×
Ad

ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಬಿಗಿ ಪೊಲೀಸ್ ಬಂದೋಬಸ್ತ್| ನೂಕುನುಗ್ಗಲು, ಕಾಲ್ತುತ ಆಗದಂತೆ ಕಟ್ಟೆಚ್ಚರ: ಎಸ್ಪಿ ಹರಿರಾಂ ಶಂಕರ್

Update: 2025-09-13 20:09 IST

ಉಡುಪಿ, ಸೆ.13: ಉಡುಪಿ ಶ್ರೀಕೃಷ್ಣ ಮಠದಲ್ಲಿ ರವಿವಾರ ಹಾಗೂ ಸೋಮವಾರ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಪ್ರಯುಕ್ತ ಉಡುಪಿ ನಗರ, ಕೃಷ್ಣ ಮಠ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗು ತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಸ್ಥಳದಲ್ಲಿರುವ ಮಥುರಾ ಛತ್ರ ಹೊಟೇಲ್ ಸಭಾಂಗಣದಲ್ಲಿ ಶನಿವಾರ ನಡೆದ ಬಂದೋಬಸ್ತ್ ಸಂಬಂಧ ಪೊಲೀಸರ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.

ಸೆ.15ರ ವಿಟ್ಲಪಿಂಡಿ ದಿನ ಎಂಟು ಕಡೆ ಮೊಸರು ಕುಡಿಕೆ ನಡೆಯುವಾಗ ಯಾವುದೇ ನೂಕುನುಗ್ಗಲು ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸಿಬಂದಿಗಳು ಲೌಡ್ ಸ್ಪೀಕರ್ ಮೂಲಕ ಅನ್ಸೌನ್ ಮಾಡಿ ಜನಸಂದಣಿ ನಿಯಂತ್ರಿಸುವ ಕಾರ್ಯ ಮಾಡಲಿದ್ದಾರೆ. ಆ ದಿನ ರಥಬೀದಿಯಲ್ಲಿ ಇಕ್ಕಟ್ಟು ಆಗದಂತೆ ನಗರಸಭೆಯ ಮೂಲಕ ಅಲ್ಲಿನ ಸುತ್ತಮುತ್ತಲಿನ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದರು.

ಕಳೆದ ವರ್ಷದ ರೀತಿಯಲ್ಲಿ ಹಾಗೂ ಇಲಾಖೆಯ ಜನಸಂದಣಿ ನಿಯಂತ್ರಣ ಸುತ್ತುಲೋಯಂತೆ ಸೂಕ್ತ ಬಂದೋಬಸ್ತ್ ಮಾಡಲಾಗುವುದು. ಮಹಿಳೆಯರ ಸುರಕ್ಷೆ, ಅಪರಾಧ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿಟ್ಲ ಪಿಂಡಿ ದಿನ ಜನ ಬಹಳ ಸಂಖ್ಯೆಯಲ್ಲಿ ಸೇರುವುದರಿಂದ ಮಳೆ ಬಂದರೇ ನೂಕುನುಗ್ಗಲು ಆಗದಂತೆ ರಥಬೀದಿಯ ಸುತ್ತ ಇರುವ ಮನೆ ಹಾಗೂ ಕಟ್ಟಡಗಳ ಗೇಟುಗಳನ್ನು ತೆರೆದಿಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಎಲ್ಲ ಸಿಬ್ಬಂದಿಗಳಿಗೆ ಎಲ್ಲ ರೀತಿಯ ನಿರ್ದೇಶನಗಳನ್ನು ನೀಡ ಲಾಗಿದೆ. ಎರಡು ದಿನ ಯಾವುದೇ ರೀತಿಯಲ್ಲೂ ಲೋಪ ಬಾರದಂತೆ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ಹೇಳಿದರು.

ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯ್ಕ್, ಡಿವೈಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಡಿಗೇರ, ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಹಾಜರಿದ್ದರು.

400ಕ್ಕೂ ಅಧಿಕ ಪೊಲೀಸರ ನಿಯೋಜನೆ

ಒಬ್ಬರು ಡಿವೈಎಸ್ಪಿ, ಐವರು ಪೊಲೀಸರು ನಿರೀಕ್ಷಕರು, 12 ಎಸ್ಸೈಗಳು, 34 ಎಎಸ್ಸೈಗಳು, 191 ಹೆಡ್‌ಕಾನ್ಟೇಬಲ್/ಸಿಬ್ಬಂದಿ, 43 ಮಹಿಳಾ ಸಿಬ್ಬಂದಿ, 47 ಹೋಮ್ ಗಾರ್ಡ್ ಸೇರಿದಂತೆ ಒಟ್ಟು 333 ಸಿಬ್ಬಂದಿಗಳನ್ನು ಬಂದೋಬಸ್ತಿ ಗಾಗಿ ನಿಯೋಜಿಸಲಾಗುತ್ತಿದೆ. ಅದೇ ರೀತಿ 16 ಜಿಲ್ಲಾ ಸಶಸ್ತ್ರ ಮೀಸಲು ತುಕಡಿಗಳನ್ನು ನಿಯೋಜಿಸಲಾಗುತ್ತದೆ ಎಂದು ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದರು.

ಅದೇ ರೀತಿ ಒಂದು ಅಗ್ನಿಶಾಮಕ ದಳ, ಏಳು ವಿಡಿಯೋಗ್ರಫಿ, ಮಫ್ತಿ ಕ್ರೈಮ್ ಸಿಬ್ಬಂದಿ, ದ.ಕ. ಜಿಲ್ಲೆಯ ಎರಡು, ಚಿಕ್ಕಮಗಳೂರು ಜಿಲ್ಲೆಯ 2, ಉತ್ತರ ಕನ್ನಡ ಜಿಲ್ಲೆಯ ಎರಡು ಹೆಚ್ಚುವರಿ ಕ್ಱೈಮ್ ಸ್ಟಾಫ್‌ಗಳನ್ನು ನಿಯೋಜಿಸಲಾಗುತ್ತಿದೆ.

ಬೀಡಿನಗುಡ್ಡೆ ಮೈದಾನ, ಎಂಜಿಎಂ ಮೈದಾನ, ಡಿಮಾರ್ಟ್ ಪಾರ್ಕಿಂಗ್ ಸ್ಥಳ, ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್, ರಾಜಾಂಗಣ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ. ಎರಡು ಶ್ವಾನ ದಳ, ಮೂರು ವಿದ್ವಂಸ ಕೃತ್ಯ ತಡೆ ತಂಡ, ಒಂದು ಕ್ವಿಕ್ ರೆಸ್ಪಾನ್ಸ್ ಟೀಮ್, ಎರಡು ಡ್ರೋನ್ ಕ್ಯಾಮೆರಾಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

‘ಅಷ್ಟಮಿಯ ಎರಡು ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಯೋಜನೆ ರೂಪಿಸಿ ಬಂದೋಬಸ್ತ್ ಮಾಡಲಾಗಿದೆ. ಅಷ್ಟಮಿಯ ಪ್ರಯುಕ್ತ ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಹಾಗೂ ಪ್ರಚೋದನ ಕಾರಿ ವೇಷಗಳನ್ನು ಯಾರು ಹಾಕಬಾರದು’

-ಹರಿರಾಮ್ ಶಂಕರ್, ಎಸ್ಪಿ ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News