×
Ad

ಉಡುಪಿ ನಗರಸಭೆ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೆಂಕಿ ಅನಾಹುತ: ಕೋಟ್ಯಂತರ ರೂ. ನಷ್ಟ

Update: 2025-10-04 22:30 IST

ಉಡುಪಿ, ಅ.4: ಉಡುಪಿ ನಗರಸಭೆಗೆ ಸಂಬಂಧಿಸಿದ ಅಲೆವೂರು ಗ್ರಾಪಂ ವ್ಯಾಪ್ತಿಯ ಕರ್ವಾಲುವಿನಲ್ಲಿರುವ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಇದರಿಂದ ಕೋಟ್ಯಂತರ ರೂ. ಮೌಲ್ಯದ ಸೊತ್ತುಗಳು ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಇಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಘಟಕದಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಘಟಕವನ್ನು ಆವರಿಸಿತು. ಇದರಿಂದ ಕಟ್ಟಡ, ಶೆಡ್‌ನಲ್ಲಿರುವ ಹಲವು ಯಂತ್ರೋಪಕಣಗಳು, ತ್ಯಾಜ್ಯಗಳು, 300 ಲೀಟರ್ ಹೈಡ್ರೋಲಿಕ್ ಆಯಿಲ್ ಸೇರಿದಂತೆ ಹಲವು ಸೊತ್ತುಗಳು ಸಂಪೂರ್ಣ ಸುಟ್ಟು ಹೋಗಿರುವುದಾಗಿ ತಿಳಿದುಬಂದಿದೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಜಿಲ್ಲಾ ಅಧಿಕಾರಿ ವಿನಾಯಕ ಕಲ್ಗುಟಕರ್ ನೇತೃತ್ವದಲ್ಲಿ ಉಡುಪಿ ಮತ್ತು ಮಲ್ಪೆಯ ವಾಹನಗಳು ಹಾಗೂ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಇದರೊಂದಿಗೆ ಉಡುಪಿ ನಗರ ಸಭೆಯ ನೀರಿನ ಟ್ಯಾಂಕರ್, ಎರಡು ಜೆಸಿಬಿಗಳನ್ನು ಬಳಸಿಕೊಳ್ಳಲಾಯಿತು.

ಕಾರ್ಯಾಚರಣೆ ಬೆಳಗ್ಗೆ 5.30ರ ಸುಮಾರಿಗೆ ಆರಂಭಗೊಂಡಿದ್ದು, ಬೆಳಗ್ಗೆ 10.30ರ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಮಧ್ಯಾಹ್ನ 2.30ರ ಸುಮಾರಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು. ಸ್ಥಳದಲ್ಲಿ ಪೌರಾಯುಕ್ತ ಮಹಾಂತೇಶ್ ಹಂಗರಗಿ ಹಾಜರಿದ್ದರು. ಈ ಬೆಂಕಿ ಅವಘಡದಿಂದ ಕಟ್ಟಡ ಸೇರಿದಂತೆ ಒಟ್ಟು 1.2ಕೋಟಿ ರೂ. ಮೊತ್ತದ ಸೊತ್ತುಗಳು ಹಾನಿಯಾಗಿವೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಅವಘಡಕ್ಕೆ ನಿಖರವಾದ ಕಾರಣ ಕಂಡುಬಂದಿಲ್ಲ. ಈ ಬಗ್ಗೆ ತನಿಖೆಯಿಂದ ಗೊತ್ತಾಗಬೇಕಾಗಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಜಿಲ್ಲಾ ಅಧಿಕಾರಿ ವಿನಾಯಕ ಕಲ್ಗುಟಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News