×
Ad

ದಲಿತ ದೌರ್ಜನ್ಯ ಪ್ರಕರಣ ದಾಖಲಾದರೆ ಸ್ಥಳಕ್ಕೆ ಭೇಟಿ: ಎಸ್ಪಿ ಹರಿರಾಂ ಶಂಕರ್

ಉಡುಪಿ ಜಿಲ್ಲಾ ಮಟ್ಟದ ಎಸ್ಸಿಎಸ್ಟಿ ಕುಂದುಕೊರತೆ ಸಭೆ

Update: 2025-09-27 19:17 IST

ಉಡುಪಿ: ಜಿಲ್ಲೆಯಲ್ಲಿ ಇನ್ನು ಮುಂದೆ ದಲಿತ ದೌರ್ಜನ್ಯ ಪ್ರಕರಣ ಗಳು ದಾಖಲಾದಾಗ ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರ ಜೊತೆ ಎಸ್ಪಿ ಅಥವಾ ಹೆಚ್ಚುವರಿ ಎಸ್ಪಿ ಸ್ಥಳಕ್ಕೆ ಭೇಟಿ ನೀಡುವ ಪ್ರಯತ್ನ ಮಾಡಲಾ ಗುವುದು. ಆ ಮೂಲಕ ತಾತ್ಕಾಲಿಕ ಪರಿಹಾರ ನೀಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 42-43 ದಲಿತ ದೌರ್ಜನ್ಯ ಪ್ರಕರಣ ಗಳು ದಾಖಲಾಗಿದ್ದರೆ, ಈ ವರ್ಷ ಸೆಪ್ಟೆಂಬರ್‌ ವರೆಗೆ 48 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ದಲಿತ ದೌರ್ಜನ್ಯ ನಡೆದಾಗ ಮುಕ್ತವಾಗಿ ಕೇಸುಗಳು ದಾಖಲಾಗುತ್ತಿವೆ ಎಂದು ಅವರು ಮಾಹಿತಿ ನೀಡಿದರು.

ಬಿ ರಿಪೋರ್ಟ್ ಬೇಡ: ದಲಿತ ದೌರ್ಜನ್ಯ ಪ್ರಕರಣದಲ್ಲಿ ತನಿಖೆ ನಡೆಸುವ ತನಿಖಾಧಿಕಾರಿಯೇ ತೀರ್ಪು ನೀಡಿ ಬಿ ರಿಪೋರ್ಟ್ ಸಲ್ಲಿಸಬೇಕು. ಕೋರ್ಟಿಗೆ ಜಾರ್ಜ್‌ಶೀಟ್ ಸಲ್ಲಿಕೆ ಮಾಡುವ ಬದಲು ಪ್ರಕರಣವನ್ನೇ ಕೊನೆ ಗೊಳಿಸುವುದು ಸರಿಯಲ್ಲ ಭೀಮಘರ್ಜನೆ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು ತಿಳಿಸಿದರು.

ಈ ಹಿಂದೆ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಜಾರ್ಜ್‌ಶೀಟ್ ಸಲ್ಲಿಸಲು ಅವಕಾಶ ಇತ್ತು. ಆದರೆ ಈಗ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಕೋರ್ಟ್‌ಗೆ ಜಾರ್ಜ್‌ಶೀಟ್ ಸಲ್ಲಿಸಲೇ ಬೇಕು ಎಂದು ದಲಿತ ಮುಖಂಡ ಮೋಹನ್ ಚಂದ್ರ ಕಾಳವಾರ ತಿಳಿಸಿದರು. ದಲಿತ ದೌರ್ಜನ್ಯದ ಬಗ್ಗೆ ಎಫ್‌ಐಆರ್ ದಾಖಲಾದ ಕೂಡಲೇ ಆರೋಪಿ ಗಳನ್ನು ಬಂಧಿಸ ಬೇಕು. ಈಗ ಯಾರಿಗೂ ಈ ಬಗ್ಗೆ ಭಯ ಇಲ್ಲದಂತೆ ಆಗಿದೆ ಎಂದು ದಲಿತ ಮುಖಂಡರು ತಿಳಿಸಿದರು.

