ರಾಷ್ಟ್ರೀಯ ಕರಾಟೆ ತಂಡಕ್ಕೆ ಉಡುಪಿ ಛಾಯಾ ಆಯ್ಕೆ
ಉಡುಪಿ, ಅ.17: ಭಾರತೀಯ ಕ್ರೀಡಾ ಪ್ರಾಧಿಕಾರ ಅ.12ರಿಂದ 14ರವರೆಗೆ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕರಾಟೆ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲೆಯ ಕರಾಟೆ ತರಬೇತುದಾರೆ ಪ್ರವೀಣ ಸುವರ್ಣ ನೇತೃತ್ವದ ಪಿಕೆಸಿ ಕರಾಟೆ ಸಂಸ್ಥೆಯ ವಿದ್ಯಾರ್ಥಿನಿ ಛಾಯಾ ಆಯ್ಕೆಯಾಗಿದ್ದಾರೆ.
ಸುನಿತಾ ಮತ್ತು ಸದಾನಂದ ಪೂಜಾರಿ ದಂಪತಿ ಪುತ್ರಿ ಮತ್ತು ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಛಾಯಾ -68 ಕೆಜಿ ತೂಕದ ಕುಮಿತಿ ವಿಭಾಗದಲ್ಲಿ ಭಾಗವಹಿಸಿ ಟಾಪ್ ನಾಲ್ಕು ಕ್ರೀಡಾಪಟುಗಳಲ್ಲಿ ಆಯ್ಕೆ ಯಾಗುವ ಮುಖಾಂತರ ಭಾರತ ಸರಕಾರದ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದರು.
ಆಯ್ಕೆಯಾದ ಕ್ರೀಡಾಪಟುಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಶಾಖೆಯಲ್ಲಿ ಎಲ್ಲಾ ಸೌಲಭ್ಯ ಗಳನ್ನು ನೀಡಿ ಸರಕಾರ ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕರಾಟೆ ತಂಡವನ್ನು ಪ್ರತಿನಿಧಿಸಲು ಸಿದ್ಧತೆ ಮಾಡುತ್ತಿದ್ದು ಈ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಉಡುಪಿ ಜಿಲ್ಲೆಯ ಮೊದಲ ಕ್ರೀಡಾಪಟು ಇವರಾಗಿದ್ದಾರೆ.