ವ್ಯಂಗ್ಯಚಿತ್ರ ಹಾಸ್ಯದ ಕಣ್ಣಿನಲ್ಲಿ ಜೀವನ ನೋಡುವ ಕಲೆ: ಫಾ.ಲೋಬೋ
ವ್ಯಂಗ್ಯ ಚಿತ್ರಕಲಾ ಕಾರ್ಯಾಗಾರ- ನಮ್ಮೂರು ಚಿತ್ರಕಲಾ ಪ್ರಶಸ್ತಿ ಪ್ರದಾನ
ಮಣಿಪಾಲ, ಅ.26: ವ್ಯಂಗ್ಯಚಿತ್ರ ಹಾಸ್ಯದ ಕಣ್ಣಿನಲ್ಲಿ ಜೀವನವನ್ನು ನೋಡುವ ಕಲೆಯಾಗಿದೆ. ವ್ಯಂಗ್ಯಚಿತ್ರ ನಮ್ಮನ್ನು ನಗಿಸುವುದರೊಂದಿಗೆ ಆಳವಾಗಿ ಚಿಂತಿಸುವಂತೆಯೂ ಮಾಡುತ್ತದೆ. ನಮ್ಮನ್ನು ಸೃಜನಾತ್ಮಕವಾಗಿ ಯೋಚಿಸಲು, ಜೀವನದ ಹಗುರವಾದ ಬದಿಯನ್ನು ಕಾಣಲು ಮತ್ತು ಸರಳ ಚಿತ್ರಗಳಲ್ಲಿ ದೊಡ್ಡ ಸಂದೇಶ ನೀಡಲು ಕಲಿಸುತ್ತದೆ ಎಂದು ಪೆರಂಪಳ್ಳಿ ಟ್ರಿನಿಟಿ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲ ರೆ.ಫಾ.ಡೊಮೆನಿಕ್ ಸುನಿಲ್ ಲೋಬೋ ಹೇಳಿದ್ದಾರೆ.
ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ವತಿಯಿಂದ ರವಿವಾರ ಸಂಸ್ಥೆಯಲ್ಲಿ ಆಯೋಜಿಸಲಾದ ನಮ್ಮೂರು ಚಿತ್ರ ಕಲಾ ಪ್ರಶಸ್ತಿ ಪ್ರದಾನ ಮತ್ತು ಒಂದು ದಿನದ ವ್ಯಂಗ್ಯ ಚಿತ್ರಕಲಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಲೆ ಎಂಬುದು ಭಾಷೆ, ಸಂಸ್ಕೃತಿ, ವಯಸ್ಸು ಸೇರಿ ದಂತೆ ಎಲ್ಲವನ್ನೂ ಮೀರಿ ಮನಸ್ಸನ್ನು ಸಂಪರ್ಕಿಸುತ್ತದೆ. ಕಲೆ ನಮ್ಮ ಮನ ದಾಳದ ಭಾವನೆ, ಸಂತೋಷ, ಆನಂದ, ಕೃತಜ್ಞತೆ, ದುಃಖವನ್ನು ಶಬ್ದಗಳಿಗಿಂತ ಹೆಚ್ಚಾಗಿ ವ್ಯಕ್ತಪಡಿಸು ತ್ತದೆ. ಕಲೆಯು ಸೃಜನಶೀಲತೆಯ ದಾರಿಯಾಗಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಹಿರಿಯ ವ್ಯಂಗ್ಯ ಚಿತ್ರಕಾರ ಜೇಮ್ಸ್ ವಾಜ್ ಮಾತನಾಡಿ, ವ್ಯಂಗ್ಯಚಿತ್ರ ಒಂದು ವಿಶಿಷ್ಟ ಕಲೆ ಯಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುವವರನ್ನೇ ಅವಲೋಕಿಸಿ ನೋಡಿದಾಗ ನಮಗೆ ಅಲ್ಲಿಯೇ ವ್ಯಂಗ್ಯಚಿತ್ರ ಹುಟ್ಟಿಕೊಳ್ಳುತ್ತದೆ. ಆ ಮೂಲಕ ನಾವು ವ್ಯಂಗ್ಯ ಚಿತ್ರ ಕಲೆಯನ್ನು ನಮ್ಮಲ್ಲಿ ಅರಗಿಸಿಕೊಳ್ಳಬಹುದು ಎಂದು ಹೇಳಿದರು.
ಹಿರಿಯ ವ್ಯಂಗ್ಯಚಿತ್ರಕಾರ ಜೀವನ್ ಶೆಟ್ಟಿ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಮ್ಮೂರು ಚಿತ್ರಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತ್ರಿವರ್ಣ ಆರ್ಟ್ ಕ್ಲಾಸ್ಸಸ್‌ನ ಮಾರ್ಗದರ್ಶಕ ಹಾಗೂ ಕಲಾವಿದ ಹರೀಶ್ ಸಾಗಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಣತಿ ಬಿ.ಶೆಟ್ಟಿ ವಂದಿಸಿದರು. ಶ್ರೀಲತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಉಡುಪಿಯ ಹಿರಿಯ ವ್ಯಂಗ್ಯಚಿತ್ರಕಾರರಾದ ಜೇಮ್ಸ್ ವಾಜ್ ಮತ್ತು ಜೀವನ್ ಶೆಟ್ಟಿ ಪ್ರಾತ್ಯಕ್ಷಿಕೆ, ರಚನಾ ಕ್ರಮ, ಪ್ರದರ್ಶನದ ಮೂಲಕ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಈ ಕಾರ್ಯಾಗಾರದಲ್ಲಿ ಮಕ್ಕಳು, ಹಿರಿಯರು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು.