ವಿದ್ಯಾಲಯ ಮನುಷ್ಯನ ಬದುಕಿನ ಸಂಸ್ಕಾರ ಕೇಂದ್ರ: ಶಾಸಕ ಗುರ್ಮೆ ಸುರೇಶ್
ಶಿರ್ವ, ಆ.10: ಊರಿಗೊಂದು ದೇವಾಲಯ ಮತ್ತು ವಿದ್ಯಾಲಯ ಮನುಷ್ಯನ ಬದುಕಿನ ಸಂಸ್ಕಾರ ಕೇಂದ್ರಗಳಾಗಿವೆ. ನಮ್ಮ ಬದುಕನ್ನು ರೂಪಿಸಲು ಸ್ವಾತಂತ್ರ್ಯ ಹಾಗೂ ಭದ್ರ ಬುನಾದಿ ಹಾಕಿದ ಜ್ಞಾನದೇಗುಲವೇ ಪ್ರಾಥಮಿಕ ಶಾಲೆ. ಹಳೆವಿದ್ಯಾರ್ಥಿಗಳೇ ಶಾಲೆಯ ಆಸ್ತಿ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ವರ್ಷಾ ಚರಣೆ ಕಾರ್ಯಕ್ರಮಗಳಿಗೆ ರವಿವಾರ ಚಾಲನೆ ನೀಡಿ, ಶತಮಾನೋತ್ಸವ ಮನವಿ ಪತ್ರ ಬಿಡುಗಡೆ ಮತ್ತು ಶಾಲೆಗೆ ನೂತನ ವಾಹನ ಹಸ್ತಾಂತರ ಪ್ರಕ್ರಿಯೆಯನ್ನು ನೆರವೇರಿಸಿ ಅವರು ಮಾತನಾಡುತಿದ್ದರು.
ಶಾಲಾ ಸಂಚಾಲಕ ರಾಮದಾಸ್ ಪ್ರಭು ಹಾಗೂ ಮುಖ್ಯ ಶಿಕ್ಷಕಿ ಸಂಗೀತ ಆರ್.ಪಾಟ್ಕರ್ ಅವರಿಗೆ ವಾಹನದ ಕೀಯನ್ನು ಶಾಸಕರು ಹಸ್ತಾಂತರಿಸಿದರು. ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ಶತಮಾನೋತ್ಸವ ವೇದಿಕೆಯನ್ನು ಅನಾವರಣಗೊಳಿಸಿದರು. ಪಾಂಬೂರು ಹೋಲಿಕ್ರಾಸ್ ಚರ್ಚ್‌ನ ಧರ್ಮ ಗುರು ರೆ.ಫಾ.ರೋಶನ್ ಡಿಸೋಜ ಶತಮಾನೋತ್ಸವ ಸಮಿತಿ ಕಾರ್ಯಾಲಯ ವನ್ನು ಉದ್ಘಾಟಿಸಿದರು.
ಶಾಲಾ ಹಳೆವಿದ್ಯಾರ್ಥಿ ಮಾನಿಪಾಡಿ ರತ್ನಾಕರ ಶೆಟ್ಟಿ ನೂತನ ಪೀಠೋಪಕರಣಗಳಾದ ಡೆಸ್ಕು, ಬೆಂಚುಗಳನ್ನು ಹಸ್ತಾಂತರಿಸಿದರು. ಶಿರ್ವ ಗ್ರಾಪಂ ಅಧ್ಯಕ್ಷೆ ಸವಿತಾ ಪೂಜಾರಿ ಶಾಲಾ ಆವರಣದಲ್ಲಿ ಕರುವಿನೊಂದಿಗಿನ ಕಾಮಧೇನು ಪ್ರತಿಮೆ ಅನಾವರಣ ಮಾಡಿದರು. ಬಂಟಕಲ್ಲು ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶಂಕರ ಪದಕ್ಕಣ್ಣಾಯ ವಿದ್ಯಾರ್ಥಿಗಳಿಗೆ ಗುರುಚೀಟಿ ವಿತರಿಸಿದರು.
ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ತಲಾ ಮೂರು ಸಾವಿರ ರೂ.ಮೌಲ್ಯದ ನಿರಖು ಠೇವಣಿ ಪತ್ರ ನೀಡಿದರು. ಕಟಪಾಡಿ ಶ್ರೀಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಳದ 3ನೇ ಮೊಕ್ತೇಸರ ಗಂಗಾಧರ ಆಚಾರ್ಯ ದಿಂಡಿಬೆಟ್ಟು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ ವಿತರಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಶತಮಾನೋತ್ಸದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ಬಂಟಕಲ್ಲು ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ಸಮಿತಿಯ ಪದಾಧಿಕಾರಿಗಳಾದ ಭಾಸ್ಕರ ಶೆಟ್ಟಿ ಸಡಂಬೈಲು, ರಾಮಚಂದ್ರ ನಾಯಕ್ ಪಡುಬೆಳ್ಳೆ, ಲೂವಿಸ್ ಮಾರ್ಟಿಸ್ ಬಂಟಕಲ್ಲು, ಎಸ್.ಎಸ್.ಪ್ರಸಾದ್, ದಾಮೋದರ ಆಚಾರ್ಯ, ಅನಂತರಾಮ ವಾಗ್ಲೆ, ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾರ್ಟ್ಕ ಉಪಸ್ಥಿತರಿದ್ದರು.
ಉಪಾಧ್ಯಕ್ಷ ದಿನೇಶ್ ದೇವಾಡಿಗ ಸ್ವಾಗತಿಸಿದರು. ಶಿಕ್ಷಕ ದೇವದಾಸ್ ಪಾಟ್ಕರ್ ನಿರೂಪಿಸಿದರು. ಅಂಗನವಾಡಿ ಶಿಕ್ಷಕಿ ವಿನಯಾ ವಂದಿಸಿದರು.