ಧರ್ಮಸ್ಥಳ ಪ್ರಕರಣ ಅಸ್ಥಿಪಂಜರಕ್ಕೆ ಸೀಮಿತಗೊಳಿಸದೆ ದೌರ್ಜನ್ಯದ ದೃಷ್ಠಿಯಲ್ಲಿ ನೋಡಬೇಕಾಗಿದೆ: ನವೀನ್ ಸೂರಿಂಜೆ
ಉಡುಪಿ, ಅ.17: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಚಿನ್ನಯ್ಯ ತನ್ನ ದೂರನ್ನು ಯಾಕೆ ವಾಪಾಸ್ಸು ಪಡೆದುಕೊಂಡರು ಮತ್ತು ಅದರಿಂದ ಯಾಕೆ ಹಿಂದಕ್ಕೆ ಸರಿದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಅದರ ಹಿಂದಿನ ಕೈಗಳು ಬಯಲು ಆಗುತ್ತದೆ. ಈ ಇಡೀ ಪ್ರಕರಣವನ್ನು ಬುರುಡೆ, ಅಸ್ಥಿಪಂಜರಕ್ಕೆ ಮಾತ್ರ ಸ್ಥೀಮಿತ ಗೊಳಿಸದೆ ಭೂಮಿ, ಮೈಕ್ರೋ ಫೈನಾನ್ಸ್ ದೌರ್ಜನ್ಯ, ಜಮೀನ್ದಾರಿ ಅದೃಷ್ಟ ಸರಕಾರದ ದೌರ್ಜನ್ಯದ ಹಿನ್ನೆಲೆಯಲ್ಲಿ ನೋಡಬೇಕಾಗಿದೆ ಎಂದು ಪತ್ರಕರ್ತ ನವೀನ್ ಸೂರಿಂಜೆ ಹೇಳಿದ್ದಾರೆ.
ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ಸೌಜನ್ಯ ನ್ಯಾಯ ಸಪ್ತಾಹದ ಪ್ರಯುಕ್ತ ಶುಕ್ರವಾರ ಅಜ್ಜರಕಾಡು ವಿಮಾ ನೌಕರರ ಸಭಾಭವನದಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮಾರು 300-400 ಪ್ರಕರಣಗಳು ಅಸಹಜ ಸಾವು ಎಂಬುದಾಗಿ ದಾಖಲಾ ಗಿವೆ. ಅದರ ಬಗ್ಗೆ ತನಿಖೆ ಮಾಡ ಬೇಕು. ಅವರು ಯಾಕೆ ಸತ್ತರು, ಅವರ ಸಾವಿನ ವೈದ್ಯಕೀಯ ಕಾರಣ, ಮೃತದೇಹವನ್ನು ಸುಡಲು ಯಾರು ಹೇಳಿದರು, ಸುಡುವಾಗ ಕಾನೂನು ಪಾಲನೆ ಮಾಡಿದ್ದಾರೆಯೇ? ಮಾಡದಿದ್ದರೆ ಯಾರ ರಕ್ಷಣೆಗೊಸ್ಕರ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಎಸ್‌ಐಟಿಯನ್ನು ಕಳೆದ 20ವರ್ಷಗಳಿಂದ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ ಠಾಣೆಯಲ್ಲಿ ದಾಖಲಾಗಿರುವ ಅಸಹಜ ಸಾವಿನ ತನಿಖಕೆಗಾಗಿ ರಚನೆ ಮಾಡಿರುವುದೇ ಹೊರತು ಚಿನ್ನಯ್ಯನ ಬುರುಡೆ, ಅಸ್ಥಿಪಂಜರ ಹುಡುಕಾಟಕ್ಕೆ ಅಲ್ಲ. ಅದನ್ನು ಎಸ್‌ಐಟಿ ಪಾಲಿಸಬೇಕು. 2005ರಿಂದ 2025ರವರೆಗೆ ದಾಖಲಾಗಿರುವ ಎಲ್ಲ ಅಸಹಜ ಸಾವಿನ ತನಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಹೋರಾಟಗಾರರು, ದೂರುದಾರರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ ಆರೋಪಿಗಳಿಗೆ ಎಸ್‌ಐಟಿ ಈವರೆಗೆ ನೋಟೀಸ್ ಕೂಡ ನೀಡಿಲ್ಲ ಮತ್ತು ವಿಚಾರಣೆಯನ್ನೂ ಮಾಡಿಲ್ಲ. ಆದರೆ ಹೋರಾಟಗಾರರಿಗೆ ಭಾಷಣ ಮಾಡಿದ ವರಿಗೆ ರಾತ್ರೋರಾತ್ರಿ ನೋಟೀಸ್ ನೀಡಿ ವಿಚಾರಣೆಗೆ ಒಳಪಡಿಸಿ ದ್ದಾರೆ. ಇಡೀ ಸರಕಾರ ಮತ್ತು ವಿರೋಧ ಪಕ್ಷದವರು ಧರ್ಮಸ್ಥಳದವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಮಾತನಾಡಿ, ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ಸಾಯದ ಜನ ಧರ್ಮಸ್ಥಳದಲ್ಲಿ ಮಾತ್ರ ಯಾಕೆ ಸಾಯುತ್ತಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ನಾವು ದೇವರು, ದೈವದ ವಿರೋಧಿಗಳಲ್ಲ, ಅದರ ಹೆಸರಿನಲ್ಲಿ ದಲಿತರು, ಮಹಿಳೆಯರು, ಆದಿವಾಸಿಗಳು, ಕಾರ್ಮಿಕರು, ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸುತ್ತೇವೆ ಎಂದರು.
ಇಂದು ಧರ್ಮಸ್ಥಳದ ಭಕ್ತರ ಭಕ್ತಿ ಘಾಸಿಯಾಗಿದೆ. ಅವರಿಗೆ ನ್ಯಾಯ ಸಿಗಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರಗತಿಪರರು ಚಳವಳಿಯನ್ನು ರೂಪಿಸಬೇಕು. ಬದ್ಧತೆ ಹಾಗೂ ಪ್ರಾಮಾಣಿಕತೆಯ ಹೋರಾಟವನ್ನು ಕಟ್ಟಬೇಕು. ಆ ಮೂಲಕ ಮುಂದೊಂದು ದಿನ ಜಯ ಸಿಗಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸೌಹಾರ್ದ ಕರ್ನಾಟಕ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಉಪಸ್ಥಿತರಿದ್ದರು.