ಗಾಂಧಿ ಜೀವನ ಆಧುನಿಕ ಕಾಲಕ್ಕೂ ದಾರಿದೀಪ: ಡಾ.ರಾಜೇಂದ್ರ ಕೆ.
ಉಡುಪಿ, ಅ.3: ಗಾಂಧೀಜಿಯ ಜೀವನವು ಇಂದಿನ ಆಧುನಿಕ ಕಾಲಕ್ಕೂ ಸಂದೇಶವಾಗಿದೆ. ಗಾಂಧೀಜಿಯ ಬಾಲ್ಯ, ವಿದ್ಯಾಭ್ಯಾಸ, ವಕೀಲಿಕೆ, ಸತ್ಯ- ಅಹಿಂಸೆ ಮೊದಲಾದ ನೈತಿಕ ಮೌಲ್ಯಗಳನ್ನು ಸ್ವಯಂ ಅಳವಡಿಸಿಕೊಳ್ಳುವಲ್ಲಿನ ಪ್ರಯತ್ನ, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ, ರಚನಾತ್ಮಕ ಕಾರ್ಯಗಳ ಅಳವಡಿಕೆ ಎಲ್ಲವೂ ದಾರಿ ದೀಪವಾಗಿವೆ ಎಂದು ಅಜ್ಜರಕಾಡು ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ರಾಜೇಂದ್ರ ಕೆ. ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ಗುರುವಾರ ನಡೆದ ಗಾಂಧಿ ಜಯಂತಿ, ಶಾಸ್ತ್ರಿ ಜನ್ಮದಿನಾಚರಣೆ ಹಾಗೂ ಅಂತಾರಾ ಷ್ಟ್ರೀಯ ಅಹಿಂಸಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ.ಎಂ.ವಿಶ್ವನಾಥ್ ಪೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಮಾಲತಿ ದೇವಿ ಎ. ಉಪಸ್ಥಿತರಿದ್ದರು.
ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಯು.ವಿನಿತ್ ರಾವ್ ಸ್ವಾಗತಿಸಿ, ವಂದಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕೃತ ವಿಭಾಗ ಮುಖ್ಯಸ್ಥೆ ಡಾ.ವಸುಮತಿ ಭಟ್ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ರಾಮ್ ಧುನ್ ಕಾರ್ಯಕ್ರಮ ನಡೆಯಿತು.