ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ: ಮನೆ ಹಾನಿ, ಅಲ್ಲಲ್ಲಿ ಗುಡ್ಡಕುಸಿತ
ಉಡುಪಿ, ಆ.28: ಕಳೆದ ಮೂರ್ನಾಲ್ಕು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತಿದ್ದ ಮಳೆಯ ಅಬ್ಬರ ಇಂದು ಸ್ವಲ್ಪ ಕಡಿಮೆಯಾಗಿದೆ. ಮಳೆ ನಿರಂತರವಾಗಿ ಸುರಿದರೂ ಅದರಿಂದ ನೆರೆ ಬಂದ ಯಾವುದೇ ಮಾಹಿತಿ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹೆಚ್ಚಿನೆಲ್ಲಾ ರಸ್ತೆಗಳಲ್ಲೇ ನೀರು ಹರಿದು ಸಂಚಾರಕ್ಕೆ ಅದರಲ್ಲೂ ಪಾದಾಚಾರಿಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾದ ವರದಿ ಬಂದಿವೆ.
ಇಂದು ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 99ಮಿ.ಮೀ. ಮಳೆ ಯಾಗಿದೆ. ಬೈಂದೂರಿನಲ್ಲಿ ಅತ್ಯಧಿಕ ಅಂದರೆ 161 ಮಿ.ಮೀ. ಮಳೆಯಾದ ವರದಿ ಬಂದಿದೆ. ಉಳಿದಂತೆ ಕುಂದಾಪುರದಲ್ಲಿ 96.9ಮಿ.ಮೀ., ಹೆಬ್ರಿಯಲ್ಲಿ 92.6ಮಿ.ಮೀ., ಕಾಪುವಲ್ಲಿ 84.6, ಉಡುಪಿಯಲ್ಲಿ 83.1, ಕಾರ್ಕಳದಲ್ಲಿ 78, ಬ್ರಹ್ಮಾವರದಲ್ಲಿ 77.5 ಮಿ.ಮೀ. ಮಳೆಯಾದ ವರದಿಗಳು ಬಂದಿವೆ.
ಬೈಂದೂರು ತಾಲೂಕಿನ ಬಿಜೂರು ಗ್ರಾಮದಲ್ಲಿ ನಾಲ್ವರನ್ನು ನೆರೆಯ ಕಾರಣದಿಂದ ಮನೆಯಿಂದ ಸ್ಥಳಾಂತರಿ ಸಲಾಯಿತು. ಇವರು ಕಾಳಜಿ ಕೇಂದ್ರಗಳಿಗೆ ತೆರಳದೇ ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದರು ಎಂದು ತಹಶೀಲ್ದಾರರು ವರದಿ ಮಾಡಿದ್ದಾರೆ.
ಕುಂದಾಪುರ ತಾಲೂಕು ರಟ್ಟಾಡಿಯ ಶಂಕರ ಎಂಬವರ ಮನೆಯ ಮೇಲೆ ಬಾರೀ ಮರ ಬಿದ್ದು ಮನೆಗೆ ಭಾರೀ ಹಾನಿಯುಂಟಾಗಿರುವುದಾಗಿ ಮಾಹಿತಿಗಳು ಬಂದಿವೆ. ಕೊಲ್ಲೂರು ಘಾಟ್ ರಸ್ತೆಯ ಗುಡ್ಡ ಕುಸಿದಿದ್ದು, ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಸ್ಥಳಕ್ಕೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಆಗಮಿಸಿ ಮಣ್ಣನ್ನು ತೆರವು ಗೊಳಿಸಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು.