×
Ad

ಬೈಂದೂರು, ಕುಂದಾಪುರಗಳಿಗೆ ಸರಕಾರಿ ಬಸ್‌ಗಾಗಿ ಧರಣಿ; ಖಾಸಗಿ ಬಸ್ ಮಾಲಕರ ಕೋರ್ಟ್ ತಡೆಯಾಜ್ಞೆ ತೆರವಿಗೆ ಒತ್ತಾಯ

Update: 2025-10-03 19:43 IST

ಉಡುಪಿ, ಅ.3: ಡಿವೈಎಫ್‌ಐ ಪಡುಕೋಣೆ ಘಟಕ, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ, ಕುಂದಾಪುರ ಮತ್ತು ಬೈಂದೂರು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಗಳ ನೇತೃತ್ವದಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಬಸ್ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮ ಮತ್ತು ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಲು ಆಗ್ರಹಿಸಿ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ, ಬೈಂದೂರು ಕುಂದಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಬಸ್ ಇಲ್ಲದ ಮಾರ್ಗಗಳಲ್ಲಿ ಓಡಿಸುವಂತೆ ಹೋರಾಟ ನಡೆದಿದ್ದು, ಕೆಲವು ಮಾರ್ಗಗಳಿಗೆ ಪರವಾನಿಗೆ ನೀಡಿದರೂ ಖಾಸಗಿ ಬಸ್ ಮಾಲಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ ಸಾರಿಗೆ ಪ್ರಾಧಿಕಾರ ಈ ಬಗ್ಗೆ ತೆರವು ಗೊಳಿಸಲು ಯಾವುದೇ ಕ್ರಮವಹಿಸಿಲ್ಲ ಎಂದು ಹೇಳಿದರು.

ನ್ಯೂ ಕಂಪ್ರೆನ್ಸಿವ್ ಏರಿಯಾ ಸ್ಕ್ರೀಮ್ 07.03.201 ರಂತೆ ರಾಜ್ಯ ರಸ್ತೆ ಸಾರಿಗೆಯವರು ರಾಷ್ಟ್ರೀಕೃತ ಯೋಜನೆ ಪರ್ಮಿಟಿಗಾಗಿ ಅರ್ಜಿ ಸಲ್ಲಿಸಿದಾಗ ಸಂಬಂಧಿತ ಪ್ರಾಧಿಕಾರಿಗಳು ಪರವಾನಿಗೆಯನ್ನು ಕಡ್ಡಾಯವಾಗಿ ವಿತರಿಸ ಬೇಕು ಎಂದು ನ್ಯೂ ಕಂಪ್ರೇಸಿವ್ ಏರಿಯಾ ಸ್ಕ್ರೀಮ್‌ನಲ್ಲಿ ದೃಢೀಕರಿಸಲಾಗಿದೆ ಆದುದರಿಂದ ಕುಂದಾಪುರ ಬೈಂದೂರು ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಓಡಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು. ಕಳೆದ ಒಂದು ವರ್ಷದಿಂದ ಅಧಿಕೃತವಾಗಿ ಸಾರಿಗೆ ಪ್ರಾಧಿಕಾರ ಸಭೆ ನಡೆಸಿಲ್ಲ. ಆದುದರಿಂದ ಸಾರಿಗೆ ಪ್ರಾಧಿಕಾರ ನಮ್ಮ ಸಂಘಟನೆ ಜೊತೆ ಜಂಟಿ ಸಭೆ ನಿಗದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ ಓಡಿಸಲು ಕಳೆದ ವರ್ಷದಿಂದ ಗ್ರಾಮೀಣ ಭಾಗಗಳಲ್ಲಿ ಸ್ಥಳೀಯವಾಗಿ ಹೋರಾಟಗಳನ್ನು ನಡೆಸಿದರೂ ಪ್ರಾಧೀಕಾರ ಕಡೆಗಣಿಸಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಖಾಸಗಿ ಬಸ್ ಮಾಲಕರು ಒಂದಾಗಿ ಅಪವಿತ್ರ ಮೈತ್ರಿಯಿಂದ ಸರಕಾರಿ ಬಸ್ ಓಡಿಸದೇ ಮಹಿಳೆ ಯರಿಗೆ, ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆಯಿಂದ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಧರಣಿಯಲ್ಲಿ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ., ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್.ಕಾಂಚನ್, ಕೃಷಿ ಕೂಲಿಕಾರರ ಸಂಘದ ನಾಗರತ್ನ ನಾಡ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ನಾಗರತ್ನ ಆರ್., ಪ್ರಮುಖರಾದ ನಳಿನಿ, ಉಮೇಶ್ ಕುಂದರ್, ನಾಗರತ್ನ ಪಡುವರಿ ಮೊದಲಾದವರು ಉಪಸ್ಥಿತರಿದ್ದರು.

ಅ.15ಕ್ಕೆ ಆರ್‌ಟಿಎ ಸಭೆ: ಧರಣಿ ಅಂತ್ಯ

ಮಧ್ಯಾಹ್ನ ವೇಳೆ ಧರಣಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಪಿ.ನಾಯಕ್, ಕೆಎಸ್‌ಆರ್‌ಟಿಸಿ ಕುಂದಾಪುರ ಡಿಪ್ಪೋ ವ್ಯವಸ್ಥಾಪಕ ಉದಯ ಶೆಟ್ಟಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದರು.

ಬೈಂದೂರು ತಾಲೂಕಿನ ಕೊಲ್ಲೂರು, ಬೈಂದೂರು, ಗೋಳಿಹೊಳೆ, ನಾಡ, ಹಡವು, ಬಡಾಕೆರೆ, ಶಿರೂರು, ಕುಂದಾಪುರ ತಾಲೂಕಿನ ತ್ರಾಸಿ, ಆಲೂರು, ಹಕ್ಲಾಡಿ, ಗುಲ್ವಾಡಿ ಗ್ರಾಮಗಳಿಗೆ ಸರಕಾರಿ ಬಸ್ ಆರಂಭಿಸುವಂತೆ ಧರಣಿ ನಿರತರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ಈ ಸಂಬಂಧ ಅ.15ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಕರೆಯ ಲಾಗಿದ್ದು, ಇದರಲ್ಲಿ ತಮಗೂ ಭಾಗವಹಿಸಲು ಅವಕಾಶ ನೀಡುವು ದಾಗಿ ಭರವಸೆ ನೀಡಿದರು. ಆ ಹಿನ್ನೆಲೆಯಲ್ಲಿ ಅನಿಧಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಕೈಬಿಡಲಾಯಿತು.

"ಬಸ್ ಇಲ್ಲದೆ 5 ಹೋಗಲು 5 ಬರಲು ಒಟ್ಟು 10 ಕಿ.ಮೀ. ನಡೆಯ ಬೇಕಾಗಿದೆ. ಸಂಜೆ ಮನೆಗೆ ಬರಬೇಕಾದರೆ ಹಾಡಿಯಲ್ಲಿ ಸಾಗಿ ಬರಬೇಕು. ಆಗ ನಮಗೆ ತುಂಬಾ ಭಯವಾಗುತ್ತದೆ. ಬಸ್ ಸಮಸ್ಯೆಯಿಂದ ಕಾಲೇಜಿಗೂ ತಡ ವಾಗಿ ಹೋಗುವಂತಾಗಿದೆ. ಒಂದು ವರ್ಷ ಸರಕಾರಿ ಬಸ್ ಬಂತು. ಬಳಿಕ ಖಾಸಗಿಯವರು ತಡೆಯಾಜ್ಞೆ ತಂದರು. ಈಗ ನಮಗೆ ಖಾಸಗಿಯೂ ಇಲ್ಲ ಸರಕಾರಿ ಬಸ್ ಕೂಡ ಇಲ್ಲ"

-ಪರೀಕ್ಷಿತಾ ಬಡಾಕೆರೆ, ವಿದ್ಯಾರ್ಥಿನಿ

"ಬಸ್ ಇಲ್ಲದೆ ರಿಕ್ಷಾಕ್ಕೆ ಹಣ ಕೊಟ್ಟು ಕಾಲೇಜಿಗೆ ಹೋಗಬೇಕು. ಬೆಳಗ್ಗೆ ಮತ್ತು ಸಂಜೆ ಮಾತ್ರ ಬಸ್ ಓಡಾಡುತ್ತದೆ. ಮಧ್ಯೆ ಯಾವುದೇ ಬಸ್ ಇಲ್ಲ. ನಮ್ಮಲ್ಲಿಂದ ಮಣಿಪಾಲಕ್ಕೂ ಹೋಗುವ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲ ಬಸ್ ಇಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ"

-ದಿಕ್ಷೀತಾ ಪಡುಕೋಣೆ, ವಿದ್ಯಾರ್ಥಿನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News