ಸತೀಶ್ ಗಂಗೊಳ್ಳಿ ಮಾತನಾಡಿ, ದಲಿತ ದೌರ್ಜನ್ಯ ಪ್ರಕರಣಕ್ಕೆ ದಾಖಲಿಸಿದ ಕಾರಣಕ್ಕೆ ನನ್ನ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಈ ರೀತಿ ಮಾಡಿದರೆ ಮುಂದೆ ನಮಗೆ ದೌರ್ಜನ್ಯ ಆದಾಗ ಕೇಸು ಕೊಡುವುದು ಹೇಗೆ? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈ ಬಗ್ಗೆ ದೂರು ನೀಡಿದರೆ ತಕ್ಷಣ ಎಫ್‌ಐಆರ್ ದಾಖಲಿಸಲಾಗುವುದು ಎಂದರು.

ಅಶ್ವಥಕಟ್ಟೆ ತೆರವಿಗೆ ಆಗ್ರಹ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗುಂಡ್ಮಿಯ ಫುಟ್‌ಪಾತ್‌ನಲ್ಲಿರುವ ಅಶ್ವಥಕಟ್ಟೆಯನ್ನು ತೆರವುಗೊಳಿಸಬೇಕು. ಇದನ್ನೇ ಮುಂದೆ ಇಟ್ಟು ಕೊಂಡು ದೇವಸ್ಥಾನದವರು ಇಲ್ಲಿನ ಜಾಗವನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ನಮ್ಮ ಪಟ್ಟ ಜಾಗದಲ್ಲಿ ಕಂಪೌಂಡು ನಿರ್ಮಾಣ ಕೂಡ ಮಾಡಿದ್ದಾರೆ. ಈ ಮೂಲಕ ದಲಿತರಿಗೆ ತೊಂದರೆ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದಲಿತ ಮುಖಂಡರೊಬ್ಬರು ಸಭೆಯಲ್ಲಿ ಆರೋಪಿಸಿದರು.

ಅಕ್ರಮವಾಗಿ ಕಂಪೌಂಡ್ ನಿರ್ಮಿಸಿದರೆ ದೂರು ಕೊಡಿ ಎಫ್‌ಐಆರ್ ದಾಖಲಿಸುತ್ತೇವೆ. ಅಶ್ವಥಕಟ್ಟೆ ತೆರವುಗೊಳಿ ಸಲು ನಮಗೆ ಅಧಿಕಾರ ಇಲ್ಲ. ಪಂ.ಪಂಚಾಯತ್‌ನವರು ತೆರವುಗೊಳಿಸುವುದಾದರೆ ನಾವು ರಕ್ಷಣೆ ಕೊಡುತ್ತೇವೆ ಎಂದು ಎಸ್ಪಿ ತಿಳಿಸಿದರು.

ಪರಿಶಿಷ್ಟ ಜಾತಿಯ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ಪಡೆದುಕೊಳ್ಳುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸ ಬೇಕು ಎಂದು ರಮೇಶ್ ಕೋಟ್ಯಾನ್ ಆಗ್ರಹಿಸಿದರು. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣಕ್ಕೆ ದಲಿತ ಹೆಸರಿನಲ್ಲಿ 3ಕೋಟಿ ರೂ. ಹಣ ದುರ್ಬಳಕೆ ಮಾಡಲಾಗಿದೆ. ಈ ಬಗ್ಗೆ ಏಳು ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ ಎಂದು ಚಂದ್ರಮಾ ತಲ್ಲೂರು ದೂರಿದರು.

