‘ಬಿಲ್ಲವರು ಹೇಗೆ ಅಸ್ಪಶ್ಯರಾದರು ?’ ಕುರಿತು ಸಂವಾದ- ಚರ್ಚೆ
ಉಡುಪಿ, ಸೆ.24: ರಜತ ವರ್ಷದ ಪ್ರಯುಕ್ತ ಯುವವಾಹಿನಿ ಉಡುಪಿ ಘಟಕದ ವತಿಯಿಂದ ಜ್ಞಾನಸಂಗಮ ಸಹಮನದ ಸಮಾಗಮ ಸಂವಾದ ಕಾರ್ಯಕ್ರಮವನ್ನು ಬಲಾಯಿಪಾದೆ ಕಚೇರಿಯ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಇತಿಹಾಸದ ಪುಟಗಳನ್ನು ನೋಡಿದರೆ ಮಂಗಳೂರು, ಉದಯಪುರ (ಉದ್ಯಾವರ) ಮುಂದೆ ಬಾರ್ಕೂರನ್ನು ರಾಜಧಾನಿಯಾಗಿ ಮಾಡಿಕೊಂಡು ಎರಡನೇ ಶತಮಾನದಿಂದ ಆಳುತ್ತಿದ್ದ ಆಳೂಪ ಅರಸರ ಕಾಲದಲ್ಲಿ ಧಾರ್ಮಿಕ (ಪೂಜಾರಿ), ಸಾಂಸ್ಕೃತಿಕ, ಕೃಷಿ, ಸೇನೆ, ಬಿಲ್ವಿದ್ಯೆ, ವೈದ್ಯ ಕ್ಷೇತ್ರಗಳಲ್ಲಿ ಬಿಲ್ಲವರು ಮುಂಚೂಣಿಯಲ್ಲಿದ್ದರು. ಕರಾವಳಿಯತ್ತ ಹೊಯ್ಸಳರ ಪ್ರವೇಶದ ನಂತರ ಮುಂದೆ 18ನೇ ಶತಮಾನದ ಕಾಲಕ್ಕೆ ಬಿಲ್ಲವರು ಹೇಗೆ ಅಸ್ಪಶ್ಯ ರಾಗಿ ಬಿಟ್ಟರು ಎಂಬುದರ ಬಗ್ಗೆ ಚರ್ಚಿಸಲಾಯಿತು.
ಸುಮಾರು 26 ಕವಲುಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಬಿಲ್ಲವರು ತುಳುನಾಡಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತ್ತು ರಾಜ್ಯದಲ್ಲಿ ಶೇ.18ಕ್ಕಿಂತಲೂ ಅಧಿಕ ಇದ್ದಾರೆ. ಆದರೂ ಪ್ರಸ್ತುತ ರಾಜ್ಯ-ಕೇಂದ್ರ ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಸ್ಥಾನಮಾನ, ಪ್ರಾತಿನಿಧ್ಯ ಪಡೆಯುವಲ್ಲಿ ಹಿಂದುಳಿದಿರುವುದು ಹೇಗೆ, ಏಕೆ? ಮುಂದೆ ಏನು ಮಾಡಬಹುದು ಎಂಬ ಕುರಿತು ಸಂವಾದ ನಡೆಯಿತು.
ಈ ಸಂವಾದದಲ್ಲಿ ಉಪನ್ಯಾಸಕರಾದ ಡಾ.ಮಮತಾ ಹರೀಶ್, ರಾಜೇಶ್ ಆನಂದ್, ಸತೀಶ್ ವಡ್ಡರ್ಸೆ, ಸಮನ್ವಯ ಕಾರರಾಗಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಭಾಗವಹಿಸಿದರು. ಈ ಸಂದರ್ಭದಲ್ಲಿ ಬಿಲ್ಲವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಮಾಡಲಾಯಿತು.
ಉದ್ಯಮಿ ರಂಜನ್ ಕೆ., ಮಣಿಪಾಲ ಮಾಹೆಯ ಡಾ.ಸುಶ್ಮಿತಾ ಅಶ್ವತ್ ರಾಜ್ ಮುಖ್ಯ ಅತಿಥಿಗಳಾಗಿದ್ದರು. ಯುವ ವಾಹಿನಿ ರಜತ ಸಂಭ್ರಮ ಸಂಚಾಲಕ ರಘನಾಥ ಮಾಬಿಯಾನ್, ಕಾರ್ಯದರ್ಶಿ ಮಹೇಶ್ ಮಲ್ಪೆ, ಅಮಿತಾಂಜಲಿ ಕಿರಣ್, ಅಡ್ವೆ ರವೀಂದ್ರ ಪೂಜಾರಿ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರವಿರಾಜ್, ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ದಯಾನಂದ ಕರ್ಕೇರಾ ಸ್ವಾಗತಿಸಿದರು. ಶ್ರೀಲಕ್ಷೀ ಬೊಳ್ಜೆ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಕೋಟ್ಯಾನ್ ಬೈಲೂರು ವಂದಿಸಿದರು.