ಗಾಂಧಿ ಈ ಕಾಲಕ್ಕೆ ಪ್ರಸ್ತುತವಾಗುವ ಸಂದರ್ಭ ಸೃಷ್ಟಿಸಿ: ಡಾ.ಸುಧಾಕರ್
ಕನ್ನಡ ಕಂಡ ಮನಸು- ಗಾಂಧಿ- ವಿಶೇಷ ಉಪನ್ಯಾಸ ಕಾರ್ಯಕ್ರಮ
ಕಾರ್ಕಳ, ಅ.18: ಗಾಂಧಿ ಈ ಕಾಲಕ್ಕೆ ಪ್ರಸ್ತುತವಾಗುವ ಸಂದರ್ಭವನ್ನು ನಾವು ಸೃಷ್ಟಿಸಿಕೊಳ್ಳಬೇಕು. ಅವರನ್ನು ಕಸಿಗೊಳಿಸುವ ಪ್ರಯತ್ನವನ್ನು ಮಾಡಬೇಕು. ಹರಿಯುವ ನದಿಯಂತೆ ಗಾಂಧಿಯ ವ್ಯಕ್ತಿತ್ವ, ಬದುಕನ್ನು ಇಡಿಯಾಗಿ ನೋಡಿದರೆ ಮಾತ್ರ ಗಾಂಧಿ ಸರಿಯಾಗಿ ಅರ್ಥವಾಗಲು ಸಾಧ್ಯ ಎಂದು ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಸುಧಾಕರ ದೇವಾಡಿಗ ಹೇಳಿದ್ದಾರೆ.
ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ-ಸಾಹಿತ್ಯ ವಿಚಾರ ವೇದಿಕೆ ಉಡುಪಿ ಮತ್ತು ಕಾರ್ಕಳದ ಶ್ರೀಭುವನೇಂದ್ರ ಕಾಲೇಜಿನ ಸಾಹಿತ್ಯ ಸಂಘದ ಸಹಯೋಗದೊಂದಿಗೆ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ‘ಕನ್ನಡ ಕಂಡ ಮನಸು- ಗಾಂಧಿ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ರೈತ ಸಮುದಾಯದ ಪರವಾದ ಹೋರಾಟದಿಂದ ಪ್ರಾರಂಭಗೊಂಡು, ಕರ ನಿರಾಕರಣೆಯ ಚಳುವಳಿ ಮುಂತಾದ ಸಂದರ್ಭಗಳಲ್ಲಿ ಯಾವುದನ್ನೂ ಲೆಕ್ಕಿಸದೆ ಅವರು ಸಾಗಿದರು. ಹೀಗೆ ಗಾಂಧಿ ಇಂತಹ ಚಳುವಳಿಗಳ ನೇತಾರನಾಗಿ ಮೊದಲ್ಗೊಂಡು ಅನೇಕಾನೇಕ ಬದಲಾವಣೆಗಳಿಗೆ ಕಾರಣರಾಗಿ ಅವರ ಅಸ್ತಿತ್ವ ಇನ್ನೂ ಅಚ್ಛಳಿಯದೆ ನಿಂತಿವೆ ಎಂದರು.
ಅಹಿಂಸೆ ಮತ್ತು ಸತ್ಯಾಗ್ರಹವನ್ನು ಒಂದು ವೃತದಂತೆ ಪಾಲಿಸಿದವರು ಗಾಂಧಿ. ಹಿಂಸೆ ಮತ್ತು ಯುದ್ಧಗಳಿಂದ ಮುಕ್ತತೆಯನ್ನು ಪಡೆಯಬೇಕೆಂಬ ಇಚ್ಛೆಗಾಗಿ ಹಂಬಲಿಸಿದವರು. ಅವೆರಡೂ ಇವತ್ತಿಗೂ ಪತ್ರ ಬಲ ಅಸ್ತ್ರಗಳಾಗಿ ನಮ್ಮ ಮುಂದೆ ನಿಂತಿದೆ. ಇದೇ ದಾರಿಯಲ್ಲಿ ನಾವೂ ನಡೆಯಬೇಕು. ಇಲ್ಲದೆ ಹೋದರೆ ನಾವು ಮನುಷ್ಯರಾಗಿ ಉಳಿಯುವುದಿಲ್ಲ. ಮನುಷ್ಯನನ್ನು ಯಂತ್ರಗಳು ದಾಸ್ಯಕ್ಕೆ ಗುರಿಪಡಿಸುತ್ತವೆ. ಅವನ ಜೀವ ಚೈತನ್ಯವನ್ನು ಅವು ಕಸಿಯುವಂತೆ ಮಾಡುತ್ತವೆ ಅನ್ನುವುದಕ್ಕೆ ಗಾಂಧಿ ಯಂತ್ರ ವಿರೋಧಿ ಯಾಗಿದ್ದರೇ ಹೊರತು ಬೇರೇನೂ ಅಲ್ಲ. ಇವತ್ತಿನ ಕಾಲಮಾನಕ್ಕೆ ಅವರ ಚಂತನೆಗಳು ನಿಜಕ್ಕೂ ದಾರ್ಶನಿಕ ಸತ್ಯವಾಗಿದೆ ಎಂದರು.