ಪ್ರತಿದೂರಿನಿಂದ ದೌರ್ಜನ್ಯ: ಎಸ್ಸಿಎಸ್ಟಿ ದೌರ್ಜನ್ಯ ಪ್ರಕರಣಗಳು ದಾಖಲಾದಾಗ ಅದಕ್ಕೆ ಪ್ರತಿಯಾಗಿ ದೂರು ನೀಡುವ ವ್ಯವಸ್ಥೆ ನಮ್ಮಲ್ಲಿ ಆರಂಭವಾಗಿದೆ. ಇದರಿಂದ ದಲಿತರು ಮಾಸಿಕವಾಗಿಯೂ ದೌರ್ಜನ್ಯಕ್ಕೆ ಒಳಗಾಗುತ್ತಿ ದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಉದಯ ಕುಮಾರ್ ತಲ್ಲೂರು ಆರೋಪಿಸಿದರು.

ಉಡುಪಿ ಜಿಲ್ಲೆಯು ದಲಿತ ದೌರ್ಜನ್ಯ ಮುಕ್ತ ಆಗಬೇಕು. ಈ ನಿಟ್ಟಿನಲ್ಲಿ ಮೊದಲು ಗ್ರಾಪಂಗಳು ದಲಿತ ದೌರ್ಜನ್ಯ ಗಳಿಂದ ಮುಕ್ತ ಆಗಬೇಕಾಗಿದೆ. ಇದಕ್ಕೆ ಬೀಟ್ ಪೊಲೀಸರು ಎಸ್ಸಿಎಸ್ಟಿಗಳ ಮನೆಗಳಿಗೆ ಭೇಟಿ ನೀಡಬೇಕು. ಠಾಣಾ ಸಭೆಗಳು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಮೋಹನ್ ಚಂದ್ರ ಕಾಳವಾರ ತಿಳಿಸಿದರು.

ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಭೀಮ ಘರ್ಜನೆ ಸಂಘಟನೆ ಹೆಸರಿನಲ್ಲಿ ಹಲವು ಮಂದಿಗೆ ವಂಚನೆ ಎಸಗಿದ್ದಾರೆ. ನಮ್ಮ ಸಂಘಟನೆ ಹೆಸರು ದುರ್ಬಳಕೆ ಮಾಡಿದವರ ವಿರುದ್ಧ ಪ್ರಕರಣ ದಾಖಿಲಸ ಬೇಕು ಎಂದು ಭೀಮ ಘರ್ಜನೆಯ ಚಂದ್ರ ಅಲ್ತಾರು ಆಗ್ರಹಿಸಿದರು.

ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಉಪಸ್ಥಿತರಿದ್ದರು.

ಡಿಸಿಆರ್‌ಇ ಠಾಣೆಗೆ ಶೀಘ್ರ ಅಧಿಕಾರಿ ನೇಮಕ

ಎಸ್‌ಟಿಎಸ್‌ಸಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಪೊಲೀಸ್ ಠಾಣೆ ಈಗಾಗಲೇ ಉಡುಪಿಯ ಅಂಬಲಪಾಡಿಯಲ್ಲಿ ಆರಂಭಿಸಲಾಗಿದ್ದು, ಇದಕ್ಕೆ ಶೀಘ್ರವೇ ಪೊಲೀಸ್ ನಿರೀಕ್ಷಕರನ್ನು ನೇಮಕ ಮಾಡಿ, ಬಾಕಿ ಇರುವ ಪ್ರಕರಣಗಳ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.

ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಪೊಕ್ಸೋ ಪ್ರಕರಣಗಳು ಕಡಿಮೆ ಆಗಿವೆ. ಪೋಕ್ಸೊ ಮತ್ತು ಎಸ್ಸಿಎಸ್ಟಿ ದೌರ್ಜನ್ಯ ಪ್ರಕರಣ ಗಳು ದಾಖಲಾದ ಕೂಡಲೇ ನಾವು ಆರೋಪಿಗಳನ್ನು ಬಂಧನ ಮಾಡುತ್ತಿ ದ್ದೇವೆ. 60 ದಿನಗಳ ಒಳಗೆ ಜಾರ್ಜ್‌ಶೀಟ್ ಸಲ್ಲಿಕೆ ಆಗುತ್ತಿದೆ ಎಂದು ಅವರು ಹೇಳಿದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News