×
Ad

ತಾತ್ಕಾಲಿಕ ಸುಡುಮದ್ದು ಮಾರಾಟ ಪರವಾನಿಗೆಗೆ ಅರ್ಜಿ ಆಹ್ವಾನ

Update: 2025-09-16 19:50 IST

ಉಡುಪಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡಲು ಅಪೇಕ್ಷಿಸುವವರಿಂದ ಸುಡುಮದ್ದು ಮಾರಾಟದ ಪರವಾನಿಗೆ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿದಾರರು ಎಲ್‌ಇ-5ರಲ್ಲಿ ತಾತ್ಕಾಲಿಕ ಸುಡುಮದ್ದು ಪರವಾನಿಗೆ ಪಡೆಯಲು ಸಾಕಷ್ಟು ಮುಂಚಿತವಾಗಿ ಎಇ-5 ನಮೂನೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಡೆದುಕೊಳ್ಳಬಹುದು. ತಾಲೂಕು ಮಟ್ಟದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡುವ ಪರವಾನಿಗೆ ನೀಡಲು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾ ಗಿದೆ. ಈ ಸಮಿತಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ನಿರಾಕ್ಷೇಪಣಾ ಪತ್ರವನ್ನು ಪಡೆದು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಪರವಾನಿಗೆಯನ್ನು ನೀಡುವ ಬಗ್ಗೆ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

ಸ್ಫೋಟಕ ಕಾಯಿದೆ ಮತ್ತು ನಿಯಮ 2008ರ ಶೆಡ್ಯೂಲ್-4ರಡಿಯಲ್ಲಿ ಜಿಲ್ಲಾ ವ್ಯಾಪ್ತಿಯ ಈಗಾಗಲೇ ಸಮಿತಿ ನಿಗದಿಪಡಿಸಿರುವ ತೆರೆದ ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ಸಂದರ್ಭ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ, ಅರ್ಜಿಗಳನ್ನು ಜಿಲ್ಲಾಧಿಕಾರಿ ಕಚೇರಿುಂದ ಅಥವಾ ಆನ್‌ಲೈನ್ ಎಲ್‌ಎಸ್‌ಡಿಎ ಪೋರ್ಟಲ್‌ನಲ್ಲಿ ಪಡೆದು ಅಕ್ಟೋಬರ್ 10ರ ಒಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ 300 ರೂ. ಪರಿಶೀಲನಾ ಶುಲ್ಕವನ್ನು ಹಾಗೂ ಪರವಾನಿಗೆ ಮಂಜೂರು ಮಾಡುವ ಸಂದರ್ಭದಲ್ಲಿ 600 ರೂ. ಪರವಾನಿಗೆ ಶುಲ್ಕವನ್ನು ಪಾವತಿಸಬೇಕು.

ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಎಇ-5ರಲ್ಲಿ ಸಲ್ಲಿಸಬೇಕಾಗಿದ್ದು, ಅರ್ಜಿಯೊಂದಿಗೆ ತಾತ್ಕಾಲಿಕ ಅಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದ ನೀಲಿ ನಕ್ಷೆ, ಅರ್ಜಿದಾರರ ಭಾವಚಿತ್ರ, ಪ್ರಸ್ತಾಪಿತ ಜಮೀನಿನ ಪಹಣಿ, ಖಾಸಗಿ ಜಮೀನಾಗಿದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರ (100 ರೂ. ಸ್ಟಾಂಪ್ ಪೇಪರ್), ಸರಕಾರ ಜಾಗವಾಗಿದ್ದಲ್ಲಿ ಜಮೀನು ಯಾವ ಇಲಾಖೆ ಸುಪರ್ದಿಯಲ್ಲಿದೆಯೋ ಆ ಇಲಾಖೆಯ ನಿರಾಕ್ಷೇಪಣಾ ಪತ್ರದೊಂದಿಗೆ ಸಲ್ಲಿಸಬೇಕು.

ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ, ತಹಶೀಲ್ದಾರರ ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಪಡೆದ ನಿರಾಕ್ಷೇಪಣಾ ಪತ್ರಗಳನ್ನು ಎಇ-5 ನಮೂನೆ, ಪ್ರಸ್ತಾವಿತ ಜಮೀನಿನ ನಕ್ಷೆ, ಇತ್ತೀಚಿನ ಪಹಣಿ ಪತ್ರ ದಾಖಲೆಗಳು ಹಾಗೂ ತಾಲೂಕು ಮಟ್ಟದ ಸಮಿತಿಯಿಂದ ಪಡೆದಿರುವ ನಿರಾಕ್ಷೇಪಣಾ ಪತ್ರದೊಂದಿಗೆ ಸಲ್ಲಿಸಬೇಕು.

ಎಲ್‌ಎಸ್‌ಡಿಎ ಪೋರ್ಟಲ್‌ನ ನಮೂನೆಯಲ್ಲಿರುವ ಎಲ್ಲಾ ಕಲಂಗಳನ್ನು ವಿವರದೊಂದಿಗೆ ಭರ್ತಿ ಮಾಡಬೇಕು. ತಾಲೂಕು ಮಟ್ಟದ ಸಮಿತಿಯು ನಿಗದಿಪಡಿಸುವ ಸಾರ್ವಜನಿಕ ವಸತಿ ಹಾಗೂ ಅಂಗಡಿ ಇರುವ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಮಾತ್ರ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಬಹುದಾಗಿದೆ.

ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಬಂದಲ್ಲಿ ದಿ ಎಕ್ಸ್‌ಪ್ಲೋಸಿವ್ ಆಕ್ಟ್ 1884 ಸೆಕ್ಷನ್ 84 ಹಾಗೂ ಎಕ್ಸ್‌ಪ್ಲೋಸಿವ್ ರೂಲ್ಸ್ 2008 ಕಾಯಿದೆ/ನಿಯಮಾವಳಿಗಳಿಗೆ ಒಳಪಟ್ಟು ಜಿಲ್ಲಾಧಿಕಾರಿಗಳ ಕಚೇರಿ ಯಿಂದ ಪರವಾನಿಗೆ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News