ಹಿರಿಯ ನೇತಾರ ಮಾಣಿ ಗೋಪಾಲರ ‘ನಾನು ಮಾಣಿಗೋಪಾಲ’ ಆತ್ಮಕಥನ ಬಿಡುಗಡೆ
ಕುಂದಾಪುರ: ಮಾಣಿಗೋಪಾಲರು ಶ್ರೀಸಾಮಾನ್ಯರ ಜತೆಯಲ್ಲಿದ್ದುಕೊಂಡು, ಬಡವರ ಪರ, ಮೂರ್ತೆದಾರರ ಪರ ಹೋರಾಟ ಮಾಡಿದವರು. ಆ ಕಾಲದಲ್ಲಿ ಅಂತಹ ಹೋರಾಟ ಮಾಡಲು ಗಟ್ಟಿತನ ಇರಬೇಕು. ಬದುಕಿಗೊಂದು ಸ್ಪಷ್ಟ ನಿಲುವು ಬೇಕಿತ್ತು. ಅದೆರಡು ಅವರಲ್ಲಿತ್ತು. ಇಡೀ ಬದುಕಿನುದ್ದಕ್ಕೂ ಸತ್ಯ, ನ್ಯಾಯ, ಧರ್ಮದ ಪರ ಹೋರಾಡಿ, ರಾಜಕೀಯದಲ್ಲೂ ಶುದ್ಧ ಚಾರಿತ್ರ್ಯವನ್ನು ಉಳಿಸಿಕೊಂಡು, ಶುದ್ಧ ಹಸ್ತದ ರಾಜಕಾರಣಕ್ಕೆ ಹೆಸರಾದ ಕುಂದಾಪುರದ ಸಾಕ್ಷಿ ಪ್ರಜ್ನೆಯಂತಿದ್ದರು ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕ ವತಿಯಿಂದ ಶನಿವಾರ ಕುಂದಾಪುರ ಬೋರ್ಡ್ ಹೈಸ್ಕೂಲ್ ವಠಾರದ ರೋಟರಿ ಕಲಾಮಂದಿರದಲ್ಲಿ ಸಾಮಾಜಿಕ ಹೋರಾಟಗಾರ, ಹಿರಿಯ ನೇತಾರ ಮಾಣಿ ಗೋಪಾಲ್ ಅವರ ಆತ್ಮಕಥನ ‘ನಾನು ಮಾಣಿಗೋಪಾಲ’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಅವರೊಂದಿಗೆ ನಮ್ಮ ಕುಟುಂಬಕ್ಕೆ ದೀರ್ಘಕಾಲದ ಒಡನಾಟವಿದೆ. ಬೇರೆ ಬೇರೆ ಪಕ್ಷದಲ್ಲಿದ್ದರೂ, ಸ್ನೇಹ, ವಿಶ್ವಾಸ ಇಂದಿಗೂ ಹಾಗೆಯೇ ಇದೆ. ಶಾಸಕರಾಗುವ ಯೋಗ್ಯತೆಯಿತ್ತು. ಆದರೆ ಯೋಗ ಮಾತ್ರ ಇರಲಿಲ್ಲ. ಅವರೊಬ್ಬ ಅಜಾತಶತ್ರುವಾಗಿದ್ದರು ಎಂದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಮಾಣಿ ಗೋಪಾಲರು ಧ್ವನಿಯಿಲ್ಲದವರಿಗೆ ಧ್ವನಿಯಾದವರು. ಮೂರ್ತೆದಾರಿಕೆ ನಿಷೇಧ ಆದಾಗ ಸಹಿ ಮಾಡಲು ಸಹ ಬಾರದ ಮೂರ್ತೆದಾರರ ಪರ ಗಟ್ಟಿ ಧ್ವನಿಯಲ್ಲಿ ನಿಂತು ಹೋರಾಡಿದವರು. ಅವರ ಹೋರಾಟದ ಫಲವಾಗಿ ಬಂಗಾರಪ್ಪರು ಮುಖ್ಯಮಂತ್ರಿಯಾಗಿ ನಡೆಸಿದ ಮೊದಲ ಸಂಪುಟ ಸಭೆಯಲ್ಲಿಯೇ ನಿಷೇಧವನ್ನು ವಾಪಾಸು ತೆಗೆದುಕೊಂಡರು ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಣಿಗೋಪಾಲ್ ಹಾಗೂ ಗಿರಿಜಾ ದಂಪತಿಯನ್ನು ಸಮ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಸ್ಥಾಪಕಾಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್, ಕಸಾಪ ತಾಲೂಕು ಅಧ್ಯಕ್ಷ ಡಾ.ಉಮೇಶ್ ಪುತ್ರನ್, ಪುರಸಭೆ ಅಧ್ಯಕ್ಷ ಮೋಹನದಾಸ್ ಶೆಣೈ, ಪುಸ್ತಕ ರಚಿಸಿದ ಕೇಶವ ಸಸಿಹಿತ್ಲು, ಪುತ್ರ ರಂಜನ್ ಮಾಣಿಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.
ಕಸಾಪದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾವಿಸಿದರು. ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ಮನೋಹರ್ ಭಟ್ ವಂದಿಸಿದರು. ಕುಂದಪ್ರಭದ ಯು.ಎಸ್.ಶೆಣೈ ಪುಸ್ತಕ ಪರಿಚಯಿಸಿದರು. ದಿನಕರ ಆರ್. ಶೆಟ್ಟಿ, ಮಂಜುನಾಥ ಕೆ.ಎಸ್., ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.