ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ: ಬಿ.ಎಲ್.ಸಂತೋಷ್
ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ
ಉಡುಪಿ, ಅ.3: ಇಂದು ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆಯುತ್ತಿದೆ. ಮೂರು ವರ್ಷಗಳ ಹಿಂದೆ ಉಡುಪಿ ಕೃಷ್ಣಮಠದ ಮೇಲೂ ಆಕ್ರಮಣ ನಡೆದಿತ್ತು. ಸ್ವಲ್ಪ ದಿನದಲ್ಲಿ ಮೂಡುಬಿದರೆ ಮೇಲೂ ಆಕ್ರಮಣ ನಡೆಯು ತ್ತದೆ. ಇದೇ ರೀತಿ ಬೇರೆ ದೇವಸ್ಥಾನಗಳ ಮೇಲೂ ಆಕ್ರಮಣ ನಡೆಯುತ್ತದೆ. ಯಾಕೆಂದರೆ ಹುಲಿಗೆ ರಕ್ತದ ರುಚಿ ಸಿಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.
ಉಡುಪಿಯ ಗುಂಡಿಬೈಲಿನಲ್ಲಿ ಶುಕ್ರವಾರ ನಡೆದ ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ಕಾರ್ಯಕರ್ತರ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತಿದ್ದರು. ತಪ್ಪು ಮಾಡಿದವ ರಿಗೆ ಶಿಕ್ಷೆಯಾಗಬೇಕು. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. 15-16ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ಸರಕಾರಗಳು ಆಡಳಿತ ಮಾಡಿವೆ. ಕೇವಲ ಬಿಜೆಪಿ ಮಾತ್ರವಲ್ಲ. ಆದರೂ ಆಕ್ರಮಣ ನಡೆಯುತ್ತಿದೆ ಎಂದರು.
ವೈಚಾರಿಕ ರಾಜಕೀಯ ಶಕ್ತಿಗಳು ಶಬರಿಮಲೆ, ಈಶ ಆಶ್ರಮದಲ್ಲೂ ರಕ್ತದ ರುಚಿ ನೋಡಿದ್ದರು. ಧರ್ಮಸ್ಥಳದಲ್ಲಿ ರಕ್ತದ ರುಚಿ ನೋಡುವ ಕೆಲಸ ಮಾಡುತ್ತಲೇ ಇದ್ದಾರೆ. ಈ ಆಕ್ರಮಣ ಹಾಗೂ ಅಪಪ್ರಚಾರಗಳಿಗೆ ಸರಿಯಾದ ಶಿಕ್ಷೆ ಆಗಬೇಕು ಎಂಬ ಸಂಕಲ್ಪಗಳು ಬಿಜೆಪಿ ಕಚೇರಿಯಿಂದ ಮೂಡಬೇಕು. ಇದು ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ನಡೆದ ಆಕ್ರಮಣ ಅಲ್ಲ. ನಮ್ಮ ಶ್ರದ್ದೆ, ನಂಬಿಕೆ, ವಿಷಯದ ಮೇಲೆ ಮಾಡಿರುವ ಅಕ್ರಮಣ ಎಂದು ಅವರು ಹೇಳಿದರು.
ಹಿಂದುಗಳ ಶ್ರದ್ದೆಯ ವಿಚಾರ ಮತ್ತು ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಗೋವು, ಕುಟುಂಬ ವ್ಯವಸ್ಥೆ, ಮೌಲ್ಯ ಗಳು ತೀರ್ಥಕ್ಷೇತ್ರಗಳನ್ನು ಗುರಿಯಾಗಿರಿಸಿ ವಿವಾದ ಮಾಡಲಾಗುತ್ತಿದೆ. ಕುಂಭಮೇಳದ ಮೇಲೆ ನಿರಂತರ ಅಪಪ್ರಚಾರ ನಡೆಯಿತು. ದೇಶದ ನಂಬಿಕೆ ಬಹಳ ಗಟ್ಟಿಯಾಗಿದೆ. ನಾವು ಸವಾಲನ್ನು ಎದುರಿಸುತ್ತೇವೆ ನಮ್ಮ ಸಮಾಜ ಸಶಕ್ತವಾಗಿದೆ. ದೇಶ ಮತ್ತು ಸಂಸ್ಕೃತಿಗೆ ಹಾಕಿರುವ ಸವಾಲಿಗೆ ಮುಟ್ಟಿ ನೋಡುವಂತೆ ಉತ್ತರ ಕೊಡುತ್ತೇವೆ ಎಂದು ಅವರು ತಿಳಿಸಿದರು.
ಸಂಘಟನೆ, ಕಾರ್ಯಕರ್ತ, ನಾಯಕರ ಗುಣಗಳಿಗೆ ಉಡುಪಿ ಜಿಲ್ಲೆ ಮಾದರಿಯಾಗಿದೆ. ದ.ಕ. ಜಿಲ್ಲೆ ಅದಕ್ಕೆ ಪ್ರತಿಸ್ಪರ್ಧಿ ಯಾಗಿದೆ. ಉಡುಪಿ ಮತ್ತು ದ.ಕ. ಜಿಲ್ಲೆ ಗೆಲ್ಲುವುದನ್ನು ಬಿಟ್ಟು ಉಳಿದ ಎಲ್ಲರದಲ್ಲೂ ಉತ್ತರ ಕನ್ನಡ ಜಿಲ್ಲೆಯವರಿಗಿಂತ ಹಿಂದೆ ಇದೆ. ಅನೇಕ ವಿಚಾರಗಳನ್ನು ಉತ್ತರ ಕನ್ನಡ ದವರನ್ನು ನೋಡಿ ಕಲಿಯಬೇಕಾಗಿದೆ. ಬಿಜೆಪಿ ಕಾರ್ಯಾಲ ಯವು ಭವಿಷ್ಯದ ಜನರ ಸಮಸ್ಯೆಗಳಿಗೆ ಹಾಗೂ ಸವಾಲುಗಳಿಗೆ ನಿರ್ದಾಕ್ಷಿಣ್ಯವಾಗಿ ಉತ್ತರ ಕೊಡಬೇಕಾಗಿರುವ ಕೇಂದ್ರಗಳಾಗಬೇಕು. ಸರಕಾರಿ ಕಚೇರಿಯಲ್ಲಿ ಪರಿಹಾರ ಆಗದ ಸಮಸ್ಯೆಗೆ ಜಿಲ್ಲಾ ಕಚೇರಿಯಲ್ಲಿ ಸಿಗಬೇಕು ಎಂದರು.
ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್ ಕುಮಾರ್, ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಉಡುಪಿ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಮಟ್ಟಾರು ರತ್ನಾಕರ್ ಹೆಗ್ಡೆ, ಕುಯಿಲಾಡಿ ಸುರೇಶ್ ನಾಯಕ್, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಹಿರಿಯರಾದ ಗುಜ್ಜಾಡಿ ಪ್ರಭಾಕರ ನಾಯಕ್, ಬೋಳ ಪ್ರಭಾಕರ ಕಾಮತ್, ಕೆ.ಟಿ.ಪೂಜಾರಿ, ಶೀಲಾ ಕೆ.ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ಪ್ರಸಾದ್ ಕುತ್ಯಾರ್ ಕಾರ್ಯಕ್ರಮ ನಿರೂಪಿಸಿದರು.