ಯಕ್ಷಗಾನ ಬೆಳೆಸಲು ಅಕಾಡೆಮಿ ಜೊತೆಗೆ ಕೈಜೋಡಿಸಿ: ತಲ್ಲೂರು
ಕೊಡವೂರಿನಲ್ಲಿ ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರದ ಸಮಾರೋಪ
ಉಡುಪಿ: ಯಕ್ಷಗಾನ ಉಳಿಸುವುದು ಕೇವಲ ಅಕಾಡೆಮಿಯ ಕೆಲಸವಲ್ಲ, ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳು ಅಕಾಡೆಮಿ ಜೊತೆಗೆ ಕೈ ಜೋಡಿಸಬೇಕು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಸುಮನಸಾ ಕೊಡವೂರು ಉಡುಪಿ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಕೊಡವೂರು ಶ್ರೀಶಂಕರ ನಾರಾಯಣ ದೇವಸ್ಥಾನದಲ್ಲಿ ಸೋಮವಾರ ನಡೆದ ಒಂದು ತಿಂಗಳ ’ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನ ಕಲೆಗೆ ಅದ್ಭುತ ಶಕ್ತಿಯಿದೆ. ಅದು ಅಬಾಲವೃದ್ಧರನ್ನು ಕುಣಿಸುವ ಶಕ್ತಿಯನ್ನು ಹೊಂದಿದೆ. ಯಕ್ಷಗಾನವನ್ನು ಕಲಿತವರು ಆರೋಗ್ಯ, ಜೀವನೋತ್ಸಾಹದಿಂದ ಬದುಕುತ್ತಾರೆ. ಬನ್ನಂಜೆ ಸಂಜೀವ ಸುವರ್ಣ ಅವರಂತಹ ಅದ್ಭುತ ಗುರು ನಮ್ಮಲ್ಲಿರುವುದು ನಮ್ಮ ಸೌಭಾಗ್ಯ. ಅವರಲ್ಲಿರುವ ಯಕ್ಷಗಾನ ಪಾಂಡಿತ್ಯವನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯ ನಡೆಯಬೇಕು ಎಂಬ ಉದ್ದೇಶದಿಂದ ಅಕಾಡೆಮಿ ಅವರ ಬಗ್ಗೆ ದಾಖಲೀಕರಣ ಮಾಡುತ್ತಿದೆ ಎಂದರು.
ಮಕ್ಕಳೊಂದಿಗೆ ಮಹಿಳೆಯರು ಯಕ್ಷಗಾನಕ್ಕೆ ಬರಬೇಕು. ಸಮಾಜ ಅದಕ್ಕೆ ಪ್ರೋತ್ಸಾಹ ನೀಡಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಬಲ್ಲವರ ಮಾತಿನಂತೆ, ಮಹಿಳೆ ಯಕ್ಷಗಾನವನ್ನು ಕಲಿತರೆ ತನ್ನ ಮಕ್ಕಳನ್ನು ಮಾತ್ರವಲ್ಲದೆ, ಇತರರನ್ನು ಈ ಕಲೆಯ ಕಡೆಗೆ ಸೆಳೆಯುವ ಶಕ್ತಿ ಆಕೆಗಿದೆ. ಆದ್ದರಿಂದಲೇ ಯಕ್ಷಗಾನ ಅಕಾಡೆಮಿ ಮಕ್ಕಳ ಯಕ್ಷಗಾನ ತಂಡ ಹಾಗೂ ಮಹಿಳಾ ಯಕ್ಷಗಾನ ತಂಡಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ತರಬೇತಿ ನಮ್ಮ ಕಲಿಕೆಯನ್ನು ಪರಿಪೂರ್ಣಗೊಳಿಸುತ್ತದೆ. ಈ ಮಣ್ಣಿನ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸಲು ಯುವಕರ ಆವಶ್ಯಕತೆಯಿದೆ ಎಂದು ಹೇಳಿದರು.
ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಉದ್ಯಮಿ ಗೋಪಾಲ ಸಿ.ಬಂಗೇರ, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯ, ತರಬೇತುದಾರ ಮನೋಜ್ ಉಪಸ್ಥಿತರಿದ್ದರು. ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ.ಎಸ್.ಭಟ್ ವಂದಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಿಬಿರದ ಪ್ರಾತ್ಯಕ್ಷಿಕೆ ಹಾಗೂ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.