×
Ad

ಕಂಡ್ಲೂರಿನಲ್ಲಿ ದೃಷ್ಟಿ ಯೋಜನೆಗೆ ಚಾಲನೆ| ಸಾರ್ವಜನಿಕ ಸಹಭಾಗಿತ್ವದ ದೂರಗಾಮಿ ಯೋಜನೆ: ಎಸ್ಪಿ ಹರಿರಾಂ ಶಂಕರ್

Update: 2025-09-10 20:57 IST

ಕಂಡ್ಲೂರು (ಕುಂದಾಪುರ), ಸೆ.10: ಸರಕಾರದ ಯಾವುದೇ ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗಬೇಕಾದಲ್ಲಿ ಸಾರ್ವಜನಿಕ ಸಹಭಾಗಿತ್ವ ಅತ್ಯಂತ ಅವಶ್ಯಕವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಂಡ್ಲೂರಿನ ಭವಾನಿ ಸಂಜೀವ ಶೆಟ್ಟಿ ಹಾಲ್‌ನಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಲಾಖೆಯ ಮಹತ್ವಾಕಾಂಕ್ಷೆಯ ದೃಷ್ಟಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಟೀಕೆ ಮಾತುಗಳನ್ನು ಕೇಳುತ್ತಾ ಕರ್ತವ್ಯ ಪಾಲನೆ ಒಂದು ರೀತಿಯದ್ದಾದರೆ, ಸಾರ್ವಜನಿಕರ ಅಭಿಪ್ರಾಯಗಳನ್ನು, ಮಾಧ್ಯಮ ವರದಿಯಲ್ಲಿನ ಅಂಶಗಳನ್ನು ಪಡೆದುಕೊಂಡು ಕರ್ತವ್ಯ ಪಾಲನೆ ಇನ್ನೊಂದು ರೀತಿಯದ್ದಾಗಿದೆ. ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗಳಿದ್ದಲ್ಲಿ ಅಪರಾಧ ಪ್ರಕರಣಗಳು ಘಟಿಸುವುದಿಲ್ಲ ಹಾಗೂ ಸಾಮಾಜಿಕ ಸಾಮರಸ್ಯಕ್ಕೂ ಕೊರತೆಯಾಗೋದಿಲ್ಲ. ಪಿಪಿಪಿ ಮಾದರಿಯಲ್ಲಿ ಕಾರ್ಯಾಚರಿಸುವ ದೃಷ್ಟಿ ಯೋಜನೆಯಡಿ ಕನಿಷ್ಠ 50 ಗುಂಪುಗಳನ್ನು ರಚಿಸುವ ಪ್ರಾರಂಭಿಕ ಗುರಿ ಇರಿಸಿಕೊಳ್ಳಲಾಗಿದೆ ಎಂದರು.

ಗೃಹರಕ್ಷಕ ದಳದ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಮಾತನಾಡಿ, ಕನಸುಗಳನ್ನು ಎಲ್ಲರೂ ಕಾಣು ತ್ತಾರೆ. ಆದರೆ ಕಂಡ ಕನಸುಗಳನ್ನು ನನಸಾಗಿಸುವ ಇಚ್ಛಾ ಶಕ್ತಿ ಇರಬೇಕು. ಬೆರಳೆಣಿಕೆಯ ಪೊಲೀಸರಿಂದ ಕೋಟ್ಯಂತರ ಸಂಖ್ಯೆಯ ನಾಗರಿಕರ ರಕ್ಷಣೆ ಹಾಗೂ ಪಾಲನೆ ಹೊಣೆ ಅತ್ಯಂತ ತ್ರಾಸದಾಯಕ. ಇಲಾಖೆಯ ಜನಪರ ಯೋಜನೆಗಳಲ್ಲಿ ಸಾರ್ವಜನಿಕ ಭಾಗೀದಾರಿಕೆ ಇದ್ದರೆ ಮಾತ್ರ, ಸಮಾಜ ಶಾಂತಿ ಹಾಗೂ ನೆಮ್ಮದಿಯಿಂದ ಇರಲು ಸಾಧ್ಯ. ಹೊಸ ಹೊಸ ಯೋಜನೆಗಳ ಮೂಲಕ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಮುಂದಾಗಿರುವ ಎಸ್ಪಿ ಅವರ ಕಾರ್ಯವೈಖರಿ ಅಭಿನಂದನೀಯ ಎಂದರು.

ಕಂಡ್ಲೂರು ಮಸೀದಿಯ ಧರ್ಮಗುರುಗಳಾದ ಮೌಲಾನಾ ಇಲಿಯಾಜ್ ನದ್ವಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಜಯ್ ಪುತ್ರನ್ ಹಾಗೂ ಉಡುಪಿಯ ಜಂಬೊ ಸ್ಟಾರ್ ಸೆಕ್ಯೂರಿಟಿ ಏಜಿನ್ಸಿಯ ವಿಜಯ್ ಫೆರ್ನಾಂಡಿಸ್ ಮಾತನಾಡಿದರು. ಕಂಡ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೌಸೀನ್ ಹಸ್ರತ್, ದೃಷ್ಟಿ ಯೋಜನೆ ಅಧ್ಯಕ್ಷ ಫಜಲ್ ಕಾಸೀಂ, ಗ್ರಾಮ ಪಂಚಾಯಿತಿ ಪಿಡಿಒ ರೇಣುಕಾ ಶೆಟ್ಟಿ ಉಪಸ್ಥಿತರಿದ್ದರು.

ದೃಷ್ಟಿ ಯೋಜನೆಯಡಿ ಕರ್ತವ್ಯ ನಿರ್ವಹಿಸಲು ಒಪ್ಪಿರುವ ಕೋಟಾದ ಗಣೇಶ್ ಅವರಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಲ್ ಇನ್ಸಪೆಕ್ಟರ್ ಜಯರಾಮ್ ಗೌಡ ಸ್ವಾಗತಿಸಿದರು. ಕಂಡ್ಲೂರು ಠಾಣಾಧಿಕಾರಿ ಭೀಮಾಶಂಕರ್ ವಂದಿಸಿದರು. ಹೆಡ್‌ಕಾನ್‌ಸ್ಟೇಬಲ್ ಮಧೂಸೂಧನ್ ಉಪ್ಪಿನಕುದ್ರು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News