×
Ad

ಕಾರ್ಕಳ ಕಾಂಗ್ರೆಸ್ ಕಚೇರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ

Update: 2025-09-13 19:23 IST

ಕಾರ್ಕಳ, ಸೆ.13: ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ನೀವು ಗೆಲ್ಲಿಸಲೇಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕಾರ್ಕಳದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಸಚಿವೆ, ಕಳೆದ ಬಾರಿಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉದಯ್ ಶೆಟ್ಟಿ ಅವರಿಗೆ ಗೆಲ್ಲಲು ಉತ್ತಮ ಅವಕಾಶಗಳಿದ್ದವು. ಆದರೆ, ಅದೃಷ್ಟ ಅವರ ಕೈಹಿಡಿಯ ಲಿಲ್ಲ. ಮುಂದಿನ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ವಾತಾವರಣವಿದೆ ಎಂದರು.

ನಾನು ನನ್ನ ಕ್ಷೇತ್ರದಲ್ಲಿ ಎರಡೂ ಬಾರಿ ಸೋತರೂ, ಜನರ ನಡುವೆ ಉತ್ತಮ ಒಡನಾಟ ಬೆಳೆಸಿಕೊಂಡ ಫಲವಾಗಿ ಸತತ ಎರಡು ಸಲ ಭಾರಿ ಅಂತರದಿಂದ ಜನರು ಗೆಲ್ಲಿಸಿದರು. ಸೋಲೇ ಗೆಲುವಿನ ಮೆಟ್ಟಿಲು. ಉದಯ್ ಶೆಟ್ಟಿ ಅವರು ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಮುಂದಿನ ಬಾರಿ ಅವರ ಗೆಲುವು ಶತಸಿದ್ಧ ಎಂದು ಸಚಿವರು ಹೇಳಿದರು.

ಪತ್ರಿಕಾ ಭವನಕ್ಕೆ ಭೇಟಿ: ಇದಕ್ಕೆ ಮುನ್ನ ಸಚಿವರು ಕಾರ್ಕಳದ ನೂತನ ಪತ್ರಿಕಾ ಭವನಕ್ಕೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಸಚಿವರನ್ನು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪತ್ರಿಕಾ ಭವನಕ್ಕೆ ಸ್ವಂತ ನಿವೇಶನ ಒದಗಿಸುವ ಕುರಿತು ಪ್ರಯತ್ನ ನಡೆಸುವುದಾಗಿ ಅವರು ಭರವಸೆ ನೀಡಿದರು.

ಸಚಿವರ ಭೇಟಿಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಕಾಂಗ್ರೆಸ್ ಮುಖಂಡರಾದ ಉದಯ್ ಶೆಟ್ಟಿ ಮುನಿಯಾಲು, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಷ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News