ಅಲಾರೆ ತಂಡದ ಮಡಿಕೆ ಒಡೆಯುವ ಪ್ರದರ್ಶನ
ಉಡುಪಿ, ಸೆ.15: ಉಡುಪಿಯ ಶ್ರೀಕೃಷ್ಣಾಷ್ಟಮಿ ವಿಟ್ಲಪಿಂಡಿಯ ಪ್ರಯುಕ್ತ ಮುಂಬಯಿ ಬಾಲಮಿತ್ರ ವ್ಯಾಯಾಮ ಶಾಲೆಯ 200 ಮಂದಿಯ ಸದಸ್ಯರ ಅಲಾರೆ ಗೋವಿಂದ ತಂಡವು ನಗರದ 10 ಕಡೆಗಳಲ್ಲಿ 50 ಅಡಿ ಎತ್ತರದ ಮಾನವ ಪಿರಮಿಡ್ ರಚಿಸಿ ಮಡಿಕೆ ಒಡೆಯುವ ಪ್ರದರ್ಶನ ನಡೆಸಿತು.
ಸೋಮವಾರ ಬೆಳಗ್ಗೆ ಉಡುಪಿ ಕೃಷ್ಣಮಠದ ರಥಬೀದಿಯ ಕನಕ ಗೋಪುರ ಎದುರು ಪರ್ಯಾಯ ಪುತ್ತಿಗೆ ಮಠಾ ಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಕುಂಜಿಬೆಟ್ಟು, ನಂದ ಗೋಲ್ಡ್ ಎದುರು, ಸಂಸ್ಕೃತ ಕಾಲೇಜು, ತ್ರಿವೇಣಿ ಸರ್ಕಲ್, ಮಿತ್ರ ಆಸ್ಪತ್ರೆಯ ಬಳಿಯ ಗಿರಿಜಾ ಸರ್ಜಿಕಲ್ ಎದುರು, ಅಂಬಲಪಾಡಿ, ಆದಿಉಡುಪಿ, ಮಿಷನ್ ಕಂಪೌಂಡ್, ಅಂಬಾಗಿಲಿನಲ್ಲಿ ಪ್ರದರ್ಶನ ನಡೆಯಿತು.
ಮಠದ ಗೀತಾ ಮಂದಿರದ ಎದುರು ಪುರುಷ ಹಾಗೂ ಮಹಿಳೆಯರ ತಂಡದಿಂದಲೂ ಮಾನವ ಪಿರಮಿಡ್ ರಚಿಸಿ ಮಡಕೆಯನ್ನು ಒಡೆಯಲಾಯಿತು. ಈ ಸಂದರ್ಭದಲ್ಲಿ ಪುತ್ತಿಗೆ ಸ್ವಾಮೀಜಿ, ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ ಹಾಜರಿದ್ದರು.
ಗಮನ ಸೆಳೆದ ವಿರಾಟ್ ಕೊಯ್ಲಿ!
ವಿಟ್ಲಪಿಂಡಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಯ್ಲಿ ವೇಷಧಾರಿ ವಿಶೇಷ ಗಮನ ಸೆಳೆದರು.
ವಿರಾಟ್ ಕೊಯ್ಲಿ ಸಮ್ಮುಖದಲ್ಲಿ ಆರ್‌ಸಿಬಿ ತಂಡವು ಟ್ರೋಫಿಯೊಂದಿಗೆ ವಿಜಯೋತ್ಸವ ಸಂಭ್ರಮಿಸಿತು. ನಗರದ ಎಲ್ಲ ಕಡೆ ತೆರೆದ ವಾಹನದಲ್ಲಿ ಸಂಚರಿಸಿ ಎಲ್ಲರ ಗಮನ ಸೆಳೆಯಿತು.