ಅಕಾಡೆಮಿ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧಿಯ ಮನುಷತ್ವವನ್ನು ಸಮಾಜ ಇಂದಿಗೂ ಇಟ್ಟುಕೊಳ್ಳ ಬೇಕಾದ ಅಗತ್ಯವಿದೆ. ಗಾಂಧಿಯಂತಹ ವ್ಯಕ್ತಿತ್ವದ ಮನುಷ್ಯ ಯಾವ ದೇಶ ದಲ್ಲಿಯೂ ಇರಲಾದರು. ಮಹಾತ್ಮ ಗಾಂಧಿಗೆ ಸತ್ಯವೆಂಬುದು ಸಿಕ್ಕಿರುವ ಸಂಗತಿಯಾಗಿರಲಿಲ್ಲ. ಅದು ಹುಡುಕುವ ಬಗೆಯಾಗಿತ್ತು. ಅವರೊಬ್ಬ ಮಾಂತ್ರಿಕ ಶಕ್ತಿಯ ಸಂಕೇತ. ತಾಯ್ತನದ ಪ್ರತಿನಿಧಿ. ಅವರ ಸ್ವದೇಶಿ ಕಲ್ಪನೆಯನ್ನು ನಾವು ಅರಿತುಕೊಳ್ಳಬೇಕು. ಅನ್ಯರನ್ನು ಅವಲಂಬಿಸದ ಸ್ವಾತಂತ್ರ್ಯವನ್ನು ಚರಕದಿಂದ ಕಂಡುಕೊಡವರು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ಕಾಲೋಚಿತ ಮತ್ತು ಕಾಲಾತೀತ ಚಿಂತನೆಗಳು ಗಾಂಧಿಯವರದ್ದು. ಈ ಕಾಲದವರೆಗೂ ಕೂಡಾ ಗಾಂಧೀಜಿಯವರ ಎಲ್ಲ ಆದರ್ಶಗಳು ಜೀವಂತವಾಗಿವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಿದೆ. ದಾರ್ಶನಿಕರ ಬದುಕಿನ ಕಾಲ ಮತ್ತು ಅವರ ಮರಣದ ಬಳಿಕ ಅವರ ಚಿಂತನೆಗಳು ದ್ವಿಗುಣಗೊಳ್ಳುತ್ತದೆ ಎನ್ನುವುದಕ್ಕೆ ಅವರು ಸ್ಪಷ್ಟ ಉದಾಹರಣೆ ಯಾಗಿದ್ದಾರೆ ಎಂದರು.
ಗಾಂಧಿ ಸತ್ಯ ಮತ್ತು ಅಹಿಂಸೆಯನ್ನು ಬಿಡದೆ ಅದನ್ನೇ ಪಾಲಿಸಿದವರು. ಕೇವಲ ವಸ್ತ್ರ ಸಂಸ್ಕೃತಿಯಿಂದ ಮಾತ್ರವೇ ಗಾಂಧಿ ತತ್ವವನ್ನು ಅರಿಯ ಬೇಕಾಗಿಲ್ಲ. ಒಳ್ಳೆಯ ವಸ್ತ್ರಸಂಹಿತೆಯನ್ನು ಹೊಂದಿದವರೂ ಗಾಂಧಿಯ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುತ್ತಾರೆ. ಮೌಢ್ಯಗಳು ಮತ್ತು ಚಿಂತನಾ ಕ್ರಮಗಳು ನಮ್ಮಲ್ಲಿ ಬದಲಾಗದೆ ಇದ್ದರೆ ಸಮಾಜ ಮುಂದು ವರಿಯುಲು ಅಸಾಧ್ಯ. ಎಲ್ಲ ದಾರ್ಶನಿಕರ ದಾರಿಗಳು, ಆದ್ಯತೆಗಳು ಬೇರೆ ಇದ್ದರೂ ಅವರೆಲ್ಲರ ಆಶಯ ಮತ್ತು ಗುರಿ ಸಮಾಜಮುಖಿಯಾಗಿತ್ತು ಅನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.
ಶ್ರೀಭುವನೇಂದ್ರ ರೆಸಿಡೆನ್ಷಿಯಲ್ ಸ್ಕೂಲ್‌ನ ಸಂಚಾಲಕ ವೆಂಕಟೇಶ ಪ್ರಭು, ಗಾಂಧಿಯ ಅಸ್ತಿತ್ವದ ಸಂಕೇತವಾದ ಚರಕವನ್ನು ಸುತ್ತಿ ನೂಲನ್ನು ತೆಗೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಿದರು. ವೇದಿಕೆಯಲ್ಲಿ ಭುವನೇಂದ್ರ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಎರ್ಮಾಳ್ ಮೋಹನ ಶೆಣೈ, ಸಾಹಿತ್ಯ ಸಂಘದ ಪ್ರತಿನಿಧಿ ಗಳಾದ ಹಿತ ಹಾಗೂ ಶ್ರೀನಿಧಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕಿ ಹಾಗೂ ವಿಭಾಗ ಮುಖ್ಯಸ್ಥೆ ಪ್ರೊ.ವನಿತಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ವಿಖ್ಯಾತ್ ಕುಲಾಲ್ ಗಾಂಧಿ ಪ್ರಿಯ ಮಂತ್ರ ಪಠಿಸಿದರು. ರಕ್ಷಿತಾ ಮತ್ತು ಬಳಗ ಪ್ರಾರ್ಥಿಸಿದರು. ಚಕೋರ ಉಡುಪಿ ಜಿಲ್ಲಾ ಸಂಚಾಲಕ, ಕನ್ನಡ ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ವಂದಿಸಿದರು.