ಜನರ ವಿಶ್ವಾಸ ಗಳಿಸಲು ಗಾಂಧಿ ದಾರಿ ಬಗ್ಗೆ ಚರ್ಚೆ ಅಗತ್ಯ: ಉದಯ ಗಾಂವಕಾರ
ಉಡುಪಿ, ಅ.5: ಸ್ವಾತಂತ್ರ್ಯಪೂರ್ವಕ್ಕಿಂತಲೂ ಭೀಕರವಾದ ಕಾನೂನುಗಳು ಈಗ ದೇಶದಲ್ಲಿ ಇದೆ. ಆದರೂ ಇಂದಿನ ಹೋರಾಟವನ್ನು ಜನಪರ ಎಂದು ಅರ್ಥ ಮಾಡಿಸಿಕೊಳ್ಳುವುದೇ ದೊಡ್ಡ ಸವಾಲು ಆಗಿದೆ. ಇಂದಿನ ಜನಪರ ಹೋರಾಟವನ್ನು ಹೇಗೆ ಸಂಘಟಿಸಬೇಕು ಮತ್ತು ಗಾಂಧಿ ಹಾಕಿಕೊಟ್ಟ ದಾರಿಯಲ್ಲಿ ಜನರ ಭರವಸೆಯನ್ನು ಹೇಗೆ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯ ಇದೆ ಎಂದು ಕುಂದಾಪುರದ ಚಿಂತಕ ಉದಯ ಗಾಂವಕಾರ ಹೇಳಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ಧ್ವನ್ಯಲೋಕದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಗಾಂಧಿ ಇಂದಿಗೆ ನಾಳೆಗೆ ಕುರಿತು ಮಾತನಾಡುತಿದ್ದರು.
ಜನಬೆಂಬಲ ಇಲ್ಲದಿದ್ದರೆ ಗಾಂಧಿಗೆ ಅಂದು ಹೋರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರ ರಾಜಕೀಯ ಆಟದಿಂದ ದೊಡ್ಡ ಪ್ರಮಾಣದ ಜನ ಬೆಂಬಲ ಪಡೆಯಲು ಸಾಧ್ಯವಾಯಿತು. ಆ ರಾಜಕೀಯ ಆಟದಲ್ಲಿ ಅವರನ್ನು ರಾಜಕಾರಣಯಾಗಿಯೇ ನೋಡಬೇಕೆ ಹೊರತು ಸಂತನಾಗಿ ಅಲ್ಲ ಎಂದು ಅವರು ತಿಳಿಸಿದರು.
ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿದರು.