ಆರೆಸ್ಸೆಸ್ ಚಟುವಟಿಕೆ ನಿಷೇಧ ವಿವಾದ; ಸಾರ್ವಜನಿಕ ಸ್ಥಳಗಳಲ್ಲಿ ಸ್ವೇಚ್ಛಾಚಾರದ ನಡುವಳಿಕೆಗಳಿಗೆ ಕಡಿವಾಣ: ಸಚಿವ ಸುಧಾಕರ್
ಉಡುಪಿ, ಅ.18: ಬೇರೆ ಬೇರೆ ರಾಜ್ಯಗಳಲ್ಲಿ ಆರೆಸ್ಸೆಸ್ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲಾ ಜಾತಿ ಧರ್ಮದ ಜನ ಇರುತ್ತಾರೆ. ಕೆಲವು ಕಾರ್ಯ ಚಟುವಟಿಕೆಗಳಿಗೆ ವಿರೋಧ ಬರುವ ಸಾಧ್ಯತೆ ಇದೆ. ಯಾರೇ ಕೂಡ ಸಾರ್ವಜನಿಕವಾಗಿ ಕಾರ್ಯಕ್ರಮ ಮಾಡುವುದಾದರೆ ಅನುಮತಿ ತೆಗೆದುಕೊಳ್ಳಬೇಕು. ಎಲ್ಲರಲರಲ್ಲೂ ಶಿಸ್ತು ಇರಬೇಕೆಂಬ ಉದ್ದೇಶಕ್ಕೆ ಈ ಆದೇಶ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ,
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರವಾನಿಗೆ ತೆಗೆದುಕೊಂಡು ಯಾವುದೇ ಕಾರ್ಯ ಚಟುವಟಿಕೆ ಮಾಡಲು ಸಮಸ್ಯೆಗಳಿಲ್ಲ. ಸ್ವೇಚ್ಛಾಚಾರದ ನಡುವಳಿಕೆಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ. ಆರೆಸ್ಸೆಸ್‌ಗೆ ಮಾತ್ರ ಅಲ್ಲ, ಇದು ಎಲ್ಲಾ ಸಂಘ ಸಂಸ್ಥೆಗಳಿಗೆ ಅನ್ವಯಿಸು ತ್ತದೆ. ಶಿಸ್ತನ್ನು ತರುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತೇರ್ಗಡೆಗೆ ಕನಿಷ್ಠ ಅಂಕ 33ಕ್ಕೆ ಇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಲಾ ಶಿಕ್ಷಣ ಮಂತ್ರಿಗಳ ಈ ನಿರ್ಧಾರದ ಬಗ್ಗೆ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿಗಳು ಮಾಹಿತಿಗಳನ್ನು ಪಡೆದು ಕೊಂಡಿದ್ದಾರೆ. 35 ಅಂಕ ಇರುವುದನ್ನು 33ಕ್ಕೆ ಇಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಚರ್ಚೆಗಳು ಆಗಬೇಕು ಎಂಬ ಅಭಿಪ್ರಾಯವಿದೆ. ಶಾಲಾ ಶಿಕ್ಷಣ ಮಂತ್ರಿಗಳು ಯಾವ ಉದ್ದೇಶ ಇಟ್ಟುಕೊಂಡು ಇದನ್ನು ಮಾಡಿದ್ದಾರೆ ಎಂಬ ಮಾಹಿತಿ ಇಲ್ಲ. ಈ ರೀತಿ ಅಂಕ ಕಡಿಮೆ ಮಾಡಿರುವುದು ಸರಿಯಲ್ಲ ಅನಿಸುತ್ತದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಈ ಬಗ್ಗೆ ಸರಿಯಾದ ಅಧ್ಯಯನ ಮಾಡಬೇಕು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.
ಇನ್ಫೋಸಿಸ್ ಸಂಸ್ಥೆಯ ಬಗ್ಗೆ ನಮಗೆ ಬಹಳ ಗೌರವವಿದೆ. ರಾಜ್ಯ ದೇಶ ಮತ್ತು ಪ್ರಪಂಚದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ಫೋಸಿಸ್ ಸಾಧನೆ ಮಾಡಿದೆ. ಇದು ಶೈಕ್ಷಣಿಕ ಆರ್ಥಿಕ ಸಾಮಾಜಿಕ ಸಮೀಕ್ಷೆಯಾಗಿದ್ದು, ಎಲ್ಲರೂ ತಮ್ಮ ಜಾತಿ ಧರ್ಮದ ಹೆಸರು ಹೇಳಲೇಬೇಕಾಗುತ್ತದೆ ಎಂದು ಸಚಿವರು ಹೇಳಿದರು.
ಕಾಂಗ್ರೆಸ್ ಸರಕಾರ ಈ ಸಮೀಕ್ಷೆ ಮಾಡುತ್ತಿದೆ ಎಂದು ಅವರ ವಿರೋಧವೇ? ಮುಂದಿನ ವರ್ಷ ಕೇಂದ್ರ ಸರಕಾರ ನೇರವಾಗಿ ಜಾತಿ ಗಣತಿ ಮಾಡುತ್ತದೆ. ಆಗಲು ಇವರು ವಿರೋಧ ವ್ಯಕ್ತಪಡಿಸುತ್ತಾರೆಯೇ? ಬಹಳಷ್ಟು ಜನ ನಿಮ್ಮ ಕಡೆ ನೋಡುತ್ತಿದ್ದಾರೆ. ನಿಮ್ಮ ಸೂಚನೆ, ಅನುಭವಗಳು ಏನು ಅಂತ ಯುವ ಸಮೂಹ ನಿಮ್ಮ ಕಡೆ ನೋಡುತ್ತಿದೆ. ಈ ವಿಚಾರದಲ್ಲಿ ಬಹಳ ಯೋಚನೆ ಮಾಡಿ ಹೇಳಿಕೆ ನೀಡಿದರೆ ಉತ್ತಮ ಎಂದು ಅವರು ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರಲ್ಲಿ ವಿನಂತಿ ಮಾಡಿದರು.