ಕೋವಿಡ್ ಬಳಿಕ ಮಾನಸಿಕ ಅಸ್ವಸ್ಥತೆ ಪ್ರಮಾಣ ಹೆಚ್ಚಳ: ಡಾ.ಭಂಡಾರಿ
Update: 2025-10-03 19:39 IST
ಉಡುಪಿ, ಅ.3: ಕೋವಿಡ್ ಬಳಿಕ ಮಾನಸಿಕ ಅಸ್ವಸ್ಥತೆಯಿಂದ ಬಳಲುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ. ಸಮಾಜದ ಎಲ್ಲಾ ವಯೋವರ್ಗದ ಜನರಲ್ಲಿ ಹಾಗೂ ಮಹಿಳೆಯರಲ್ಲೂ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ ಎಂದು ಖ್ಯಾತ ಮನೋವೈದ್ಯ ಡಾ. ಪಿ. ವಿ.ಭಂಡಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಶಾಲಾ-ಕಾಲೇಜುಗಳು ಮುಚ್ಚಿದ್ದರಿಂದ ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠವನ್ನು ಮೊಬೈಲ್ ಮೂಲಕ ನೀಡಲು ತೊಡಗಿದ್ದರಿಂದ ಮೊಬೈಲ್ ಗೀಳು ಮಕ್ಕಳಲ್ಲಿ ಮಾನಸಿಕ ಅಸ್ವಸ್ಥತೆ ಹೆಚ್ಚಲು ಕಾರಣವಾಗಿದೆ. ಅದರ ಪರಿಣಾಮ ಮೂರು ವರ್ಷಗಳ ಬಳಿಕವೂ ಕಂಡುಬರುತ್ತಿದೆ ಎಂದು ಡಾ.ಭಂಡಾರಿ ತಿಳಿಸಿದರು.
ಇದೇ ಕಾರಣದಿಂದ ಮಹಿಳೆಯರು ಹಾಗೂ ಹಿರಿಯ ನಾಗರಿಕರಲ್ಲೂ ಮಾನಸಿಕ ರೋಗದ ಲಕ್ಷಣಗಳು ಕಂಡು ಬರುತ್ತಿವೆ. ಇದಕ್ಕೆ ಅನ್ಯ ಕಾರಣಗಳಿದ್ದರೂ, ಕೋವಿಡ್ ಅವಧಿಯಲ್ಲಿ ಮೊಬೈಲ್ ಬಳಕೆ ಎಲ್ಲರಲ್ಲೂ ಹೆಚ್ಚಿರುವುದು ಪ್ರಮುಖ ಕಾರಣ ಎಂದರು.