×
Ad

ಮಂಗಳೂರು ದಸರಾ ಮೆರವಣಿಗೆ| ಟ್ಯಾಬ್ಲೋ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳ ಸಭೆ

Update: 2025-09-27 21:58 IST

ಮಂಗಳೂರು, ಸೆ.27: ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆ ಅ.2ರಂದು ನಡೆಯಲಿದ್ದು, ಅದಕ್ಕೆ ಬೇಕಾದ ವ್ಯವಸ್ಥೆಗಳು ಬಹುತೇಕ ಪೂರ್ಣವಾಗಿದೆ. ವರ್ಷಂಪ್ರತಿಯಂತೆ ಮೆರವಣಿಗೆ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ದಸರಾ ಮಹೋತ್ಸವ ಮೆರವಣಿಗೆ ಹಿನ್ನಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಶುಕ್ರವಾರ ನಡೆದ ಟ್ಯಾಬ್ಲೊ ಮುಖ್ಯಸ್ಥರು ಮತ್ತು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಮೆರವಣಿಗೆಯಲ್ಲಿ ದೇಶ-ವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ರಾಜ್ಯದ ವಿವಿಧ ಕಡೆಯಿಂದ ಕಲಾ ತಂಡಗಳು, ವಾದ್ಯ ತಂಡಗಳು, ಭಜನಾ ತಂಡಗಳು ಮತ್ತು 60ಕ್ಕೂ ಅಧಿಕ ಟ್ಯಾಬ್ಲೋಗಳು ಭಾಗವಹಿಸಲಿವೆ. ಸರಕಾರದ ನಿರ್ದೇಶನ ಪಾಲಿಸಿಕೊಂಡು ಮೆರವಣಿಗೆ ಸುಸೂತ್ರವಾಗಿ ನಡೆಸಲು ಸರ್ವರೂ ಸಹಕರಿಸಬೇಕು ಎಂದು ಪದ್ಮರಾಜ್ ಪೂಜಾರಿ ಮನವಿ ಮಾಡಿದರು. ನಗರ ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಆಯುಕ್ತ ರವಿಶಂಕರ್ ಮಾತನಾಡಿದರು.ನಗರ ಕೇಂದ್ರ ಉಪವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಮಾತನಾಡಿ ಮೆರವಣಿಗೆಯಲ್ಲಿ ಭಾಗವಹಿಸುವ ವಾಹನಗಳ ಇನ್ಶೂರೆನ್ಸ್ ಸಹಿತ ಎಲ್ಲ ದಾಖಲೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಬೇಕು ಎಂದರು.

ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಮಾತನಾಡಿ ಮೆರವಣಿಗೆ ವೇಳೆ ಅಗತ್ಯವಿರುವ ಕಡೆ ಸಂಚಾರ ವ್ಯತ್ಯಯ ಮಾಡಲಾಗುವುದು. ಮೆರವಣಿಗೆ ಸಾಗುವ ಹಾದಿಯಲ್ಲಿ ಹಾಗೂ ಸಂಪರ್ಕ ರಸ್ತೆಯ ಕೆಲವೊಂದು ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ. ವಾಹನ ಪಾರ್ಕಿಂಗ್‌ಗೆ 11 ರಸ್ತೆಗಳನ್ನು ಗುರುತಿಸಲಾಗಿದೆ ಎಂದರು.

ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್. ಜೈರಾಜ್ ಸೋಮಸುಂದರಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ಸಂತೋಷ್ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಲೀಲಾಕ್ಷ ಕರ್ಕೇರಾ, ಬಂದರು ಠಾಣೆಯ ಇನ್‌ಸ್ಪೆಕ್ಟರ್ ಅಜ್ಮತ್ ಅಲಿ ಉಪಸ್ಥಿತರಿದ್ದರು.

ರಾಜ್ಯದ ಕಲಾತಂಡಗಳು ಆಗಮನ

ವೈಭವದ ಮಂಗಳೂರು ದಸರಾ ಮೆರವಣಿಗೆಗೆ ಈ ಬಾರಿಯೂ ರಾಜ್ಯದ ಹಲವು ಜಿಲ್ಲೆಗಳಿಂದ ಕಲಾತಂಡಗಳು ಆಗಮಿಸಲಿದೆ. ಡಿಜೆಗೆ ಅವಕಾಶವಿಲ್ಲ, ಮೆರವಣಿಗೆ ತಂಡಗಳು ತೆರೆದ ಜೀಪ್ ಬಳಸುವಂತಿಲ್ಲ. ಸಮಯಕ್ಕೆ ಸರಿ ಯಾಗಿ ನಿಗದಿತ ಸ್ಥಳದಲ್ಲಿ ಟ್ಯಾಬ್ಲೋಗಳು ನಿಂತಿರಬೇಕು. ದೇವಸ್ಥಾನ ನಿಗದಿಪಡಿಸಿದ ಕ್ರಮಸಂಖ್ಯೆಯಲ್ಲಿ ಟ್ಯಾಬ್ಲೋ ಜೋಡಣೆಯಾಗಲಿದೆ ಎಂದು ಕ್ಷೇತ್ರದ ಅಧ್ಯಕ್ಷ ಎಚ್. ಜೈರಾಜ್ ಸೋಮಸುಂದರಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News