×
Ad

ಕಲ್ಯಾಣಪುರ ಮಿಲಾಗ್ರಿಸ್ ಕಾಥೆಡ್ರಲ್ ಚರ್ಚಿನಲ್ಲಿ ಸೌಹಾರ್ದ ದೀಪಾವಳಿ ಸಂಭ್ರಮ

Update: 2025-10-25 17:38 IST

ಉಡುಪಿ, ಅ.25: ಕಲ್ಯಾಣಪುರ ಮಿಲಾಗ್ರಿಸ್ ಕಾಥೆಡ್ರಲ್ ಚರ್ಚ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಹಿಂದೂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಶುಭಾಶಯ ಕೋರಿ, ಸಿಹಿ ತಿಂಡಿಗಳನ್ನು ಹಂಚಲಾಯಿತು.

ನೆರೆಯ ಅಂಗಡಿಗಳ ವ್ಯಾಪಾರಿಗಳಿಗೆ, ರಿಕ್ಷಾ ಚಾಲಕರಿಗೆ ಹಾಗೂ ಬಾಡಿಗೆ ವಸತಿಯಲ್ಲಿರುವ ಬಾಂಧವರಿಗೆ ಸಹ ಸಿಹಿಯೊಡನೆ ಹಬ್ಬದ ಶುಭಾಶಯ ಗಳನ್ನು ಕೋರಲಾಯಿತು. ಸಂಧ್ಯಾಕಾಲದ ಬೆಳಕಿನ ಹಾಗೂ ದೀಪಗಳ ಹಬ್ಬವನ್ನು ಚರ್ಚಿನ ಸಭಾಭವನದಲ್ಲಿ ವಿಜೃಂಭಣೆಯಿಂದ ಮತ್ತು ಭಾವ ಪೂರ್ಣವಾಗಿ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕಾಥೆಡ್ರಲ್ ಧರ್ಮಗುರು ಮೊನ್ಸಿಞ್ಜಿರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿ, ನಾವು ನಮಗಾಗಿ ಬೆಳಕಾಗದೆ, ನಮಗಾಗಿ ಜೀವಿಸದೆ, ಪರರಿಗೋಸ್ಕರ ಬೆಳಕಾಗಿ ಉಜ್ವಲವಾಗಿ ಜೀವಿಸಬೇಕು. ಒಗ್ಗೂಡಿ ಬಾಳಬೇಕು ಹಾಗೂ ಸಾಮರಸ್ಯದಿಂದ ಬೆಳೆಯಬೇಕು ಎಂದು ತಿಳಿಸಿದರು.

ಕಾಥೆಡ್ರಲ್ ಸಹಾಯಕ ಗುರು ರೆ.ಫಾ.ಪ್ರದೀಪ್ ಕಾರ್ಡೋಜ ಮಾತನಾಡಿ, ನಾವೆಲ್ಲರು ಅಂತರಂಗ ಹಾಗೂ ಬಹಿರಂಗ ಸಮಾನಾಂತರ ಜೀವನ ನಡೆಸಬೇಕು. ಉರಿಯುವ ದೀಪದಂತೆ, ಬೆಳಗುವ ತೂಗು ದೀಪದಂತೆ, ಪ್ರಜ್ವಲಿಸುವ ಹಣತೆಯಂತೆ ನಮ್ಮ ಜೀವನವೂ ಬೆಳಗಬೇಕು. ಐಕ್ಯತೆಯ ಭಾವದಿಂದ ಜೀವಿಸಬೇಕು ಎಂದು ಹೇಳಿದರು.

ಸ್ಥಳೀಯ ಪಂಚಾಯತ್ ಅಧ್ಯಕ್ಷ ನಾಗರಾಜ್ ಹಾಗೂ ಅಂಗಡಿ ಮಾಲಕರ ಸಂಘದ ಸಂಚಾಲಕ ವಿಜಯ್ ಸುವರ್ಣ ಮಾತನಾಡಿದರು. ಹಬ್ಬದ ಪ್ರಯುಕ್ತ ಸಮಾಜಸೇವಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪರಿಸರ ಸ್ನೇಹಿ ಪಟಾಕಿಗಳನ್ನು ಸಿಡಿಸಲಾಯಿತು.

ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೆಲ್ವಿನ್ ಸಿಕ್ವೇರ, ಕಾರ್ಯದರ್ಶಿ ಎವ್ಜಿನ್ ರೆಬೆಲ್ಲೊ, 20 ಆಯೋಗಗಳ ಸಂಯೋಜಕಿ ಪ್ರೇಮ ಲುವಿಸ್ ಹಾಗೂ ಆಯೋಗದ ಸಚೇತಕ್ ಜೆಫ್ರಿ ಡಯಾಸ್ ಉಪಸ್ಥಿತರಿದ್ದರು. ಚರ್ಚ್ ಕಥೋಲಿಕ್ ಸಭೆಯ ಅಧ್ಯಕ್ಷೆ ಮಾರ್ಸೆಲಿನ್ ಶೇರಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News