×
Ad

ರೈತರಿಗೆ ಸರಕಾರದ ಯೋಜನೆಗಳ ಪ್ರಯೋಜನ ಸರಿಯಾಗಿ ತಲುಪಿಸಿ: ಅಧಿಕಾರಿಗಳಿಗೆ ಶಾಸಕ ಯಶ್‌ಪಾಲ್ ಸೂಚನೆ

Update: 2025-09-02 20:26 IST

ಉಡುಪಿ, ಸೆ.2: ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಈ ಎಲ್ಲಾ ಯೋಜನೆಗಳ ಪ್ರಯೋಜನ ಪ್ರತಿಯೊಬ್ಬ ಫಲಾನುಭವಿ ರೈತನಿಗೂ ಸರಿಯಾಗಿ ತಲುಪುವಂತೆ ನೋಡಿಕೊಳ್ಳ ಬೇಕು ಎಂದು ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‌ಗಳ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಹಾಗೂ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡು ತಿದ್ದರು.

ದೇಶದ ಬೆನ್ನುಲುಬೆನಿಸಿರುವ ರೈತಾಪಿ ವರ್ಗದ ಅಭಿವೃದ್ದಿಗೆ ಸರಕಾರಗಳು ಜಾರಿಗೊಳಿಸುವ ಯೋಜನೆಗಳ ಮಾಹಿತಿಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮ ಪ್ರಯೋಜನಕಾರಿ ಎಂದ ಅವರು, ಎಲ್ಲಾ ಮಾಹಿತಿಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಮುತುವರ್ಜಿವಹಿಸ ಬೇಕು. ರೈತರು ಇವುಗಳ ಗರಿಷ್ಟ ಪ್ರಯೋಜನ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಇಲಾಖಾಧಿಕಾರಿಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಹೊಂದಿ, ಆರ್ಥಿಕ ನೆರವು ಪಡೆಯಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಭೇಟಿ ನೀಡುವ ರೈತರಿಗೆ ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡುವ ಮೂಲಕ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಎಲ್ಲಾ ಯೋಜನೆಗಳ ಪ್ರಯೋಜನ ಪಡೆದು ಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ನಾಯಕ್, ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದ 6 ಲಕ್ಷ ಮತ್ತು ರಾಜ್ಯ ಸರ್ಕಾರದ 9 ಲಕ್ಷ ಸಹಾಯಧನ ದೊಂದಿಗೆ ಯೋಜನೆಯ ಅಡಿಯಲ್ಲಿ ಶೇ.50ರಷ್ಟು ಅಥವಾ ಗರಿಷ್ಟ 15 ಲಕ್ಷ ರೂ. ಸಹಾಯಧನ ನೀಡಲಾಗುವುದು ಎಂದರು.

ಇದುವರೆಗೆ ಈ ಯೋಜನೆಯಡಿಯಲ್ಲಿ ರಾಜ್ಯದ 6,500ಕ್ಕೂ ಹೆಚ್ಚು ಉದ್ದಿಮೆದಾರರಿಗೆ ಸಾಲ ಮಂಜೂರಾಗಿದ್ದು 2025-26ನೇ ಸಾಲಿನ ಆಯವ್ಯಯದಲ್ಲಿ 5,000 ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ 206 ಕೋಟಿ ರೂ. ಅನುದಾನ ಘೋಷಣೆಯಾಗಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ 374 ವಿವಿಧ ಉದ್ದಿಮೆದಾರರಿಗೆ ಆರ್ಥಿಕ ನೆರವು ನೀಡಲಾಗಿದ್ದು, ಪ್ರಸ್ತುತ 43 ಫಲಾನುಭವಿಗಳು ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆಹಾರ ಸಂಸ್ಕರಣಾ ಉದ್ದಿಮೆ ಯಲ್ಲಿರುವ ಸಾರ್ವಜನಿಕರು ಯೋಜನೆಯ ಪ್ರಯೋಜನ ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸೂರಜ್ ಶೆಟ್ಟಿ, ವೆಂಕಟೇಶ್ ನಾಯ್ಕ್, ರಾಜೇಶ್ ಡಿ.ಪಿ, ರೂಪಾಶ್ರೀ ಹಾಗೂ ಡಾ.ಫಜಲ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಯೋಜನೆಯ ಕುರಿತು ಮಾಹಿತಿಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಜು, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ, ಲೀಡ್ ಬ್ಯಾಂಕ್‌ನ ಸುಮನ್, ಕೆಪೆಕ್‌ನ ಅರವಿಂದ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕೃಷಿ ಇಲಾಖೆಯ ಅಧಿಕಾರಿ ಶ್ರೀರಾಮ್ ಹೆಗಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News