ಹೂವಿನ ಬೆಳೆಗಾರರಿಗೆ ಸಹಕಾರದ ಜೊತೆ ಬ್ಯಾಂಕಿಂಗ್ ವ್ಯವಹಾರ: ಫ್ರಾನ್ಸಿಸ್ ಡಿಸೋಜ
ಕಾರ್ಕಳ: ಹೂವಿನ ಬೆಳೆಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
ಕಾರ್ಕಳ: ರಾಜ್ಯದಲ್ಲಿ ಹೊಸ ಕಲ್ಪನೆಯಾಗಿರುವ ಹೂವಿನ ಬೆಳೆಗಾರರ ಸಹಕಾರ ಸಂಘವು ಹೂವಿನ ಬೆಳೆಗಾರರ ಸಂಕಷ್ಟಗಳನ್ನು ಸರಕಾರದ ಗಮನ ಸೆಳೆದು ಸಿಗುವ ಸೌಲಭ್ಯಗಳನ್ನು ಬೆಳೆಗಾರರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದೆ. ಸಹಕಾರ, ಸೇವೆಯ ಮೂಲಕ ಪ್ರಸಿದ್ಧಿ ಪಡೆದು ಉಡುಪಿ ಜಿಲ್ಲಾ ಮಟ್ಟದ ಮಾನ್ಯತೆ ಪಡೆದು ಕಾರ್ಕಳದಲ್ಲಿ ಕೇಂದ್ರ ಕಚೇರಿಯ ಜೊತೆಗೆ ಹಣಕಾಸು ವ್ಯವಹಾರ ನಡೆಸುತ್ತಿದೆ. ಹೆಬ್ರಿಯಲ್ಲೂ ಶಾಖೆಯನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಶಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸಲಾಗಿದೆ, ಮಲ್ಲಿಗೆ ಬೆಳೆಗಾರರ ಅನುಕೂಲಕ್ಕಾಗಿ ಮುಂದೆ ಇನ್ನಷ್ಟು ಹೊಸ ಶಾಖೆಯನ್ನು ತೆರೆಯುವ ಉದ್ದೇಶವನ್ನು ಹೊಂದಿದೆ ಎಂದು ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಇದರ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹೇಳಿದರು.
ಅವರು ಶುಕ್ರವಾರ ಕಾರ್ಕಳದ ಪ್ರಕಾಶ್ ಹೊಟೇಲ್ ಸಭಾಂಗಣದಲ್ಲಿ ನಡೆದ ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹೂವಿನ ಬೆಳೆಗಾರರಿಗೆ ಸಂಘವು ಸಕಾಲದಲ್ಲಿ ಹೂವಿನ ಗಿಡ ನಾಟಿ ಕ್ರಮ, ಆರೈಕೆ, ಕಾಯಿಲೆ, ಗಿಡಗಳ ಮದ್ದು, ವ್ಯಾಪಾರ ವ್ಯವಹಾರದ ಸಮಗ್ರ ಮಾಹಿತಿಯನ್ನು ವಿವಿಧ ಮಾಧ್ಯಮಗಳ ಮೂಲಕ ಕಾಲ ಕಾಲಕ್ಕೆ ನೀಡುತ್ತಿದೆ, ನಮ್ಮ ಸಹಕಾರ ಸಂಘವು ಹೂವಿನ ಬೆಳೆಗಾರರ ಮತ್ತು ಸರಕಾರದ ನಡುವೆ ಕೊಂಡಿಯಾಗಿ ಸರಕಾರದಿಂದ ಕಾಲಕಾಲಕ್ಕೆ ಸಿಗುವ ಸವಲತ್ತುಗಳನ್ನು ಬೆಳೆಗಾರರಿಗೆ ದೊರಕಿಸಿ ಕೊಡಲು ಶ್ರಮಿಸುತ್ತಿದೆ. ಸಂಘವು ಎಲ್ಲಾ ವರ್ಗದ ಜನ ಸಾಮಾನ್ಯರಿಗಾಗಿ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುತ್ತಿದೆ. ತಾವು ಎಲ್ಲರೂ ಸೇರಿ ಸಂಘವನ್ನು ಬೆಳೆಸಿ ಮುನ್ನಡೆಸಬೇಕು ಎಂದು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಮನವಿ ಮಾಡಿದರು.
