ಭಾರತೀಯ ಪರಂಪರೆಯಲ್ಲಿ ದೀಪಾವಳಿ ಮಹತ್ವದ ಹಬ್ಬ: ಪಿ.ಕೆ.ಸದಾನಂದ
ಶಿರ್ವ, ಅ.25: ತುಳುನಾಡಿನಲ್ಲಿ ನಮ್ಮ ಜೀವನಕ್ಕೆ ಆಧಾರವಾಗಿರುವ ನೆಲ, ಜಲ, ಧನ, ಧಾನ್ಯ, ಆಯುಧ, ಗೋವು, ಕೃಷಿ ಪೂರಕ ಯಂತ್ರೋಪಕರಣ ಗಳು ವಾಹನಾಧಿಗಳನ್ನು ಪೂಜಿಸಿ ಧನ್ಯತಾ ಭಾವದಿಂದ ಪೂಜಿಸಿ ಕೃತಜ್ಞತೆಯನ್ನು ಸಲ್ಲಿಸುವ ಭಾರತೀಯ ಸನಾತನ ಪರಂಪರೆಯಲ್ಲಿ ದೀಪಾವಳಿ ಬಹುದೊಡ್ಡ ಹಬ್ಬ ಎಂದು ಜಾನಪದ ಚಿಂತಕ ಪಿ.ಕೆ.ಸದಾನಂದ ಹೇಳಿದ್ದಾರೆ.
ಬಂಟಕಲ್ಲು ರೋಟರಿ ಭವನದಲ್ಲಿ ಶುಕ್ರವಾರ ಜರಗಿದ ದೀಪಾವಳಿ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾ ಡುತಿದ್ದರು. ಕೃಷಿಮೂಲ, ಋಷಿ ಮೂಲ ಪರಂಪರೆ ಆದಿಯಾಗಿ ಕಾರ್ತಿಕಾ ಮಾಸದಲ್ಲಿ ದೀಪಾ ರಾಧನೆಯೊಂದಿಗೆ ಆಚರಿಸಲ್ಪಟ್ಟುವ ದೀಪಾವಳಿ ಹಬ್ಬ ಪುರಾತನ ಹಿನ್ನೆಲೆಯ ಆಧಾರ ಇತಿಹಾಸವನ್ನು ಹೊಂದಿದೆ. ದೇಶದಾದ್ಯಂತ ಜಾತಿ, ಮತ ವರ್ಣ ಭೇಧಗಳಿಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಸರ್ವಧರ್ಮೀಯರೂ ತಮ್ಮ ಸ್ಥಳೀಯ ಪರಂಪರೆಯ ಹಿನ್ನೆಲೆಯ ಅಧಾರದಲ್ಲಿ ಹಬ್ಬವನ್ನು ಆಚರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಪಿ.ಕೆ.ಸದಾನಂದ, ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ಶ್ರೀನಿವಾಸ ನಾಯ್ಕ್ ಕುಂಜಾಲು, ಬಾಲಪ್ರತಿಭೆ, ವೀಣಾವಾದಕಿ ಶ್ರೇಯಾ ಯು.ನಾಯಕ್ ಅವರನ್ನು ರೋಟರಿ ವಲಯ ಸೇನಾನಿ ಸಂದೀಪ್ ಬಂಗೇರ ದೀಪಾವಳಿ ಗೌರವದೊಂದಿಗೆ ಸನ್ಮಾನಿಸಿದರು. ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ವಿಲಿಯಮ್ ಮಾಚಾದೋ ವಹಿಸಿದ್ದರು. ಸಂಘ ಸೇವಾ ನಿರ್ದೇಶಕ ಹೆರಾಲ್ಡ್ ಕುಟಿನ್ಹೊ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಡಾ.ವಿಟ್ಠಲ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ದಿನೇಶ್ ಕುಲಾಲ್ ಪರಿಚಯಿಸಿದರು. ಬಿ.ಪುಂಡಲೀಕ ಮರಾಠೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್ ವಂದಿಸಿದರು.
ನಂತರ ಬಾಲ ಪ್ರತಿಭೆ ಶ್ರೇಯಾ ನಾಯಕ್‌ರಿಂದ ವೀಣಾವಾದನ ಕಾರ್ಯಕ್ರಮ ನಡೆಯಿತು. ಸಾಮೂಹಿಕವಾಗಿ ದೀಪಗಳ ಪ್ರಜ್ವಲನದೊಂದಿಗೆ ಶುಭಾಶಯ ವಿನಿಮಯ ನಡೆಯಿತು. ರಘುಪತಿ ಐತಾಳ್ ನೇತೃತ್ವದಲ್ಲಿ ಸಿಡಿಮದ್ದುಗಳ ಪ್ರದರ್ಶನ ನಡೆಯಿತು.