ಎರಡು ದಿನ ರಾಜ್ಯ ಕರಾವಳಿಯಲ್ಲಿ ಗಾಳಿ-ಮಳೆ: ಹವಾಮಾನ ಕೇಂದ್ರ ಮುನ್ಸೂಚನೆ
Update: 2025-08-13 19:43 IST
ಉಡುಪಿ, ಆ.13: ಬಂಗಾಳ ಕೊಲ್ಲಿಯಲ್ಲಿ ನಿಮ್ನ ಒತ್ತಡ ಉಂಟಾಗಿರುವ ಹಿನ್ನೆಲೆಯಲ್ಲಿ ಚಂಡಮಾರುತ ನಿರ್ಮಾಣಗೊಳ್ಳುತಿದ್ದು, ಇದರಿಂದ ಪಶ್ಚಿಮ ಕರಾವಳಿಯ ಲಕ್ಷದ್ವೀಪ, ಕೇರಳ ಹಾಗೂ ಕರ್ನಾಟಕದ ಕರಾವಳಿಯಲ್ಲಿ ಮುಂದಿನ ಎರಡು ದಿನಗಳ ಕಾಲ ಗಾಳಿಯಿಂದ ಕೂಡಿದ ಭಾರೀ ಮಳೆ ಅಲ್ಲಲ್ಲಿ ಬೀಳುವ ಸಾಧ್ಯತೆ ಇದೆ ಎಂದು ತಿರುವನಂತಪುರದ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಇದರ ಪರಿಣಾಮ ಆ.13ರಿಂದ 15ರವರೆಗೆ ಗಂಟೆಗೆ 40ರಿಂದ 50ಕಿ.ಮೀ. ವೇಗದ ಗಾಳಿಯೊಂದಿಗೆ ಮಳೆ ಸುರಿಯಲಿದೆ. ಇದರೊಂದಿಗೆ ಗುಡುಗು ಮತ್ತು ಮಿಂಚು ಸಹ ಇರುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆಯೂ ಎಚ್ಚರಿಕೆ ನೀಡಲಾಗಿದೆ. ರಾಜ್ಯ ಕರಾವಳಿಯ ಬಂದರುಗಳಲ್ಲಿ ಎಚ್ಚರಿಕೆಯ ಸೂಚನೆ ನಂ.3ನ್ನು ಪ್ರದರ್ಶಿಸುವಂತೆಯೂ ಸೂಚಿಸಲಾಗಿದೆ.