ಸಂಘವು ಸದಸ್ಯರ ನಡುವೆ ಮಿತವ್ಯಯ, ಪರಸ್ಪರ ಸ್ವಸಹಾಯ ಮತ್ತು ಸಹಕಾರದ ಮನೋಭಾವವನ್ನು ಉತ್ತೇಜಿಸಲು ಹಾಗೂ ನಿಯಮಿತ ಉಳಿತಾಯವನ್ನು ಶಕ್ತಿ ಹೆಸರಿನ ಸ್ವಸಹಾಯ ಸಂಘವನ್ನು ರಚಿಸಿದ್ದು 27 ಸ್ವಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ಸಾಲ ಸೌಲಭ್ಯಗಳನ್ನು ನೀಡಲಾಗಿದೆ. ಇನ್ನಷ್ಟು ಸ್ವಸಹಾಯ ಸಂಘಗಳನ್ನು ತೆರೆಯುವುದು, ಹೆಬ್ರಿಯಲ್ಲಿ ಮಲ್ಲಿಗೆ ಮಾರಾಟ ಮಳಿಗೆ ತೆರೆಯುವ ಉದ್ದೇಶ ಹೊಂದಲಾಗಿದೆ. ಸಂಘದಲ್ಲಿ ಇ ಸ್ಟ್ಯಾಪಿಂಗ್, ಪಾನ್ ಕಾರ್ಡ್, ಮಲ್ಲಿಗೆ ಗಿಡ ಸಹಿತ ವಿವಿಧ ಸೌಲಭ್ಯಗಳು ಕೂಡ ದೊರೆಯುತ್ತಿದೆ ಎಂದು ಫ್ರಾನ್ಸಿಸ್ ಡಿಸೋಜ ತಿಳಿಸಿದರು.
ಹಿರಿಯ ಸಹಕಾರಿ ಧುರೀಣೆ ಫ್ಲೋರಾ ಮೆಂಡೋನ್ಸ ಮಾತನಾಡಿ, ಮಲ್ಲಿಗೆ ಬೆಳೆಗಾರರ ಸಹಿತ ಸರ್ವರೂ ಸೇರಿ ನಮ್ಮ ಸಂಸ್ಥೆಯಲ್ಲಿ ವ್ಯವಹಾರ ನಡೆಸಿ ಸಂಸ್ಥೆಯನ್ನು ಬೆಳೆಸಿ ಮುನ್ನಡೆಸುವಂತೆ ಮನವಿ ಮಾಡಿದರು. ಕಾರ್ಕಳ ಹೆಬ್ರಿ ಶಾಖೆಯ ಪಿಗ್ಮಿ ಸಂಗ್ರಾಹಕರನ್ನು ಗೌರವಿಸಲಾಯಿತು.
ಹೂವಿನ ಬೆಳೆಗಾರರ ಸಹಕಾರಿ ಸಂಘದ ನಿರ್ದೇಶಕರಾದ ಪ್ಲಾವಿಯಾ ಅರಾನ್ಹ, ಬಿ. ಶಶಿಕಾಂತ್ ಭಟ್, ವೆಂಕಟರಮಣ ಶರ್ಮಾ, ಸುಕುಮಾರ್ ಮುನಿಯಾಲ್, ಮಂದಾರ ಆಚಾರ್ಯ ಮಾರಾಳಿ, ರಾಘವೇಂದ್ರ ಪೈ, ಅಮರ್ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಲತಾ ವಾರ್ಷಿಕ ವರದಿ ಮಂಡಿಸಿದರು. ಹೆಬ್ರಿ ಶಾಖೆಯ ರಕ್ಷಿತಾ ಸ್ವಾಗತಿಸಿದರು. ಭಾರತಿ ವಂದಿಸಿದರು. ಪ್ರಕಾಶ್ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದ್ಧಿ ವರ್ಗದವರು ಸಹಕರಿಸಿದರು.