×
Ad

ಪ್ರೊ.ಬಿ.ಎ.ವಿವೇಕ ರೈಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ

Update: 2025-10-06 19:48 IST

ಉಡುಪಿ, ಅ.6: ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಖ್ಯಾತ ಲೇಖಕ ಹಾಗೂ ವಿಶ್ರಾಂತ ಕುಲಪತಿಗಳಾದ ಪ್ರೊ.ಬಿ.ಎ.ವಿವೇಕ ರೈ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟಿನ ಮೊದಲ ಡಾ.ಶಿವರಾಮ ಕಾರಂತ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಕನ್ನಡ ಸಾಹಿತ್ಯ ಮತ್ತು ವಿಮರ್ಶೆ, ಜಾನಪದ ಸಂಶೋಧನೆ ಡಾ. ಶಿವರಾಮ ಕಾರಂತರ ಬದುಕಿನ ದಾಖಲಾತಿ ಇತ್ಯಾದಿ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಾರಂತ ಪೀಠವನ್ನು ಸ್ಥಾಪಿಸಿ ಅದರ ಮೂಲಕ ಕಾರಂತರ ಬದುಕು-ಬರಹಗಳ ಹಲವು ಆಯಾಮಗಳನ್ನು ದಾಖಲಿಸುವ ಪ್ರೊ.ಬಿ.ಎ.ವಿವೇಕ ರೈ ಅವರ ಕಾರ್ಯವನ್ನು ಆಯ್ಕೆ ಸಮಿತಿ ಪ್ರಶಂಸಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ, ಹಿರಿಯ ಸಂಶೋಧಕಿ ಡಾ.ರೇಖಾ ಬನ್ನಾಡಿ, ರಂಗತಜ್ಞ ವೆಂಕಟರಮಣ ಐತಾಳ, ಟ್ರಸ್ಟಿನ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ ಗಳನ್ನೊಳಗೊಂಡ ತಜ್ಞರ ಆಯ್ಕೆ ಸಮಿತಿ ಪ್ರಶಸ್ತಿಯ ಆಯ್ಕೆ ನಡೆಸಿದೆ.

ಅಕ್ಟೋಬರ್ 11ರಂದು ಸಂಜೆ 4 ಗಂಟೆಗೆ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಕಲಾಮಂಟಪದಲ್ಲಿ ನಡೆಯುವ ಕಾರಂತರ ಜನ್ಮದಿನೋತ್ಸವ- ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಪ್ರಶಸ್ತಿಯು ಇಪ್ಪತೈದು ಸಾವಿರ ರೂ,. ಮೊತ್ತ, ಪ್ರಶಸ್ತಿ ಫಲಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News