ಗೆ ಸರಕಾರ ಗಮನ ಹರಿಸಬೇಕು. ತಿಂಗಳಿಗೆ 600ರೂ. ವೆತನ ಹಾಗೂ 200 ದಿನ ಕೆಲಸ ನೀಡಬೇಕೆಂದು ಅವರು ಒತ್ತಾಯಿಸಿದರು.
ಅಧ್ಯಕ್ಷತೆಯನ್ನು ಜಿ.ಡಿ.ಪಂಜು ವಹಿಸಿದ್ದರು. ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಕವಿರಾಜ್ ಎಸ್.ಕಾಂಚನ್, ಬೈಂದೂರು ತಾಲೂಕು ಅಧ್ಯಕ್ಷ ಪದ್ಮಾವತಿ ಶಿರೂರು, ಜನವಾದಿ ಮಹಿಳಾ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ಶೀಲಾವತಿ ಉಪಸ್ಥಿತರಿದ್ದರು.
ಧ್ವಜಾರೋಹಣವನ್ನು ಸಂಘದ ಹಿರಿಯ ಸದಸ್ಯ ಕಮಲ ಬಸ್ರೂರು ನೆರವೇರಿಸಿದರು. ಹುತಾತ್ಮ ಸಂಗಾತಿಗಳಿಗೆ ಶ್ರದ್ಧಾಂಜಲಿಯನ್ನು ಶೋಭಾ ಮಂಡಿಸಿದರು. ಈ ಸಂದರ್ಭದಲ್ಲಿ ಮುಂದಿನ 3 ವರ್ಷಗಳಿಗೆ 24 ಜನರ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನಾಗರತ್ನ ನಾಡ ಸ್ವಾಗತಿಸಿ ವಂದಿಸಿದರು. ನಾಗರತ್ನ ರಾಮನಗರ ಕಾರ್ಯಕ್ರಮ ನಿರೂಪಿಸಿದರು.